ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 2014–15ನೇ ಸಾಲಿನ ಬಜೆಟ್‌ಗೆ ಬುಧವಾರ ನಡೆದ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ₨ 397.31 ಕೋಟಿ ಆದಾಯ ಮತ್ತು 402.41 ಕೋಟಿ ವೆಚ್ಚದ ₨ 5 ಕೋಟಿ ಕೊರತೆಯ ಬಜೆಟ್‌ಗೆ ಸಭೆಯಲ್ಲಿ ಒಪ್ಪಿಗೆ ದೊರೆಯಿತು.
‘ವಿಶ್ವವಿದ್ಯಾಲಯದ ಸುವರ್ಣ ವರ್ಷಾಚರಣೆಯ ಸಂದರ್ಭದಲ್ಲಿ ಜ್ಞಾನಭಾರತಿ ಆವರಣದಲ್ಲಿ ಸುವರ್ಣ ಭವನ ನಿರ್ಮಾಣಕ್ಕೆ ₨ 20 ಕೋಟಿ ಮೀಸಲಿಡಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ ₨ 10 ಕೋಟಿ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಕುಲಪತಿ ಪ್ರೊ.ಬಿ.ತಿಮ್ಮೇಗೌಡ ತಿಳಿಸಿದರು.
‘ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗಾಗಿ ₨ 15 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಶಾನ್ಯ ರಾಜ್ಯಗಳ ಪರಿಷತ್‌ಗೆ (ಎನ್‌ಇಸಿ) ₨ 15 ಕೋಟಿ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ರಾಷ್ಟ್ರೀಯ ಉನ್ನತ ಶಿಕ್ಷಾ ಅಭಿಯಾನದಿಂದ (ಆರ್‌ಯುಎಸ್‌ಎ) ₨ 74.86 ಕೋಟಿ ಅನುದಾನ ನಿರೀಕ್ಷಿಸಲಾಗಿದೆ’ ಎಂದರು.
‘ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಸಾಮಾನ್ಯ ಅನುದಾನದಿಂದ ₨ 8.63 ಕೋಟಿ ಬರಲಿದೆ. 2013–14ನೇ ಸಾಲಿಗೆ ₨ 267.31 ಕೋಟಿ ಆದಾಯ ಮತ್ತು ₨ 274.30 ಕೋಟಿ ವೆಚ್ಚದ ಬಜೆಟ್ ರೂಪಿಸಲಾಗಿತ್ತು. ಕಳೆದ ವರ್ಷಕ್ಕಿಂದ ಈ ಬಾರಿಯ ಬಜೆಟ್ ಶೇ 11.45ರಷ್ಟು ಹೆಚ್ಚಾಗಿದೆ’ ಎಂದು ಹೇಳಿದರು.
‘ಕೋಲಾರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಮನಗರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎರಡು ಹೆಚ್ಚುವರಿ ಕೋರ್ಸ್ ಆರಂಭಿಸುವ ಚಿಂತನೆ ಇದೆ’ ಎಂದರು.
‘ಪ್ರಸಕ್ತ ಶೈಕ್ಷಣಿಕ ವರ್ಷ ಒಟ್ಟು 550 ಕಾಲೇಜುಗಳಿಂದ ಮಾನ್ಯತೆ ನವೀಕರಣಕ್ಕಾಗಿ ಮನವಿ ಬಂದಿತ್ತು. ಈ ಬಗ್ಗೆ ಪರಿಶೀಲನೆಗಾಗಿ 25 ಸ್ಥಳೀಯ ವಿಚಾರಣಾ ಸಮಿತಿಗಳನ್ನು (ಎಲ್‌ಐಸಿ) ನೇಮಿಸಲಾಗಿತ್ತು. ಈ ಪೈಕಿ 488 ಕಾಲೇಜುಗಳ ಮಾನ್ಯತೆ ನವೀಕರಣ, 27 ಕಾಲೇಜುಗಳ ಶಾಶ್ವತ ಸಂಯೋಜನೆ, 24 ಕಾಲೇಜುಗಳ ಹೆಚ್ಚುವರಿ ಕೋರ್ಸ್‌ಗೆ ಅನುಮತಿ ನೀಡಲು ಎಲ್‌ಐಸಿ ಮುಖ್ಯಸ್ಥರು ಶಿಫಾರಸು ಮಾಡಿದ್ದಾರೆ’ ಎಂದರು.
