ADVERTISEMENT

ಅಗೆದ ರಸ್ತೆ ದುರಸ್ತಿ ನಿಮ್ಮದೇ ಹೊಣೆ

ಜಲ ಮಂಡಳಿ ಅಧ್ಯಕ್ಷರಿಗೆ ಬಿಬಿಎಂಪಿ ಆಯುಕ್ತರ ಪತ್ರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಬೆಂಗಳೂರು: ನಗರದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಜಲ ಮಂಡಳಿ ರಸ್ತೆಯನ್ನು ಕತ್ತರಿಸಿದಲ್ಲಿ ಅದನ್ನು ದುರಸ್ತಿ ಮಾಡಿಕೊಡುವ ಹೊಣೆ ಅದರದ್ದೇ ಆಗಿರುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎಂ.ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.

ಈ ಸಂಬಂಧ ಅವರು ಜಲ ಮಂಡಳಿ ಅಧ್ಯಕ್ಷರಿಗೆ ಗುರುವಾರ ಪತ್ರ ಬರೆದಿದ್ದಾರೆ. `ಉಪ ಲೋಕಾಯುಕ್ತ ಎಸ್.ಬಿ. ಮಜಗೆ ಇತ್ತೀಚೆಗೆ ಪಶ್ಚಿಮ ವಲಯದಲ್ಲಿ ಪರಿಶೀಲನೆ ನಡೆಸಿದ್ದರು. ಕೆಲವು ರಸ್ತೆಗಳಲ್ಲಿ ಜಲ ಮಂಡಳಿ ನೀರಿನ ಸಂಪರ್ಕಕ್ಕಾಗಿ ಗುಂಡಿಗಳನ್ನು ತೋಡಿತ್ತು. ಒಳಚರಂಡಿ ಕೊಳವೆಗಳನ್ನು ಅಳವಡಿಸಿದ ಕೆಲವು ರಸ್ತೆಗಳನ್ನು ಸಹ ದುರಸ್ತಿಮಾಡದೆ ಹಾಗೇ ಬಿಡಲಾಗಿತ್ತು' ಎಂದು ನೆನಪು ಮಾಡಿಕೊಂಡಿದ್ದಾರೆ.

`ಉಪ ಲೋಕಾಯುಕ್ತರು ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂಬ ಸೂಚನೆ ನೀಡಿದಾಗ ಸ್ಥಳದಲ್ಲಿದ್ದ ಜಲ ಮಂಡಳಿ ಅಧಿಕಾರಿಗಳು, ರಸ್ತೆ ದುರಸ್ತಿಗೆ ಮಂಡಳಿಯಲ್ಲಿ ಯಾವುದೇ ಅನುದಾನ ಇಲ್ಲ. ಕತ್ತರಿಸಿದ ರಸ್ತೆಯನ್ನು ಬಿಬಿಎಂಪಿ ದುರಸ್ತಿ ಮಾಡಬೇಕು ಎನ್ನುವ ಅಭಿಪ್ರಾಯ ನೀಡಿದ್ದರು. ಅದಕ್ಕೆ ಸಮ್ಮತಿ ಸೂಚಿಸದ ಉಪ ಲೋಕಾಯುಕ್ತರು, ರಸ್ತೆಯನ್ನು ಕತ್ತರಿಸಿದವರೇ ಅದನ್ನು ಮೊದಲಿನ ಸ್ಥಿತಿಗೆ ತರಬೇಕು ಎಂಬ ನಿರ್ದೇಶನ ನೀಡಿದ್ದಾರೆ' ಎಂದು ಅವರು ವಿವರಿಸಿದ್ದಾರೆ.

`ಜಲ ಮಂಡಳಿ ಮಾತ್ರವಲ್ಲದೆ ಇನ್ನುಮುಂದೆ ಯಾವುದೇ ಇಲಾಖೆ, ಏನೇ ಕಾರಣದಿಂದ ರಸ್ತೆಯನ್ನು ಅಗೆದರೆ, ಅದೇ ಇಲಾಖೆ ರಸ್ತೆಯನ್ನು ಪೂರ್ವಸ್ಥಿತಿಗೆ ತರುವ ಹೊಣೆಗಾರಿಕೆ ಹೊಂದಿರುತ್ತದೆ ಎಂಬ ಸ್ಪಷ್ಟ ನಿರ್ದೇಶನ ಉಪ ಲೋಕಾಯುಕ್ತರಿಂದ ಬಂದಿದೆ.

ಮುಖ್ಯಮಂತ್ರಿಗಳ ಬಳಿ ಈ ವಿಷಯ ಚರ್ಚೆಗೆ ಬಂದಾಗ ಉಪ ಲೋಕಾಯುಕ್ತರ ಅಭಿಪ್ರಾಯಕ್ಕೆ ಸಂಪೂರ್ಣ ಸಹಮತಿ ವ್ಯಕ್ತಪಡಿಸಿದ್ದಾರೆ' ಎಂದು ಹೇಳಿದ್ದಾರೆ. `ಜಲ ಮಂಡಳಿ ಇನ್ನುಮುಂದೆ ಯಾವುದೇ ಕಾಮಗಾರಿಗಾಗಿ ರಸ್ತೆ ಅಗೆದರೆ, ನಂತರ ದುರಸ್ತಿಯನ್ನೂ ಮಾಡಬೇಕು' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT