ADVERTISEMENT

‘ಅಂಗಾಗ ದಾನಕ್ಕೆ ಜಾಗೃತಿ ಕೊರತೆ’

ಮಾನಸ ಬಿ.ಆರ್‌
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಂಗಾಂಗಗಳ ಕಸಿಗಾಗಿ ಕಾಯುತ್ತಿರುವವರ ಸಂಖ್ಯೆ 5 ಲಕ್ಷ. ಆದರೆ, ದಾನಿಗಳಿರುವುದು ಕೇವಲ 12 ಸಾವಿರ. ಇದು ನಮ್ಮ ದೇಶದ ಪರಿಸ್ಥಿತಿ!

‘ವಿದೇಶಗಳಲ್ಲಿ ಅಂಗಾಂಗಗಳನ್ನು ದಾನ ಮಾಡುವವರ ಸಂಖ್ಯೆ ಹೆಚ್ಚಿದೆ. ಜನರಲ್ಲಿ ಈ ಬಗ್ಗೆ ಅರಿವಿನ ಕೊರತೆಯಿದೆ. ದಾನಿಗಳ ಸಂಖ್ಯೆಯಲ್ಲಿ ಇತ್ತೀಚೆಗೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ’ ಎನ್ನುತ್ತಾರೆ ಅಪೊಲೊ ಆಸ್ಪತ್ರೆಯ ಮೂತ್ರಪಿಂಡ ತಜ್ಞ ದಿಲೀಪ್‌ ಸಿ. ಧನ್‌ಪಾಲ್‌.

ಬಡವರು, ಶ್ರೀಮಂತರು ಎನ್ನದೆ ಎಲ್ಲರಲ್ಲೂ ಮಧುಮೇಹ, ರಕ್ತದೊತ್ತಡದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಇರುವವರಿಗೆ ಮೂತ್ರಪಿಂಡ ಹಾಳಾಗುವ ಸಾಧ್ಯತೆ ಹೆಚ್ಚು. ಆರೋಗ್ಯ ಇಲಾಖೆ ಪ್ರಕಾರ ವರ್ಷಕ್ಕೆ ಸುಮಾರು 2 ಲಕ್ಷ ಜನ ಮೂತ್ರಪಿಂಡ ಕಸಿಗಾಗಿ ಕಾಯುತ್ತಾರೆ. ಕೇವಲ 5,000 ರೋಗಿಗಳಿಗೆ ಮಾತ್ರ ಸಿಗುತ್ತಿದೆ.ರಾಜ್ಯದಲ್ಲಿ ಮೂತ್ರಪಿಂಡಕ್ಕೆ ಕಾಯುತ್ತಿರುವ ಪ್ರತಿ 30 ಮಂದಿ ಪೈಕಿ ಕೇವಲ ಒಬ್ಬರಿಗೆ ಮಾತ್ರ ಕಸಿ ಮಾಡಿಸಿಕೊಳ್ಳುವ ಅದೃಷ್ಟ ಒಲಿಯುತ್ತಿದೆ.

ADVERTISEMENT

ಜಾಗೃತಿಯ ಕೊರತೆ: ಅಂಗಾಂಗ ದಾನಿಗಳು ಸಿಗದಿರುವುದಕ್ಕೆ ಜಾಗೃತಿ ಕೊರತೆಯೇ ಪ್ರಮುಖ ಕಾರಣ. ರಕ್ತದಾನಕ್ಕೆ ಇರುವಷ್ಟು ಜಾಗೃತಿ ಅಂಗಾಂಗ ದಾನಕ್ಕಿಲ್ಲ. ಮನುಷ್ಯ ಸತ್ತ ನಂತರವೂ ಅಂಗಾಂಗಗಳನ್ನು ದಾನ ಮಾಡಲು ಬಯಸುವುದಿಲ್ಲ. ಇದಕ್ಕೆ ಸಂಪ್ರದಾಯ, ಆಚರಣೆಗಳು ಅಡ್ಡ ಬರುತ್ತಿವೆ. ಒಂದು ಮೂತ್ರಪಿಂಡ ದಾನ ಮಾಡಿದರೆ ಆರೋಗ್ಯದಲ್ಲಿ ಏರುಪೇರಾಗಲಿದೆ ಎಂದು ತಿಳಿದುಕೊಂಡಿರುವವರೇ ಹೆಚ್ಚಿದ್ದಾರೆ ಎಂಬುವುದು ಬಹಳಷ್ಟು ವೈದ್ಯರ ಅನಿಸಿಕೆ.

