ADVERTISEMENT

ರೈತರಿಂದಲೇ ತೂಕದ ಸೇತುವೆ ಪ್ರಾರಂಭ

ಸಕ್ಕರೆ ಕಾರ್ಖಾನೆಗಳಲ್ಲಿ ನಡುಕ: ಮೋಹನರಾವ್ ಶಹಾ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 13:34 IST
Last Updated 17 ಡಿಸೆಂಬರ್ 2018, 13:34 IST
ಐನಾಪುರದಲ್ಲಿ ತೂಕದ ಸೇತುವೆಯನ್ನು ಸೋಮವಾರ ಉದ್ಘಾಟಿಲಾಯಿತು. ರಾಜ್ಯ ಕಬ್ಬು ಅಧ್ಯಯನ ಸಮಿತಿ ಸಂಚಾಲಕ ಮೋಹನರಾವ್ ಶಹಾ, ರವಿಂದ್ರ ಗಾಣಿಗೇರ, ಅನಿಲ ಕಡೊಲಿ ಮೊದಲಾದವರು ಇದ್ದಾರೆ
ಐನಾಪುರದಲ್ಲಿ ತೂಕದ ಸೇತುವೆಯನ್ನು ಸೋಮವಾರ ಉದ್ಘಾಟಿಲಾಯಿತು. ರಾಜ್ಯ ಕಬ್ಬು ಅಧ್ಯಯನ ಸಮಿತಿ ಸಂಚಾಲಕ ಮೋಹನರಾವ್ ಶಹಾ, ರವಿಂದ್ರ ಗಾಣಿಗೇರ, ಅನಿಲ ಕಡೊಲಿ ಮೊದಲಾದವರು ಇದ್ದಾರೆ   

ಮೋಳೆ: ಐನಾಪುರದಲ್ಲಿ ಅಥಣಿ ಎಪಿಎಂಸಿಯಿಂದ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ನಿರ್ಮಿಸಿರುವ 60 ಟನ್ ಸಾಮರ್ಥ್ಯದ ತೂಕದ ಸೇತುವೆಯನ್ನು ಸೋಮವಾರ ಉದ್ಘಾಟಿಸಲಾಯಿತು.

ರಾಜ್ಯ ಕಬ್ಬು ಅಧ್ಯಯನ ಸಮಿತಿ ಸಂಚಾಲಕ ಮೋಹನರಾವ್ ಶಹಾ ಮಾತನಾಡಿ, ‘ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡದೇ ಮೋಸ ಮಾಡಲಾಗುತ್ತಿದೆ. ಇನ್ನೊಂದೆಡೆ ಕಬ್ಬಿನ ತೂಕದಲ್ಲಿ ವ್ಯತ್ಯಾಸ ಮಾಡಿ ವಂಚಿಸಲಾಗುತ್ತಿದೆ. ರೈತರು ಜಾಗೃತರಾಗಿದ್ದಾರೆ. ಇನ್ಮುಂದೆ ಅನ್ಯಾಯ ಸಹಿಸುವುದಿಲ್ಲ’ ಎಂದು ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದರು.

‘1978ರಲ್ಲಿ ಪ್ರಾರಂಭಿಸಿದ ಉಗಾರ ಕಬ್ಬು ಬೆಳೆಗಾರರ ಸಂಘದ ಮೂಲಕ ಹಲವು ಹೋರಾಟಗಳನ್ನು ಮಾಡಿ ಜೈಲಿಗೆ ಹೋಗಿದ್ದೇವೆ. ಸಿಹಿ, ಕಹಿ ಅನುಭವಗಳಾಗಿವೆ. ಕಳೆದ ತಿಂಗಳು ಕಬ್ಬಿನ ಬಾಕಿ ಬಿಲ್‌ಗಾಗಿ ಐನಾಪುರದಲ್ಲಿ ಹೊತ್ತಿದ ಕಿಡಿ ರಾಜ್ಯದಾದ್ಯಂತ ವ್ಯಾಪಿಸಿತು. ಮುಖ್ಯಮಂತ್ರಿ ಭರವಸೆ ಮೇರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಕಬ್ಬಿನ ಬಾಕಿ ಬಿಲ್‌ಗಾಗಿ ಹೋರಾಟ ನಡೆದ ವೇಳೆ ಯುವಕರ ಮೇಲಿನ ಮಾರಣಾಂತಿಕ ಹಲ್ಲೆಗಳು ನಡೆದದ್ದು ಮನಸ್ಸಿಗೆ ನೋವನ್ನುಂಟು ಮಾಡಿತು’ ಎಂದು ಭಾವುಕರಾದರು.

