ADVERTISEMENT

ಅಂಡರ್‌ಪಾಸ್‌ಗೆ ವ್ಯಾಪಕ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ಬೆಂಗಳೂರು: ಹೊಸೂರು ರಸ್ತೆಯ  ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯ ಭಾಗವಾಗಿ  ಕೋರ­ಮಂಗಲ ಫೋರಂ ಮಾಲ್‌ನಿಂದ ಮಡಿವಾಳ ಚೆಕ್‌ ಪೋಸ್ಟ್‌ವರೆಗೆ ರೂ.100 ಕೋಟಿ ರೂಪಾಯಿ ವೆಚ್ಚ­ದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ 800 ಮೀಟರ್ ಉದ್ದದ ಅಂಡರ್‌ಪಾಸ್‌ಗೆ ಕೋರ­ಮಂಗಲ  ನಿವಾಸಿಗಳಿಂದ ತೀವ್ರ  ವಿರೋಧ ವ್ಯಕ್ತವಾಗಿದೆ.

ಬಿಬಿಎಂಪಿಯು ಈ  ಯೋಜನೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಲು ಸಿದ್ಧತೆ ನಡೆಸಿದೆ. ಆದರೆ ಸಾರ್ವಜನಿಕರು ಹಾಗೂ ತಜ್ಞರ ಅಭಿ­ಪ್ರಾಯವನ್ನು  ಗಣನೆಗೆ ತೆಗೆದುಕೊಳ್ಳದೇ, ಅವೈಜ್ಞಾ­ನಿಕ ಮಾದರಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡ­ಲಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತ­ನಾಡಿದ ಕೋರಮಂಗಲ ನಿವಾಸಿಗಳ ಒಕ್ಕೂಟದ ಸದಸ್ಯ ನಿತಿನ್ ಶೇಷಾದ್ರಿ, ‘ದೂರದೃಷ್ಟಿಯಿಲ್ಲದೇ ಹಣ ವ್ಯಯಿಸುವುದಕ್ಕಾಗಿಯೇ ಈ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಸಂಚಾರ ದಟ್ಟಣೆಯ ಸಮಸ್ಯೆ ಇನ್ನಷ್ಟು ಬಿಗಡಾ­ಯಿಸಲಿದೆ’ ಎಂದು ಅಭಿಪ್ರಾಯಪಟ್ಟರು.

‘ಈ ಅಂಡರ್‌ಪಾಸ್ ನಿರ್ಮಾಣಗೊಂಡರೆ  ಆಡುಗೋಡಿ ರಸ್ತೆಯಿಂದ ಬರುವ ಆಂಬುಲೆನ್ಸ್ ಸೇರಿದಂತೆ ಎಲ್ಲ ವಾಹನಗಳು ಸರ್ವೀಸ್ ರಸ್ತೆಯನ್ನೇ ಬಳಸಿ, ಮುಖ್ಯರಸ್ತೆಗೆ ಬರಬೇಕಾಗುತ್ತದೆ. ಸರ್ವೀಸ್ ರಸ್ತೆಯ ಭಾಗದಲ್ಲಿ  ಹೆಚ್ಚಿನ ವಾಣಿಜ್ಯ ಕಟ್ಟಡಗಳು ಇರುವುದರಿಂದ ಜನಸಂದಣಿಯೂ ಹೆಚ್ಚಿರುತ್ತದೆ. ಹಾಗಾಗಿ ಸರ್ವೀಸ್ ರಸ್ತೆ ಹಾಗೂ ಒಳರಸ್ತೆಯನ್ನು ಬಳಸಿ ಬರುವ  ಆಂಬುಲೆನ್ಸ್ ವಾಹನಗಳಿಗೆ  ಸೇಂಟ್ ಜಾನ್ಸ್ ಆಸ್ಪತ್ರೆಯನ್ನು ತಲುಪಲು ಹೆಚ್ಚಿನ ಸಮಯ ತಗಲುತ್ತದೆ’ ಎಂದು ತಿಳಿಸಿದರು.