ಡಯಾಲಿಸಿಸ್ ಯಂತ್ರಗಳ ಕೊರತೆ: ಭಾರತದಲ್ಲಿ ಒಟ್ಟು 1,200 ಮೂತ್ರಪಿಂಡ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. 2,200 ಡಯಾಲಿಸಿಸ್ ಕೇಂದ್ರಗಳಲ್ಲಿ ಸುಮಾರು 20,000 ಡಯಾಲಿಸಿಸ್‌ ಯಂತ್ರಗಳಿವೆ. ಬಹುತೇಕ ಖಾಸಗಿ ಕೇಂದ್ರಗಳು. ಇವು ನಗರಗಳಿಗಷ್ಟೇ ಸೀಮಿತವಾಗಿವೆ. ಹಳ್ಳಿ ಜನ ಪಟ್ಟಣಕ್ಕೆ ಬಂದು ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಜೊತೆಗೆ ಹೆಚ್ಚು ಹಣವನ್ನು ತೆರಬೇಕಾದ ಸ್ಥಿತಿ ಇದೆ. ಪ್ರತಿ ದಿನ 65 ಸಾವಿರ ರೋಗಿಗಳು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಈ ಕಾರಣದಿಂದ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯ ರೋಗಿಗಳಲ್ಲಿ ಹೆಚ್ಚಿದೆ ಎಂಬುದು ಅವರ ಹೇಳಿಕೆ.
*
ಸಾರ್ವತ್ರಿಕ ದಾನಿಗಳು
ಒ ರಕ್ತದ ಗುಂಪು ಇರುವವರು ಸಾರ್ವತ್ರಿಕ ದಾನಿಗಳು. ಇವರು ಯಾರಿಗೆ ಬೇಕಾದರೂ ಮೂತ್ರಪಿಂಡ ಕೊಡಬಹುದು. ಇದು ಬೇರೆ ರಕ್ತದ ಗುಂಪಿನವರಿಗೂ ಹೊಂದಾಣಿಕೆಯಾಗುತ್ತದೆ.

ಅಂಗಾಂಗ ಕಸಿಗೆ ಕಾಯುತ್ತಿದ್ದಾರೆ 1,115 ರೋಗಿಗಳು
ನಗರದ ಅಪೊಲೊ ಸಮೂಹದ ಆಸ್ಪತ್ರೆಗಳಲ್ಲಿ 1,115 ರೋಗಿಗಳು ಅಂಗಾಂಗ ದಾನಿಗಳಿಗಾಗಿ ಕಾಯುತ್ತಿದ್ದಾರೆ. ಇವರಲ್ಲಿ 695 ಮೂತ್ರಪಿಂಡ, 411 ಯಕೃತ್‌, 2 ಹೃದಯ, 2 ಸಣ್ಣ ಕರುಳು, 5 ಮೇದೋಜೀರಕ ಗ್ರಂಥಿ ಅವಶ್ಯಕತೆ ಇದೆ.
*
ಯಾರು ದಾನ ಮಾಡಬಹುದು
ವೈದ್ಯರ ಪ್ರಕಾರ 18 ವರ್ಷ ಮೇಲ್ಪಟ್ಟವರು ಹಾಗೂ 65 ವರ್ಷದೊಳಗಿನ ಆರೋಗ್ಯವಂತರು ಎಲ್ಲರೂ ದಾನ ಮಾಡಬಹುದು. ಶಸ್ತ್ರಚಿಕಿತ್ಸೆಯ ಬಳಿಕ ಒಂದು ತಿಂಗಳು ವಿಶ್ರಾಂತಿ ಬೇಕು. ಒಂದು ಕಿಡ್ನಿ ಇಲ್ಲದಿದ್ದರೂ ಸಾಮಾನ್ಯರಂತೆ ಜೀವನ ಮಾಡಬಹುದು. ಆದರೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುವಂತಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹೆಚ್ಚು ದೈಹಿಕ ಶ್ರಮ ಬೇಡುವ ಕೆಲಸ ಮಾಡುವಂತಿಲ್ಲ.

