ADVERTISEMENT

ಅನುತ್ತೀರ್ಣ ಮಾಡಬಾರದು- ತಪ್ಪು ಗ್ರಹಿಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 19:30 IST
Last Updated 18 ಆಗಸ್ಟ್ 2012, 19:30 IST

ಬೆಂಗಳೂರು: `ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಎಂಟನೇ ತರಗತಿ ವರೆಗೆ ಅನುತ್ತೀರ್ಣರನ್ನಾಗಿ ಮಾಡಬಾರದು ಎಂಬುದು ತಪ್ಪು ತಿಳಿವಳಿಕೆ. ಮಕ್ಕಳನ್ನು ಪರೀಕ್ಷಾ ಭಯದಿಂದ ಮುಕ್ತಗೊಳಿಸಿ ಅವರ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಬೇಕು ಎಂಬುದು ಕಾಯ್ದೆಯ ಆಶಯ~ ಎಂದು ಮಕ್ಕಳ ಹಕ್ಕು ಟ್ರಸ್ಟ್ ನಿರ್ದೇಶಕ ವಾಸುದೇವ ಶರ್ಮ ಶನಿವಾರ ಇಲ್ಲಿ ತಿಳಿಸಿದರು.

ಆರ್‌ಟಿಇ ಅಡಿ ಸೇರ್ಪಡೆಯಾದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ವಿವಿಧ ಸ್ವಯಂಸೇವಾ ಸಂಘಟನೆಗಳ ಆಶ್ರಯದಲ್ಲಿ ಆರಂಭಗೊಂಡಿರುವ `ಆರ್‌ಟಿಇ ಕಾರ್ಯಪಡೆ~ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಕಾಯ್ದೆ ಅನುಷ್ಠಾನದ ಸಂದರ್ಭದಲ್ಲಿ ಶಿಕ್ಷಕರಿಗೆ ಮಹತ್ವಧ ಜವಾಬ್ದಾರಿಗಳು ಇವೆ. ಗುಣಮಟ್ಟ ಹೆಚ್ಚಿಸದೆ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುತ್ತಾ ಬಂದರೆ ಮುಂದಿನ ತರಗತಿಗಳಲ್ಲಿ ಅವರು ಸಮಸ್ಯೆ ಎದುರಿಸುತ್ತಾರೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಪರೀಕ್ಷೆಯೇ ಇಲ್ಲ ಎಂಬ ಸಂದೇಶ ಕೊಡುವುದು ತಪ್ಪು. ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸುವುದು ಶಿಕ್ಷಕರ ಕರ್ತವ್ಯ~ ಎಂದು ಅವರು ಅಭಿಪ್ರಾಯಪಟ್ಟರು.

`ತಾರತಮ್ಯ ನಡೆಯದಂತೆ ನೋಡಿಕೊಂಡು ಶಾಲೆಗಳಲ್ಲಿ ವಿದ್ಯಾರ್ಥಿಗಳ ರಕ್ಷಣೆ ನೀಡಬೇಕಿದೆ. ಕಾಯ್ದೆ ಪ್ರಕಾರ 2015ರೊಳಗೆ ಪ್ರಾಥಮಿಕ ಶಾಲೆಗಳಲ್ಲಿ ಬಿ.ಇಡಿ, ಎಂ.ಇಡಿ ಪದವೀಧರರನ್ನು ಶಿಕ್ಷಕರನ್ನಾಗಿ ನೇಮಿಸಬೇಕು ಎಂದು ಸೂಚಿಸಲಾಗಿದೆ. ಮೂಲಸೌಕರ್ಯ ಒದಗಿಸಿ ಶಾಲೆಗಳನ್ನು ಭದ್ರಪಡಿಸಿ ಬಡ ಮಕ್ಕಳಿಗೆ ಸರ್ಕಾರ ಕಡ್ಡಾಯವಾಗಿ ಉಚಿತ ಶಿಕ್ಷಣ ಒದಗಿಸಬೇಕು~ ಎಂದು ಅವರು ಹೇಳಿದರು.

ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಕರ್ನಾಟಕ ಪ್ರತಿನಿಧಿ ಮ್ಯಾಥ್ಯೂ ಮಾತನಾಡಿ, `ಶಾಲೆಗಳಲ್ಲಿ ಶೇ 25ರಷ್ಟು ಸ್ಥಾನಗಳನ್ನು ಹಿಂದುಳಿದ ಮಕ್ಕಳಿಗೆ ನೀಡಬೇಕು ಎಂಬುದೇ ಆರ್‌ಟಿಇ ಎಂಬುದಾಗಿ ಬಹುತೇಕ ಮಂದಿ ಭಾವಿಸಿದ್ದಾರೆ. ಹೆಚ್ಚಿನ ಪೋಷಕರಿಗೆ ಕಾಯ್ದೆಯಲ್ಲಿರುವ ಉತ್ತಮ ಅಂಶಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ. ಶಿಕ್ಷಕರೂ ಗೊಂದಲದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮಾಹಿತಿ ಒದಗಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು~ ಎಂದು ಸಲಹೆ ನೀಡಿದರು.

ರಾಜ್ಯ ಮಕ್ಕಳ ಆಯೋಗದ ಸದಸ್ಯೆ ಮುಕ್ತಾ ಮಾತನಾಡಿ, `ನೂರಾರು ಮಂದಿ ಆಯೋಗಕ್ಕೆ ಕರೆ ಮಾಡಿ ಕಾಯ್ದೆ ಕುರಿತು ಮಾಹಿತಿ ಕೇಳುತ್ತಿದ್ದಾರೆ. ಜನರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಶಿಕ್ಷಣ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಕೈಜೋಡಿಸಬೇಕು~ ಎಂದರು.

ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ
`ಆರಂಭಿಕ ಹಂತದಲ್ಲಿ ಆರ್‌ಟಿಇ ಕಾರ್ಯಪಡೆ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಶೀಘ್ರದಲ್ಲಿ ಚಾಮರಾಜನಗರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕಾರ್ಯಪಡೆಯ ಘಟಕಗಳು ಆರಂಭಗೊಳ್ಳಲಿವೆ~ ಎಂದು ಸಂಚಾಲಕ ನಾಗಸಿಂಹ ಜಿ.ರಾವ್ ತಿಳಿಸಿದರು.

`ಮಕ್ಕಳು ಸಮುದಾಯದ ಆಸ್ತಿ. ಮಕ್ಕಳ ರಕ್ಷಣೆ ಸಮಾಜದ ಹಕ್ಕು. ಈ ನಿಟ್ಟಿನಲ್ಲಿ ಕಾರ್ಯಪಡೆ ಆರಂಭಿಸಲಾಗಿದ್ದು, ಈ ವರೆಗೆ 150 ಮಂದಿ ಸದಸ್ಯರಾಗಿದ್ದಾರೆ. ಸದಸ್ಯರಿಗೆ ಶಿಕ್ಷಣದ ಹಕ್ಕು, ಮಕ್ಕಳ ಹಕ್ಕು, ಮಾನವ ಹಕ್ಕುಗಳ ಬಗ್ಗೆ ತರಬೇತಿ ನೀಡಲಾಗುವುದು. ಶನಿವಾರ ಹಾಗೂ ಭಾನುವಾರ ತರಬೇತಿ ಹಮ್ಮಿಕೊಳ್ಳಲಾಗುವುದು~ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.