‘ಜಿಗಣಿ, ಆನೇಕಲ್, ಬೊಮ್ಮಸಂದ್ರ ಹಾಗೂ ಎಲೆ­ಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ ಈ ಕಾರಿಡಾರ್‌ನ  ಮಾರ್ಗದಲ್ಲಿಯೇ ಕೇರಳ ಹಾಗೂ ತಮಿಳುನಾಡು  ಬಸ್ಸುಗಳು ಸಂಚರಿಸುತ್ತವೆ.  ಇನ್ನೂ ಪ್ರಸ್ತಾವಿತ ಅಂಡರ್‌ಪಾಸ್ ಯೋಜನೆಯು ಆಡು­ಗೋಡಿ, ಕೋರಮಂಗಲ 20ನೇ ಮುಖ್ಯರಸ್ತೆ, ಮರಿ­ಗೌಡ ರಸ್ತೆ ಹಾಗೂ ಸರ್ಜಾಪುರ ಜಂಕ್ಷನ್‌ಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಇಷ್ಟು ಉದ್ದದ ಅಂಡರ್‌­ಪಾಸ್ ನಿರ್ಮಾಣ ಮಾಡುವ ಅಗತ್ಯವಿದೆಯೇ?’ ಎಂದು ಅವರು ಪ್ರಶ್ನಿಸಿದರು.

ಮುಖರ್ಜಿ ಶಿಫಾರಸು ಕಡೆಗಣನೆ?:
‘ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ  ಅವರು ಹೆಚ್ಚುವರಿ ಮುಖ್ಯ ಕಾರ್ಯ­ದರ್ಶಿ­ಯಾಗಿದ್ದ ಸಂದರ್ಭದಲ್ಲಿ ಅವರ ನೇತೃತ್ವದ ಸಮಿತಿಯು ನೀಡಿರುವ ಶಿಫಾರಸುಗಳನ್ನು ಕೂಡ ಸಂಪೂರ್ಣವಾಗಿ ಕಡೆಗಣಿಸಿ ಈ ಅಂಡರ್ ಪಾಸ್ ನಿರ್ಮಾಣಕ್ಕೆ ಸಿದ್ದತೆ ಮಾಡಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಮಡಿವಾಳ ಅಂಡರ್‌ಪಾಸ್ ಅನ್ನು ಎತ್ತರಿಸಿ, ಸರ್ವೀಸ್ ರಸ್ತೆಗಳನ್ನು ವಿಸ್ತರಣೆ ಮಾಡಿದರೆ ಮಾತ್ರ ಈ ಭಾಗದಲ್ಲಿರುವ ಸಂಚಾರ ದಟ್ಟಣೆ ಸಮಸ್ಯೆ­ಯನ್ನು ಬಗೆಹರಿಸಬಹುದು ಎಂದು ಸಮಿತಿಯು ಹೇಳಿದೆ. ಬಿಬಿಎಂಪಿಯು ಈ ವಿಚಾರಕ್ಕೆ ಮಹತ್ವ ನೀಡದೇ, ಸುಖಾಸುಮ್ಮನೆ ಅಂಡರ್‌ಪಾಸ್ ನಿರ್ಮಾಣ ಮಾಡಲು ಹೊರಟಿದೆ’ ಎಂದು ದೂರಿದರು.

ಪರಿಹಾರವೇನು?: ‘ವಾಹನ ಸವಾರರು ಹಾಗೂ ಪಾದಚಾರಿಗಳನ್ನು ಗಮನದಲ್ಲಿಟ್ಟುಕೊಂಡು ಆಡು­ಗೋಡಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌­ವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ದೊರಕಲಿದೆ. ಇದರ ಸಲುವಾಗಿ  ಮೇಲ್ಸೇತುವೆಯ ನಕ್ಷೆಯನ್ನು ಕೂಡ ಸಿದ್ಧಪಡಿಸಿ, ಪಾಲಿಕೆಗೆ ನೀಡಲಾಗಿದೆ’ ಎಂದು ತಿಳಿಸಿದರು.