ದಾನ ಮಾಡುವುದು ಹೇಗೆ ಮತ್ತು ಎಲ್ಲಿ?
ಸ್ವಯಂ ಸೇವಾ ಸಂಸ್ಥೆಗಳಲ್ಲಿ ಹೆಸರನ್ನು ನೋಂದಾಯಿಸಬಹುದು. ನೋಂದಾಯಿಸಿಕೊಂಡ ಕಾರ್ಡ್ ಇದ್ದರೆ ಕಾನೂನಿನ ಪ್ರಕಾರ ಮೃತದೇಹ ಒಪ್ಪಿಸಬೇಕು. ಮರಣ ಹೊಂದಿದ ಬಳಿಕ ಸಂಸ್ಥೆಯವರೇ ಅಂಗಾಂಗ ದಾನಕ್ಕೆ ವ್ಯವಸ್ಥೆ ಮಾಡುತ್ತಾರೆ. ಬೆಂಗಳೂರಿನಲ್ಲಿರುವ ‘ಜೀವನ ಸಾರ್ಥಕ’ ಸಂಸ್ಥೆಯಲ್ಲಿಯೂ ದಾನ ಮಾಡಬಹುದು. ಮೃತರ ಸಂಬಂಧಿಕರು ಕರೆ ಮಾಡಿ ಅವರಿಗೆ ಮಾಹಿತಿ ನೀಡಬೇಕು.
ಸಂಪರ್ಕ ಸಂಖ್ಯೆ: 9845006768

*
ಮೃತದಾನಿಗಳ ಪ್ರಮಾಣ ಕಡಿಮೆ
‘ಇಂಡಿಯನ್‌ ಸೊಸೈಟಿ ಆಫ್‌ ಆರ್ಗನ್ ಟ್ರಾನ್ಸ್‌ಪ್ಲಾಂಟೇಶನ್‌’ನ ಇಂಡಿಯನ್ ಟ್ರಾನ್ಸ್‌ಪ್ಲಾಂಟ್‌ ರಿಜಿಸ್ಟ್ರಿ ಪ್ರಕಾರ ಭಾರತದಲ್ಲಿ 1971ರಿಂದ 2015ರ ಅವಧಿಯಲ್ಲಿ 21,395 ಮೂತ್ರಪಿಂಡ ಕಸಿ ನಡೆದಿದೆ. ಇದರಲ್ಲಿ 783 ಮಾತ್ರ ಮೃತ ದಾನಿಗಳಿಂದ ಪಡೆದುಕೊಳ್ಳಲಾಗಿದೆ. ಸಾವಿನ ನಂತರವೂ ಅಂಗಾಂಗ ದಾನ ಮಾಡಲು ಹಿಂಜರಿಯುವುದಕ್ಕೆ ಇಲ್ಲಿರುವ ಸಾಂಪ್ರದಾಯಿಕ ಮನಸ್ಥಿತಿಯೇ ಕಾರಣ ಎಂದು ಹಲವು ಸಮೀಕ್ಷೆಗಳು ದೃಢಪಡಿಸಿವೆ.

‘ಜಾಗೃತಿ ಹೆಚ್ಚಬೇಕು’
ಭಾರತದಲ್ಲಿ ಮೃತರ ಅಂಗಾಂಗ ದಾನ ಪ್ರಮಾಣ ಪ್ರತಿ ಹತ್ತು ಲಕ್ಷಕ್ಕೆ 0.05 ರಿಂದ 0.08ರಷ್ಟಿದೆ. ಇದು ವಿಶ್ವದಲ್ಲೇ ಕನಿಷ್ಠ. ದೇಶದಲ್ಲಿ ಪ್ರತಿ ವರ್ಷ 2 ಲಕ್ಷ ಕಿಡ್ನಿ, 50 ಸಾವಿರ ಹೃದಯ, 50 ಸಾವಿರ ಯಕೃತ್ತಿನ ಕಸಿ ಅಗತ್ಯವಿದೆ. ಪ್ರತಿ ಐದು ನಿಮಿಷಕ್ಕೆ ಒಬ್ಬರು ಕಿಡ್ನಿ ವೈಫಲ್ಯದಿಂದ ಸಾವಿಗೀಡಾಗುತ್ತಿದ್ದಾರೆ. ಪ್ರತಿ ದಿನ 300ಕ್ಕೂ ಹೆಚ್ಚು ಮಂದಿ ಅಂಗಾಂಗ ದಾನ ಪಡೆಯಲಾಗದೆ ಸಾವಿಗೀಡಾಗುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ದಾನಿಗಳ ಪ್ರಮಾಣ ಹೆಚ್ಚುತ್ತಿದೆ. ಆದರೆ, ಈ ಕುರಿತು ಜಾಗೃತಿ ಹೆಚ್ಚಬೇಕು.
ಡಾ. ದಿಲೀಪ್‌ ಸಿ. ಧನ್‌ಪಾಲ್‌, ಮೂತ್ರಪಿಂಡ ತಜ್ಞ, ಅಪೊಲೊ ಆಸ್ಪತ್ರೆ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.