‘ಹಲವು ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿವೆ. ಐನಾಪುರದಲ್ಲಿ ನಾವೇ ತೂಕದ ಯಂತ್ರ ಪ್ರಾರಂಭಿಸಿರುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ನಡುಕ ಹುಟ್ಟಿದೆ. ಅಥಣಿ ಮತ್ತು ಕಾಗವಾಡ ತಾಲ್ಲೂಕಿನ 4 ವಿಭಾಗಗಳಲ್ಲಿ ತೂಕದ ಸೇತುವೆಗಳನ್ನು ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ಐನಾಪುರ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವೀಂದ್ರ ಗಾಣಿಗೇರ ಮಾತನಾಡಿ, ‘ತೂಕದ ಸೇತುವೆ ದುರಸ್ತಿಗಾಗಿ ಮೋಹನರಾವ್ ಶಹಾ ಅವರು ಕಬ್ಬು ಬೆಳೆಗಾರರ ಸಂಘದಿಂದ ₹ 1.50 ಲಕ್ಷ ಹಣ ನೀಡಿದ್ದಾರೆ. ಯುವಕರ ತಂಡ ಮೂರು ದಿನಗಳಲ್ಲಿ ತೂಕದ ಸೇತುವೆ ಸಿದ್ಧಪಡಿಸಿದೆ’ ಎಂದು ಹೇಳಿದರು.

ಬಸವೇಶ್ವರ ಸ್ವಾಮೀಜಿ ಮಾತನಾಡಿ, ‘ದೇಶಕ್ಕೆ ಅನ್ನ ನೀಡುವ ರೈತರಿಗ ಮೋಸ ಮಾಡಿದವರು ಉದ್ಧಾರವಾಗುವುದಿಲ್ಲ’ ಎಂದರು.

ಎಪಿಎಂಸಿ ಅಧ್ಯಕ್ಷ ಅನಿಲ ಕಡೋಲಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮನಿಷಾ ಹರಳೆ, ಮುಖಂಡರಾದ ಅಲ್ಲಾವುದ್ದೀನ ರೋಹಿಲೆ, ಗಜಾನನ ಯರಂಡೋಲಿ, ಆಧಿನಾಥ ದಾನೊಳ್ಳಿ, ಚಿದಾನಂದ ಡೂಗನವರ, ಸಂಜಯ ಭಿರಡಿ, ಬಾಹುಬಲಿ ಕುಸನಾಳೆ, ವಿಶ್ವನಾಥ ನಾಮದಾರ, ತಮ್ಮಣ್ಣ ಪಾರಶೆಟ್ಟಿ, ಸುನೀಲ ಮಾಳಿ, ದೋಂಡಿರಾಮ ಹರಳೆ, ಮಂಜುನಾಥ ಕುಚನೂರೆ, ಮಲ್ಲು ಕೋಲಾರ,ಕುಮಾರ ಅಪರಾಜ, ಅಣ್ಣಾಸಾಬ ಡೂಗನವರ, ರಾಮು ಸವದತ್ತಿ, ಗುರುರಾಜ ಮಡಿವಾಳರ, ಸಂಜು ಕುಸನಾಳೆ, ಶಂಕರ ಕೋರ್ಬು, ಸಿದ್ದು ಅಡಿಸೇರಿ, ಶೀತಲ ಬಾಲೋಜಿ, ಮಲ್ಲಪ್ಪ ಬೆಳಗಲಿ, ಸಮೀರ ಕುಚನೂರೆ, ವಿಕಾಸ ಜಾಧವ, ಧರೆಪ್ಪ ಕೆಂಪವಾಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.