ADVERTISEMENT

ಅನಂತ್ ರಾಜೀನಾಮೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST
ಅನಂತ್ ರಾಜೀನಾಮೆಗೆ ಒತ್ತಾಯ
ಅನಂತ್ ರಾಜೀನಾಮೆಗೆ ಒತ್ತಾಯ   

ಬೆಂಗಳೂರು:  `ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಸಂಸದ ಅನಂತ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು. ಇಲ್ಲವಾದರೆ ಅವರ ವಿರುದ್ಧವೇ ಪ್ರತಿಭಟನೆ ಆರಂಭಿಸುತ್ತೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ನಗರದ ಆನಂದರಾವ್ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

`ರಾಜ್ಯದ ಪರಿಸ್ಥಿತಿಯ ಬಗ್ಗೆ ಪ್ರಧಾನಮಂತ್ರಿಯವರಿಗೆ ತಿಳಿಸುವ ಪ್ರಯತ್ನವನ್ನೇ ಅನಂತ ಕುಮಾರ್ ಮಾಡಿಲ್ಲ.  ರಾಜ್ಯದ ಜನತೆಯ ಬಗ್ಗೆ ಅನಂತ ಕುಮಾರ್‌ಗೆ ಕಿಂಚಿತ್ತೂ ಕಾಳಜಿ ಇಲ್ಲ~ ಎಂದು ಅವರು ದೂರಿದರು. `ಕೂಡಲೇ ಅನಂತ ಕುಮಾರ್ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಅಧಿಕಾರಕ್ಕಿಂತ ನಾಡಿನ ಜನರ ಹಿತಾಸಕ್ತಿ ಮುಖ್ಯ ಎಂಬುದನ್ನು ಅವರು ಅರಿಯಬೇಕು~ ಎಂದು ಅವರು ಆಗ್ರಹಿಸಿದರು.

`ರಾಜ್ಯದ ಇಬ್ಬರು ಉಪಮುಖ್ಯಮಂತ್ರಿಗಳೂ ನಿಷ್ಪ್ರಯೋಜಕರು. ಕಾವೇರಿ ವಿವಾದದ ವಿಷಯದಲ್ಲಿ ಇಬ್ಬರೂ ಬೇಜವಾಬ್ದಾರಿ ವರ್ತನೆ ಪ್ರದರ್ಶಿಸುತ್ತಿದ್ದಾರೆ. ಆದರೆ, ಇಬ್ಬರೂ ತಮ್ಮನ್ನು ತಾವು ಬೃಹಸ್ಪತಿಗಳೆಂದು ತಿಳಿದಿದ್ದಾರೆ~ ಎಂದು ಅವರು ಮೂದಲಿಸಿದರು.

`ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳತ್ತಿರುವ ಮಂಡ್ಯ-ಮೈಸೂರು ಭಾಗಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಬೇಕಿದ್ದ ಉಪಮುಖ್ಯಮಂತ್ರಿ ಆರ್.ಅಶೋಕ ಇಲ್ಲಿಯವರೆಗೂ ಪ್ರತಿಭಟನಾಕಾರರೊಂದಿಗೆ ಮಾತನಾಡಿಲ್ಲ. ಪ್ರತಿಭಟನಾಕಾರರ ಮನವೊಲಿಸುವ ಯಾವುದೇ ಪ್ರಯತ್ನ ಮಾಡಿಲ್ಲ~ ಎಂದು ಅವರು ಕಿಡಿಕಾರಿದರು.

`ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರು ಕನಿಷ್ಠ ತಮ್ಮ ಜಿಲ್ಲೆಯ ರೈತರ ಹಿತದೃಷ್ಟಿಯಿಂದಲಾದರೂ ಪ್ರಧಾನಮಂತ್ರಿಯವರ ಮೇಲೆ ಒತ್ತಡ ತರಬೇಕಿತ್ತು. ಇಲ್ಲವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕಿತ್ತು. ಆದರೆ, ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದರೂ ಈವರೆಗೂ ಅವರು ಮಂಡ್ಯ ಜಿಲ್ಲೆಗೆ ಭೇಟಿ ನೀಡಿಲ್ಲ. ಇದು ಅವರ ಜನವಿರೋಧಿ ನಿಲುವನ್ನು ಎತ್ತಿತೋರುತ್ತಿದೆ~ ಎಂದು ಆರೋಪಿಸಿದರು.

`ದೇಹಸ್ಥಿತಿ ಸರಿಯಿಲ್ಲದ ಕಾರಣ ಮಂಡ್ಯ ಜಿಲ್ಲೆಗೆ ಹೊರಡಬೇಕೆಂದು ಉದ್ದೇಶಿಸಿದ್ದ ಪಾದಯಾತ್ರೆಯ ಆಲೋಚನೆಯನ್ನು ಕೈಬಿಟ್ಟಿದ್ದೇನೆ. ಸುಪ್ರೀಂಕೋರ್ಟ್‌ನ ಮುಂದಿನ ನಿಲುವು ಹಾಗೂ ಕೇಂದ್ರ ಸರ್ಕಾರದ ನಡೆಯ ಆಧಾರದ ಮೇಲೆ ಮುಂದಿನ ಹೋರಾಟದ ರೂಪುರೇಷೆಯನ್ನು ನಿರ್ಧರಿಸಲಾಗುವುದು~ ಎಂದು ಅವರು ತಿಳಿಸಿದರು.

ಪ್ರತಿಭಟನೆಯ ಸಂದರ್ಭದಲ್ಲಿ `ಯಡಿಯೂರಪ್ಪ ಅವರು ಕಾವೇರಿ ಹೋರಾಟವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ~ ಎಂದು ಆರೋಪಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಕರ್ನಾಟಕ ಗಡಿ ರಕ್ಷಣಾ ಸಮಿತಿಯ ಕೆಲ ಸದಸ್ಯರನ್ನು ಯಡಿಯೂರಪ್ಪ ಬೆಂಬಲಿಗರು ಥಳಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಸಮಿತಿಯ ಸದಸ್ಯರನ್ನು ವಶಕ್ಕೆ ತೆಗದುಕೊಂಡು ನಂತರ ಬಿಡುಗಡೆಗೊಳಿಸಿದರು.

ಶಾಸಕ ನೆ.ಲ.ನರೇಂದ್ರಬಾಬು, ಸಂಸದ ಪಿ.ಸಿ.ಮೋಹನ್, ಬಿಜೆಪಿ ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.