ADVERTISEMENT

ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 15:00 IST
Last Updated 7 ಅಕ್ಟೋಬರ್ 2020, 15:00 IST

ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ// ತಿಳಿಯಲೀಯದು ಎಚ್ಚರಲೀಯದು// ಎನ್ನವ ಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗ ತಂದೆ// ಸುಳಿದೆಗೆದು ಬೆಳೆವೆನು ಕೂಡಲಸಂಗಮ ದೇವಾ...

ಈ ಭೂಮಿಯು ಮನುಷ್ಯನ ಎಲ್ಲ ಅಗತ್ಯಗಳಿಗೆ ಮೂಲಭೂತವಾಗಿರುವುದು. ಆತನ ಅವಿಭಾಜ್ಯ ಅಂಗವಾಗಿದೆ. ಈ ಭೂಮಿಯೆ ಇರದಿದ್ದರೆ ನಾವು ಇರುತ್ತಿರಲಿಲ್ಲ. ಇಂತಹ ಭೂಮಿಯು ನಮಗೆ ಆಹಾರ ನೀಡುತ್ತದೆ. ಇಲ್ಲೇ ಅನವಶ್ಯವಾದ ಕಸವೂ ಹುಟ್ಟುತ್ತದೆ. ಇಲ್ಲಿ ನಾವು ಅವಶ್ಯವಾದ ಆಹಾರ ಮತ್ತು ಅನಿವಾರ್ಯ ಆದವುಗಳನ್ನು ಸ್ವೀಕರಿಸುತ್ತೇವೆ. ಹಾಗೆಯೆ ಶರೀರವೆಂಬುದು ಭೂಮಿಯೇ. ಇದನ್ನು ಬಳಸುವ ಪರಿಯನ್ನು ಮಾತ್ರ ಮನುಷ್ಯ ತಿಳಿಯುತ್ತಿಲ್ಲ. ಭಗವಂತ ನೀಡಿದ ಈ ಶರೀರವನ್ನು ಮಾನವ ತನ್ನ ಸ್ವಾರ್ಥ, ದುರಾಸೆಯ ಆಲೋಚನೆಗಳಿಂದ ವ್ಯರ್ಥಗೊಳಿಸಿಕೊಳ್ಳುತ್ತಿದ್ದಾನೆ.

ಮನೆಯಲ್ಲಿ ಅಮೂಲ್ಯವಾದ ವಸ್ತುಗಳನ್ನು ಇಡಲು ತಂದಿರುವ ತಿಜೋರಿಯಲ್ಲಿ ವ್ಯರ್ಥವಾದ ವಸ್ತುಗಳನ್ನು ಇಟ್ಟರೆ, ತಿಜೋರಿಯು ಹೇಗೆ ತನ್ನ ಮೌಲ್ಯವನ್ನು ಕಳೆದುಕೊಳ್ಳುವದೋ ಹಾಗೆಯೇ ಮಾನವನು ಜೀವರಾಶಿಗಳಲ್ಲಿಯೆ ಅಮೂಲ್ಯವಾದ ಈ ಶರೀರವನ್ನು ಭಗವಂತನ ಸೇವೆ ಹಾಗು ನಾಮಸ್ಮರಣೆಗೆ ಬಳಸದೆ ದುಶ್ಚಟಗಳ ಕೂಪವನ್ನಾಗಿಸಿಕೊಂಡು ಅಪವಿತ್ರಗೊಳಿಸಿಕೊಂಡಿದ್ದಾನೆ.

ADVERTISEMENT

ಒಳ್ಳೆಯ ಫಲ ಕೊಡುವ ಭೂಮಿಯಲ್ಲಿ ಕಸ ಹುಟ್ಟುವುದರಿಂದ ಭೂಮಿಯ ಫಲವತ್ತತೆಯೆ ನಾಶವಾಗುತ್ತದೆ. ಅಲ್ಲಿ ಹೆಚ್ಚು ಕಸ ಹುಟ್ಟಿದರೆ ಅಂತಹ ಭೂಮಿಯು ಶಾಶ್ವತವಾಗಿ ತನ್ನ ಫಲವತ್ತತೆ ಕಳೆದುಕೊಳ್ಳತ್ತದೆ. ಹಾಗೆಯೆ ಮಾನವನ ಶರೀರವೆಂಬ ಈ ಭೂಮಿಯಲ್ಲಿ ದುಷ್ಟ, ದುರಾಚಾರಗಳೆಂಬ ಕಸ ಹುಟ್ಟಿದರೆ ಆತನು ನಾಶವಾಗುತ್ತಾನೆ. ಸದ್ಗುಣ ಸದಾಚಾರಗಳನ್ನು ಅಳವಡಿಸಿಕೊಂಡರೆ ಮಹಾತ್ಮನಾಗುತ್ತಾನೆ.

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.