ADVERTISEMENT

ಬೆಳಗಾವಿ: ಯುದ್ಧ ಸಲಕರಣೆಗಳಿಗೆ ಬೆರಗಾದ ವಿದ್ಯಾರ್ಥಿಗಳು

‘ವಿಷನ್ ಕರ್ನಾಟಕ-2025’ ಪ್ರದರ್ಶನಕ್ಕೆ ಚಾಲನೆ, ಸಾರ್ವಜನಿಕರಿಂದ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:34 IST
Last Updated 11 ಜೂನ್ 2025, 14:34 IST
ಬೆಳಗಾವಿಯ ಕೆಎಲ್‌ಇ ಸೆಂಟೇನರಿ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆಯೋಜಿಸಿದ್ದ ‘ವಿಷನ್ ಕರ್ನಾಟಕ-2025’ ಪ್ರದರ್ಶನಕ್ಕೆ ಸಂಸದ ಜಗದೀಶ ಶೆಟ್ಟರ್‌ ಬುಧವಾರ ಚಾಲನೆ ನೀಡಿದರು. ಅಭಯ ಪಾಟೀಲ, ಪ್ರಭಾಕರ ಕೋರೆ, ಮಂಗಲಾ ಅಂಗಡಿ ಹಾಗೂ ಬಿಜೆಪಿ ನಾಯಕರು ಪಾಲ್ಗೊಂಡರು   ಪ್ರಜಾವಾಣಿ ಚಿತ್ರ
ಬೆಳಗಾವಿಯ ಕೆಎಲ್‌ಇ ಸೆಂಟೇನರಿ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆಯೋಜಿಸಿದ್ದ ‘ವಿಷನ್ ಕರ್ನಾಟಕ-2025’ ಪ್ರದರ್ಶನಕ್ಕೆ ಸಂಸದ ಜಗದೀಶ ಶೆಟ್ಟರ್‌ ಬುಧವಾರ ಚಾಲನೆ ನೀಡಿದರು. ಅಭಯ ಪಾಟೀಲ, ಪ್ರಭಾಕರ ಕೋರೆ, ಮಂಗಲಾ ಅಂಗಡಿ ಹಾಗೂ ಬಿಜೆಪಿ ನಾಯಕರು ಪಾಲ್ಗೊಂಡರು   ಪ್ರಜಾವಾಣಿ ಚಿತ್ರ   

ಬೆಳಗಾವಿ: ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಲು ಇಲ್ಲಿನ ಜೆಎನ್‌ಎಂಸಿ ಕ್ಯಾಂಪಸ್‌ನ ಕೆಎಲ್‌ಇ ಸೆಂಟೇನರಿ ಕನ್ವೆನ್ಷನ್‌ ಸೆಂಟರ್‌ನಲ್ಲಿ ಪ್ರಯಾಸ್ ಎಕ್ಸಿಬಿಷನ್ಸ್‌ ಅಂಡ್‌ ಪ್ರಮೋಷನ್ಸ್‌ ಸಂಸ್ಥೆ ಮೂರು ದಿನಗಳವರೆಗೆ ಆಯೋಜಿಸಿರುವ ‘ವಿಷನ್ ಕರ್ನಾಟಕ– 2025’ ಪ್ರದರ್ಶನಕ್ಕೆ ಬುಧವಾರ ಚಾಲನೆ ಸಿಕ್ಕಿತು.

ಕೇಂದ್ರ ಸರ್ಕಾರದ 50ಕ್ಕೂ ಅಧಿಕ ಸಚಿವಾಲಯಗಳು, ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಪಾಲ್ಗೊಂಡ ಪ್ರದರ್ಶನಕ್ಕೆ, ವಿವಿಧ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾರ್ವಜನಿಕರು ಮೊದಲ ದಿನವೇ ಉತ್ಸಾಹದಿಂದ ಭೇಟಿ ನೀಡಿದರು. 

ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌), ಡಿಫೆನ್ಸ್‌ ರಿಸರ್ಚ್‌ ಅಂಡ್‌ ಡೆವಲಪ್‌ಮೆಂಟ್‌ ಆರ್ಗನೈಸೇಷನ್‌ (ಡಿಆರ್‌ಡಿಒ), ಇಂಡಿಯನ್‌ ಅಗ್ರಿಕಲ್ಚರಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಮತ್ತಿತರ ಸಂಸ್ಥೆಯವರು ಪ್ರದರ್ಶಿಸಿದ ಮಾದರಿಗಳು ವಿದ್ಯಾರ್ಥಿಗಳನ್ನು ಆಕರ್ಷಿಸಿದವು.

ADVERTISEMENT

ಕೇಂದ್ರದ ವಿವಿಧ ಯೋಜನೆಗಳ ಅನುಷ್ಠಾನ, ಅವುಗಳ ಸದುಪಯೋಗ ಪಡೆಯಲು ಬ್ಯಾಂಕ್‌ಗಳ ಮೂಲಕ ಲಭ್ಯ ಇರುವ ಹಣಕಾಸು ಆಯ್ಕೆಗಳು ಮತ್ತು ಉದ್ಯಮಶೀಲತಾ ಅವಕಾಶಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆದರು.

ಪ್ರದರ್ಶನ ಉದ್ಘಾಟಿಸಿದ ಸಂಸದ ಜಗದೀಶ ಶೆಟ್ಟರ್‌, ‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ಮುನ್ನ, ದೇಶದಲ್ಲಿ 34 ಕೋಟಿ ಕಡು ಬಡವರಿದ್ದರು. ಈಗ ಆ ಪ್ರಮಾಣ 7.5 ಕೋಟಿಗೆ ಇಳಿಕೆಯಾಗಿದೆ. ವಿಶ್ವದ ಆರ್ಥಿಕತೆಯಲ್ಲಿ 12ರಿಂದ 13ನೇ ಸ್ಥಾನದಲ್ಲಿದ್ದ ಭಾರತ, ಈಗ ನಾಲ್ಕನೇ ಸ್ಥಾನಕ್ಕೆ ಏರಿದೆ. ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ರೂಪಿಸಿದ ಮಹತ್ವಾಕಾಂಕ್ಷಿ ಯೋಜನೆಗಳ ಫಲವಾಗಿ ಈ ಸಾಧನೆಯಾಗಿದೆ’ ಎಂದರು.

‘ಬೆಳಗಾವಿಯಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಜಾಗವಿದೆ. ಬಳಕೆಯಾಗದೆ ಉಳಿದ ಆ ಜಾಗದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪನ್ನ ಸಿದ್ಧಪಡಿಸಲು ಕೈಗಾರಿಕೆ ಸ್ಥಾಪನೆಗೆ ಯೋಜನೆ ರೂಪಿಸುವಂತೆ ಕೇಂದ್ರ ರಕ್ಷಣಾ ಸಚಿವರನ್ನು ಒತ್ತಾಯಿಸುತ್ತೇನೆ’ ಎಂದರು.

ಶಾಸಕ ಅಭಯ ಪಾಟೀಲ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ, ಉಪಮೇಯರ್‌ ವಾಣಿ ಜೋಶಿ, ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಎಂ.ಎಲ್‌.ಮುತ್ತೆಣ್ಣವರ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ವನೀಶ ಗುಪ್ತಾ ಇತರರಿದ್ದರು. ಸುನೀತಾ ದೇಸಾಯಿ ನಿರೂಪಿಸಿದರು.

ಬೆಳಗಾವಿಯ ಕೆಎಲ್‌ಇ ಸೆಂಟೇನರಿ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆಯೋಜಿಸಿದ್ದ ‘ವಿಷನ್ ಕರ್ನಾಟಕ– 2025’ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಯುದ್ಧ ವಿಮಾನದ ಮಾದರಿ ವೀಕ್ಷಿಸಿದರು   ಪ್ರಜಾವಾಣಿ ಚಿತ್ರ
ಮೇಕ್ ಇನ್ ಇಂಡಿಯಾ ಸ್ಕಿಲ್ ಇಂಡಿಯಾ ಯೋಜನೆಗಳಿಂದ ಭಾರತ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಕೇಂದ್ರದ ಸಾಧನೆಗಳನ್ನು ತಿಳಿಸಲು ಬೆಳಗಾವಿಯಲ್ಲಿ ಪ್ರದರ್ಶನ ಆಯೋಜಿಸಿರುವುದು ಅಭಿಮಾನದ ಸಂಗತಿ
ಪ್ರಭಾಕರ ಕೋರೆ ಕಾರ್ಯಾಧ್ಯಕ್ಷ ಕೆಎಲ್‌ಇ ಸಂಸ್ಥೆ
ರಾಜ್ಯದ ವಿವಿಧೆಡೆ ಬೇರೆಬೇರೆ ಪ್ರದರ್ಶನ ನಡೆಯುತ್ತವೆ. ಬೆಳಗಾವಿಯಲ್ಲಿ ನಡೆಯುತ್ತಿರುವುದು ಜ್ಞಾನದ ಮಟ್ಟ ವೃದ್ಧಿಸುವ ಪ್ರದರ್ಶನವಾಗಿದೆ
ಅಭಯ ಪಾಟೀಲ ಶಾಸಕ

