ಬೆಳಗಾವಿ: ‘ಖಾನಾಪುರ ತಾಲ್ಲೂಕಿನ ಗಾಡಿಕೊಪ್ಪ ಬಳಿ ಈಚೆಗೆ ನಡೆದ ಶಿವನಗೌಡ ಪಾಟೀಲ(47) ಕೊಲೆ ಪ್ರಕರಣ ಸಂಬಂಧ, ಪತ್ನಿ, ಆಕೆ ಪ್ರಿಯಕರನನ್ನು ಬಂಧಿಸಿದ್ದೇವೆ. ಇದರಲ್ಲಿ ಇನ್ನೂ ಹೆಚ್ಚಿನ ಆರೋಪಿಗಳ ಭಾಗಿಯಾದ ಬಗ್ಗೆ ತನಿಖೆ ಮಾಡುತ್ತಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಪ್ರಿಲ್ 2ರಂದು ಪತ್ನಿ ಶೈಲಾ ಪಾಟೀಲಳ ಪ್ರಿಯಕರ ರುದ್ರಪ್ಪ ಹೊಸಟ್ಟಿ ಕಲ್ಲಿನಿಂದ ಹೊಡೆದು ಶಿವನಗೌಡ ಕೊಲೆ ಮಾಡಿದ್ದ. ಈತ ಶಿವನಗೌಡ ಸಂಬಂಧಿಯೂ ಆಗಿದ್ದು, ಆರಂಭದಲ್ಲಿ ಇಬ್ಬರೂ ಊಟ ಮತ್ತು ಮದ್ಯ ಸೇವಿಸಿದ್ದರು. ರುದ್ರಪ್ಪನು ತಂಪು ಪಾನೀಯದಲ್ಲಿ ವಿಷ ಬೆರೆಸಿ ಕುಡಿಸಿದ್ದ. ಆದರೆ, ಶಿವನಗೌಡ ವಾಂತಿ ಮಾಡಿಕೊಂಡ ಕಾರಣ, ಕೊಲೆ ಯತ್ನ ವಿಫಲವಾಗಿದೆ. ನಂತರ ಕಲ್ಲೆಸೆದು ಕೊಲೆ ಮಾಡಿದ್ದಾನೆ’ ಎಂದರು.
‘ವೃತ್ತಿಯಲ್ಲಿ ಲಾರಿ ಚಾಲಕನಾದ ರುದ್ರಪ್ಪನು ಪಾಟೀಲ ಕುಟುಂಬದೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡಿದ್ದ. ಸಾಧ್ಯವಾದಾಗಲೆಲ್ಲ ಶಿವನಗೌಡ ಮನೆಗೆ ಬಂದು ಉಳಿದುಕೊಳ್ಳುತ್ತಿದ್ದ. ಶಿವನಗೌಡ ಪತ್ನಿ ಶೈಲಾ ಅವಳೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಕಂಡುಬಂದಿದೆ. ಇಬ್ಬರೂ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು ಮತ್ತು ವಿಡಿಯೊ ಕರೆ ಮಾಡುತ್ತಿದ್ದರು ಎಂಬುದಕ್ಕೆ ದಾಖಲೆ ಸಿಕ್ಕಿವೆ. ಶಿವನಗೌಡ ಕೊಲೆ ಮಾಡುವಂತೆ ಪತ್ನಿಯೇ ರುದ್ರಪ್ಪನಿಗೆ ತಿಳಿಸಿದ್ದಳು. ಕೊಲೆ ಮಾಡಿದ ನಂತರ ರುದ್ರಪ್ಪ ಪರೆಯಾಗಿದ್ದ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.