ADVERTISEMENT

ಅಧಿಕಾರಿಗಳ ಸಭೆ ನಂತರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 5:20 IST
Last Updated 7 ಫೆಬ್ರುವರಿ 2012, 5:20 IST

ಬೆಂಗಳೂರು: ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ)ಗಳ ಸಿಬ್ಬಂದಿ ವರ್ಗದವರಿಗೆ ಥಾಮಸ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳನ್ನು ನೀಡುವ ಸಂಬಂಧ ಈ ಅಧಿವೇಶನ ಮುಗಿದ ಹತ್ತು ದಿನಗಳಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಸೋಮವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ಜೆಡಿಎಸ್‌ನ ಪುಟ್ಟಣ್ಣ, ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗೋ. ಮಧುಸೂದನ್, ಶಿವಯೋಗಿಸ್ವಾಮಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, `ರಾಜ್ಯದಲ್ಲಿ ಅನುದಾನಿತ 1087 ಐಟಿಐಗಳಿವೆ. ಈ ಪೈಕಿ ಏಳು ವರ್ಷ ಪೂರೈಸಿ ವೇತನ ಅನುದಾನ ವ್ಯಾಪ್ತಿಗೆ ಒಳಪಡಲು 443 ಸಂಸ್ಥೆಗಳು ಅರ್ಹತೆ ಪಡೆದಿವೆ. ವೇತನ ಅನುದಾನ ಹಾಗೂ ವಿದ್ಯಾರ್ಥಿ ಕೇಂದ್ರೀಕೃತ ಅನುದಾನ ಪದ್ಧತಿಯಡಿ ಪ್ರತಿ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಗರಿಷ್ಠ 6 ಸಾವಿರ ರೂಪಾಯಿ ಅನುದಾನ ನೀಡಲು ಸರ್ಕಾರಕ್ಕೆ 70 ಕೋಟಿ ರೂಪಾಯಿ ಹೊರೆ ಬೀಳಲಿದೆ~ ಎಂದು ಹೇಳಿದರು.

ಅನುದಾನಿತ ಐಟಿಐಗಳಲ್ಲಿ ತರಬೇತಿ ಪಡೆಯುವಂತಹ ವಿದ್ಯಾರ್ಥಿಗಳಿಗೆ ವಾರ್ಷಿಕ ಆರು ಸಾವಿರ ರೂಪಾಯಿ ವಿದ್ಯಾರ್ಥಿ ಕೇಂದ್ರೀಕೃತ ಅನುದಾನ ನೀಡುವುದರ ಜತೆಗೆ, ಯಂತ್ರೋಪಕರಣಗಳನ್ನು ಖರೀದಿಸಲು 25 ಲಕ್ಷ ರೂಪಾಯಿ ಮೂಲ ಬಂಡವಾಳ ಹಾಗೂ ಸರ್ಕಾರಿ ಭೂಮಿ ನೀಡಲು ಕೂಡ ಸರ್ಕಾರ ಉದ್ದೇಶಿಸಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸಫಲವಾಗುತ್ತದೋ ಗೊತ್ತಿಲ್ಲ ಎಂದು ಸಚಿವರು ಹೇಳಿದರು.

`ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಶೇ ನೂರರಷ್ಟು ವೇತನ ಅನುದಾನ ನೀಡಲಾಗುತ್ತಿದೆ. ಥಾಮಸ್ ನೇತೃತ್ವದ ಸಮಿತಿಯು ಪಿಂಚಣಿ ಸೇರಿದಂತೆ ಸರ್ಕಾರಿ ನೌಕರರಿಗೆ ನೀಡುತ್ತಿರುವ ಇತರೆ ಆರ್ಥಿಕ ಸೌಲಭ್ಯಗಳನ್ನು ಅನುದಾನಿತ ಐಟಿಐ ನೌಕರರಿಗೂ ನೀಡುವಂತೆ ಶಿಫಾರಸು ಮಾಡಿದೆ~ ಎಂದರು.

`ಸಮಿತಿಯ ಶಿಫಾರಸಿನ ಮೇರೆಗೆ 1997ರ ವೇತನ ಅನುದಾನ ಸಂಹಿತೆಯನ್ನು ಮರು ಪರಿಶೀಲಿಸಿ ಪರಿಷ್ಕೃತ ಸಂಹಿತೆ ಸಿದ್ಧಪಡಿಸುವಂತೆ ಆರ್ಥಿಕ ಇಲಾಖೆಯು ಸೂಚಿಸಿತ್ತು. ಅಲ್ಲದೆ, ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಲ್ಲಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಿಗೆ ನೀಡುತ್ತಿರುವ ಟ್ರಿಪಲ್ ಬೆನಿಫಿಟ್ ಸ್ಕೀಂನಡಿಯಲ್ಲಿನ ಸವಲತ್ತುಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವಂತೆಯೂ ಸೂಚಿಸಿತ್ತು. ಆ ಪ್ರಕಾರ, ಈ ಸ್ಕೀಂಗೆ ಸಂಬಂಧಿಸಿದ ದಾಖಲೆಗಳನ್ನು ಶಿಕ್ಷಣ ಇಲಾಖೆಯಿಂದ ಪಡೆದು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ~ ಎಂದರು.

`ವೇತನ ಅನುದಾನ ಸಂಹಿತೆಯನ್ನು ಪರಿಷ್ಕರಿಸಲು ಹಾಗೂ 2006ರ ಮಾರ್ಚ್ 31ಕ್ಕಿಂತ ಮೊದಲು ಅಂದರೆ, 1997ರ ವೇತನ ಅನುದಾನ ಸಂಹಿತೆಯಡಿ ಕಾರ್ಯನಿರ್ವಹಿಸುತ್ತಿರುವ 1410 ಸಿಬ್ಬಂದಿ ಪೈಕಿ ನಿವೃತ್ತಿ ಹೊಂದಲಿರುವ 84 ನೌಕರರಿಗೆ ಉದ್ದೇಶಿತ ವೇತನ ಪರಿಷ್ಕರಣೆಯಿಂದ ನೀಡಬೇಕಾಗಿ ಬರುವಂತಹ ನಿವೃತ್ತಿ ಸೌಲಭ್ಯಗಳನ್ನು ನೀಡಲು ವಾರ್ಷಿಕವಾಗಿ ತಗಲುವ ವೆಚ್ಚ ಭರಿಸಲು ಹೆಚ್ಚುವರಿ ಅನುದಾನ ನೀಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ~ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.