‘ಜನೌಷಧ ಕೇಂದ್ರ ಮುಚ್ಚಲು ವಿರೋಧ’

‘ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಇರುವ ಜನೌಷಧ ಕೇಂದ್ರಗಳಿಂದ ಬಡ ಜನರಿಗೆ ಅನುಕೂಲವಾಗಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಅವುಗಳನ್ನು ಮುಚ್ಚಲು ಮುಂದಾಗಿರುವುದು ಸರಿಯಲ್ಲ. ಈಗ ಇರುವ ಸ್ಥಳಗಳಲ್ಲೇ ಅವುಗಳನ್ನು ಮುಂದುವರಿಸಬೇಕು’ ಎಂದು ಜಗದೀಶ ಶೆಟ್ಟರ್‌ ಒತ್ತಾಯಿಸಿದರು. ‘ಕಳೆದ 11 ವರ್ಷಗಳಲ್ಲಿ ಕೇಂದ್ರ ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸುವ ಜತೆಗೆ ವಿವಿಧ ಯೋಜನೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲು ರಾಜ್ಯದಲ್ಲೇ ಪ್ರಥಮ ಬಾರಿ ಬೆಳಗಾವಿಯಲ್ಲಿ ಇಂಥದ್ದೊಂದು ಪ್ರದರ್ಶನ ಆಯೋಜಿಸಲಾಗಿದೆ. ಜ್ಞಾನದ ಜಾತ್ರೆಯಾಗಿರುವ ಇದಕ್ಕೆ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ’ ಎಂದರು.

ಬೆರಗು ಮೂಡಿಸಿದ ಅತ್ಯಾಧುನಿಕ ಸಾಧನಗಳು

ವಿಜ್ಞಾನ ಮತ್ತು ತಂತ್ರಜ್ಞಾನ ಹೆಲ್ತ್‌ ಕೇರ್‌ ಕೃಷಿ ಎಲೆಕ್ಟ್ರಾನಿಕ್‌ ಮತ್ತು ಇನ್‌ಫಾರ್ಮೇಷನ್‌ ಟೆಕ್ನಾಲಜಿ ರೈಲ್ವೆ ಬ್ಯಾಂಕಿಂಗ್ ವಾಣಿಜ್ಯ ಮತ್ತು ವ್ಯಾಪಾರ ವಸತಿ ಮತ್ತು ನಗರ ವ್ಯವಹಾರಗಳು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಎಂಎಸ್‌ಎಂಇ ಔಷಧ ಹಡಗು ಮತ್ತು ಜಲಮಾರ್ಗ ಜಲಸಂಪನ್ಮೂಲ ಜವಳಿ ಮತ್ತಿತರ ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು. ಪ್ರದರ್ಶನದಲ್ಲಿ 60 ಮಳಿಗೆ ತೆರೆಯಲಾಗಿದ್ದು ಡಿಆರ್‌ಡಿಒ ಮಳಿಗೆಯಲ್ಲಿ ‘ಮೇಕ್‌ ಇನ್‌ ಇಂಡಿಯಾ‘ ಪರಿಕಲ್ಪನೆಯಡಿ ಸಿದ್ಧಪಡಿಸಿದ ಮತ್ತು ಯುದ್ಧದಲ್ಲಿ ಬಸಲಾಗುವ ಯುದ್ಧ ವಿಮಾನ ಹೆಲಿಕಾಪ್ಟರ್‌ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಯಿತು. ಜಿಯಾಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ಮಳಿಗೆಯಲ್ಲಿ ಗಣಿಗಾರಿಕೆಯಲ್ಲಿ ಸಿಕ್ಕ ಸಾಮಗ್ರಿಗಳು ಪ್ರದರ್ಶನಗೊಂಡವು. ರಿಜರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(ಆರ್‌ಬಿಐ)ನವರು ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಸೈಬರ್‌ ವಂಚನೆಯಿಂದ ಪಾರಾಗುವ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.