ಚಿಕ್ಕೋಡಿ: ‘ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಜನರೊಂದಿಗೆ ನನ್ನ ಉತ್ತಮ ಬಾಂಧವ್ಯವಿದ್ದು, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ಮನವಿ ಮೇರೆಗೆ ಕೃಷ್ಣಾ ನದಿಗೆ ರಾಜಾಪೂರೆ ಬ್ಯಾರೇಜ್ ಮೂಲಕ ಶೀಘ್ರವೇ ನೀರು ಬಿಡಲಾಗುವುದು’ ಎಂದು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರಿಫ್ ಹೇಳಿದರು.
ತಾಲ್ಲೂಕಿನ ತೋರಣಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ದೇವರ ದರ್ಶನ ಪಡೆದುಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದ ಕಾಳಮ್ಮವಾಡಿ ಆಣೆಕಟ್ಟು ಹಾಗೂ ರಾಜಾಪೂರೆ ಬ್ಯಾರೇಜ್‌ನಿಂದ ಕರ್ನಾಟಕಕ್ಕೆ ಕಾಲ ಕಾಲಕ್ಕೆ ನೀರು ಬಿಡುತ್ತಾ ಬಂದಿದ್ದು, ಬೇಸಿಗೆಯ ಹಿನ್ನೆಲೆಯಲ್ಲಿ ಈಗಲೂ ನೀರು ಬಿಡಲಾಗುವುದು’ ಎಂದು ಭರವಸೆ ನೀಡಿದರು.
‘ಕೆಲ ತಿಂಗಳ ಹಿಂದೆ ತನ್ನ ಜೀವನದಲ್ಲಿ ದೊಡ್ಡ ಸಂಕಟವೊಂದು ಎದುರಾಗಿತ್ತು. ಅದರ ನಿವಾರಣೆಗೆ ವ್ಯಕ್ತಿಯೊಬ್ಬರು ಈ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುವಂತೆ ಹೇಳಿದ್ದರು. ಹಾಗಾಗಿ ಆರು ಶನಿವಾರ ಇಲ್ಲಿಗೆ ಭೇಟಿ ನೀಡಿದ್ದರಿಂದ ಸಂಕಟ ದೂರಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದೇನೆ’ ಎಂದು ಹೇಳಿದರು.
ದೇವಸ್ಥಾನದ ಅಭಿವೃದ್ಧಿಗಾಗಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದ ಸಚಿವರನ್ನು ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ಹಾಗೂ ಭಕ್ತರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ‘ಬೇಸಿಗೆಯಲ್ಲಿಯೂ ಕೃಷ್ಣಾ ನದಿಗೆ 3 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಅವರಲ್ಲಿ ಕೇಳಿಕೊಳ್ಳಲಾಗಿತ್ತು. ನೀರು ಬಿಡುವ ಭರವಸೆ ನೀಡಿದ್ದಾರೆ. ಇದರಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಯ ಕೃಷ್ಣಾ ನದಿ ತೀರದ ಜನರಿಗೆ ಅನುಕೂಲವಾಗಲಿದೆ’ ಎಂದರು.
ರಾಮಗೌಡ ಸಣ್ಣಲಚ್ಚಪ್ಪಗೋಳ, ಭೀಮಾ ಸಣ್ಣಲಚ್ಚಪ್ಪಗೋಳ, ಬಸು ಮಾಳಗೆ, ಕುಮಾರ ಪಾಟೀಲ, ಮಲಗೌಡ ಪಾಟೀಲ, ಬಾಲಕೃಷ್ಣ ದೊಡ್ಡಲಚ್ಚಪ್ಪಗೋಳ, ಸುಧಾಕರ ಖಾಡ, ಗುಲಾಬಹುಸೇನ ಭಾಗವಾನ, ಅನಿಲ ಮಾನೆ , ವರ್ಧಮಾನ ಸದಲೆ, ಅನಿಲ ಪಾಟೀಲ, ಸಿದ್ದು ನಾಯಿಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.