‘ಕಾಲೇಜುಗಳ ಮೂಲಸೌಕರ್ಯ ಹಾಗೂ ಬೋಧನಾ ಗುಣಮಟ್ಟದ ಆಧಾರದ ಮೇಲೆ ಎಲ್‌ಐಸಿ ಆ ಕಾಲೇಜುಗಳ ಮಾನ್ಯತೆ ನವೀಕರಣಕ್ಕೆ ಶಿಫಾರಸು ಮಾಡಿದ್ದರೆ ಅದನ್ನು ಅಂಗೀಕರಿಸಬಹುದು ಎಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಕಾಲೇಜುಗಳ ಮಾನ್ಯತೆ ನವೀಕರಣ ವಿಚಾರದಲ್ಲಿ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.
ಹಣಕಾಸು ಅಧಿಕಾರಿ ಆರ್.ರಾಮಣ್ಣ ಮಾತನಾಡಿ, ‘ಪರೀಕ್ಷಾ ಶುಲ್ಕದಿಂದ ₨ 58 ಕೋಟಿ, ಇತರೆ ಶುಲ್ಕಗಳಿಂದ ₨ 40 ಕೋಟಿ, ಕಾಲೇಜುಗಳ ಸಂಯೋಜನಾ ಶುಲ್ಕದಿಂದ ₨ 11 ಕೋಟಿ ಮತ್ತು ಇತರೆ ಶುಲ್ಕಗಳಿಂದ ₨ 9.70 ಕೋಟಿ ಆದಾಯ ನಿರೀಕ್ಷೆ ಇದೆ. ಜತೆಗೆ ರಾಜ್ಯ ಸರ್ಕಾರದ ಅನುದಾನ ₨ 87 ಕೋಟಿ ಸಿಗಲಿದೆ’ ಎಂದರು.
‘ಸಿಬ್ಬಂದಿ ವೇತನಕ್ಕಾಗಿ ₨ 130 ಕೋಟಿ ಮೀಸಲಿಡಲಾಗಿದೆ. ಜ್ಞಾನಭಾರತಿ ಆವರಣದಲ್ಲಿ ಏಳು ಕಡೆ ಮತ್ತು ಸೆಂಟ್ರಲ್ ಕಾಲೇಜು ಆವರಣದ ಒಂದು ಕಡೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಹಾಗೂ ಜ್ಞಾನಭಾರತಿ ಆವರಣದಲ್ಲಿ ಆಪ್ಟಿಕಲ್ ಫೈಬರ್ ಅಳವಡಿಕೆ ಕಾರ್ಯಕ್ಕಾಗಿ ಒಟ್ಟು ₨ 5 ಕೋಟಿ ಮೀಸಲಿರಿಸಲಾಗಿದೆ’ ಎಂದು ತಿಳಿಸಿದರು.
ಒಂದು ವರ್ಷದ ಎಲ್‌ಎಲ್‌ಎಂ
ಈವರೆಗೆ ಕಾನೂನು ಸ್ನಾತಕೋತ್ತರ ಪದವಿ (ಎಲ್‌ಎಲ್‌ಎಂ) ಎರಡು ವರ್ಷದ ಕೋರ್ಸ್ ಆಗಿತ್ತು. ಮುಂಬರುವ ಶೈಕ್ಷಣಿಕ ವರ್ಷದಿಂದ ಕೋರ್ಸ್‌ನ ಅವಧಿಯನ್ನು ಎರಡು ವರ್ಷದ ಬದಲಿಗೆ ಒಂದು ವರ್ಷಕ್ಕೆ ಇಳಿಸಲು ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಈಗಾಗಲೇ ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಎಲ್‌ಎಲ್‌ಎಂ ಕೋರ್ಸ್ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಲಾಗಿದೆ.
– ಪ್ರೊ.ಬಿ.ತಿಮ್ಮೇಗೌಡ, ಕುಲಪತಿ, ಬೆಂ.ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.