‘ರೂ.170 ಕೋಟಿ ವೆಚ್ಚದಲ್ಲಿ ಈ ಮೇಲ್ಸೇತುವೆ­ಯನ್ನು  ನಿರ್ಮಾಣ ಮಾಡಬಹುದೆಂದು ಅಂದಾ­ಜಿಸ­ಲಾಗಿದೆ. ಬಿಬಿಎಂಪಿ ಕೈಗೆತ್ತಿಕೊಳ್ಳಲಿರುವ ಅಂಡರ್‌ಪಾಸ್ ಯೋಜನೆಯಲ್ಲಿನ ಲೋಪ­ದೋಷಗಳ ಬಗ್ಗೆಯೂ ಪಾಲಿಕೆಗೆ ಪತ್ರ ಬರೆಯ­ಲಾಗಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ತಿಳಿಸಿದರು.

ಏನಿದು ಕೌಶಿಕ್  ಮುಖರ್ಜಿ ಸಮಿತಿ?
ಸರ್ಜಾಪುರ ಜಂಕ್ಷನ್‌ನಲ್ಲಿ ನಗರಾಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಸಲುವಾಗಿ ಸಾಕಷ್ಟು ಮರಗಳನ್ನು ಕಡಿಯುವುದಕ್ಕೆ  ಜನರಿಂದ ವಿರೋಧ ವ್ಯಕ್ತವಾಗಿದ್ದರಿಂದ  ಹೈಕೋರ್ಟ್ ೨೦೧೨ರಲ್ಲಿ ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಕೌಶಿಕ್ ಮುಖರ್ಜಿ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು.

ಈ ಸಮಿತಿಯು ಶಿರಸಿ ವೃತ್ತದಿಂದ ಅಗರ ಕೆರೆಯವರೆಗೆ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ­ಯನ್ನು ಕೂಡ ಪರಿಶೀಲನೆ ನಡೆಸಿತ್ತು. ನಂತರ ಅಯ್ಯಪ್ಪ ದೇವಸ್ಥಾನದ ಸಮೀಪವಿರುವ ಮಡಿವಾಳ ಅಂಡರ್‌ಪಾಸ್ ಅನ್ನು ಕೂಡ ಪರಿಶೀಲನೆ ನಡೆಸಿ, ರಸ್ತೆ ವಿಸ್ತರಣೆಗೆ ಸಲಹೆ ನೀಡಿತ್ತು.

ವಾಹನಗಳು ಸಂಚಾರ ನಡೆಸುವ ಈ ರಸ್ತೆಯು ಸದ್ಯಕ್ಕೆ 4.5 ಮೀಟರ್ ಅಗಲವಿದ್ದು, ಇದನ್ನು 5.5  ಮೀಟರ್‌ಗೆ ವಿಸ್ತರಣೆ ಮಾಡಬೇಕೆಂದು ತಿಳಿಸಿತ್ತು.   ಈ ಸಮಿತಿಯಲ್ಲಿ  ನಗರ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿತ್ ಪ್ರಸಾದ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ಎಂ.ಎ ಸಲೀಂ ಇದ್ದರು.

ಸದ್ಯದಲ್ಲೇ ಕಾಮಗಾರಿ ಆರಂಭ’
‘ನಗರಾಭಿವೃದ್ಧಿ ಎಂದಾಗ ಜನರಿಂದ ವಿರೋಧ ವ್ಯಕ್ತವಾಗುವುದು ಸಹಜ. ತಜ್ಞರ ಅಭಿಪ್ರಾಯ ಸಂಗ್ರಹಿಸಿಯೇ ಈ ಅಂಡರ್‌­ಪಾಸ್ ನಕ್ಷೆಯನ್ನು ತಯಾರಿಸಲಾಗಿದೆ. ಈಗಾ­ಗಲೇ ಸರ್ಕಾರದಿಂದ ಒಪ್ಪಿಗೆ ಪಡೆಯಲಾಗಿದ್ದು, ಸದ್ಯದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳ­ಲಿದ್ದೇವೆ’
– ಬಿ.ಎಸ್.ಸತ್ಯನಾರಾಯಣ, ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT