ADVERTISEMENT

ಅಪಹರಣ ಪ್ರಕರಣ ಭೇದಿಸಿದ ಸಿಸಿಬಿ ಪೊಲೀಸರು; ಒತ್ತೆಯಲ್ಲಿದ್ದ ವ್ಯಕ್ತಿ ಪಾರು

​ಪ್ರಜಾವಾಣಿ ವಾರ್ತೆ
Published 20 ಮೇ 2012, 19:15 IST
Last Updated 20 ಮೇ 2012, 19:15 IST

ಬೆಂಗಳೂರು:  ಹಣಕ್ಕಾಗಿ ಟ್ರಾನ್ಸ್‌ಪೋರ್ಟ್ ಏಜೆನ್ಸಿ ಉದ್ಯೋಗಿಯನ್ನು ಅಪಹರಿಸಿದ್ದ ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಅಪಹೃತ ವ್ಯಕ್ತಿಯನ್ನು ರಕ್ಷಿಸುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

ತಮಿಳುನಾಡಿನ ಆರ‌್ಮುಗಂ, ಫೆಲಿಕ್ಸ್, ನಲ್ಲಮುತ್ತು, ವಾಸು ಮತ್ತು ಸೆಲ್ವರಾಜ್ ಬಂಧಿತರು. ಆರೋಪಿಗಳು ರಾಜಾಜಿನಗರ ಆರನೇ ಬ್ಲಾಕ್ ನಿವಾಸಿ ರಿಷಿ ವಿ.ಕಪೂರ್ (38) ಎಂಬುವರನ್ನು ಮೇ 8ರಂದು ಅಪಹರಿಸಿದ್ದರು.
ರಿಷಿ ಅವರು ಈ ಹಿಂದೆ ತಮಿಳುನಾಡಿನ ಟ್ರಾನ್ಸ್‌ಪೋರ್ಟ್ ಏಜೆನ್ಸಿಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದರು. ಆ ಸಂದರ್ಭದಲ್ಲಿ ಅವರು ಸ್ಥಳೀಯ ಪೆಟ್ರೋಲ್ ಬಂಕ್‌ನ ಮಾಲೀಕ ವರಪ್ರಸಾದ್ ಎಂಬುವರ ಜತೆ ಹಣಕಾಸು ವ್ಯವಹಾರ ನಡೆಸುತ್ತಿದ್ದರು.

ತಮಿಳುನಾಡಿನ ಟ್ರಾನ್ಸ್‌ಪೋರ್ಟ್ ಏಜೆನ್ಸಿಯ ಕೆಲಸ ಬಿಟ್ಟಿದ್ದ ರಿಷಿ, ನಗರದ ಟ್ರಾನ್ಸ್‌ಪೋರ್ಟ್ ಏಜೆನ್ಸಿಯೊಂದರಲ್ಲಿ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದರು. ಹಣಕಾಸು ವಿಷಯವಾಗಿ ವರಪ್ರಸಾದ್ ಮತ್ತು ರಿಷಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ವರಪ್ರಸಾದ್, ಧರ್ಮ ಎಂಬಾತನಿಗೆ ಸುಪಾರಿ ಕೊಟ್ಟು ಅವರನ್ನು ಅಪಹರಣ ಮಾಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ ಹೋಗುತ್ತಿದ್ದ ಅವರನ್ನು ಆರೋಪಿಗಳು ಹೆಬ್ಬಾಳ ವರ್ತುಲ ರಸ್ತೆಯಲ್ಲಿ ಅಡ್ಡಗಟ್ಟಿ ಅಪಹರಿಸಿದ್ದರು. ತಮಿಳುನಾಡಿಗೆ ಎಳೆದೊಯ್ದು ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಅವರಿಂದಲೇ ಪತ್ನಿ ಭಾರತಿ ಕಪೂರ್ ಅವರಿಗೆ ಕರೆ ಮಾಡಿಸಿ 40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಭಾರತಿ ರಾಜಾಜಿನಗರ ಠಾಣೆಗೆ ಮೇ 14ರಂದು ದೂರು ನೀಡಿದ್ದರು.

ಆರೋಪಿಗಳ ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರು ತಮಿಳುನಾಡಿನ ವೆಲಚೆರಿಯ ಮನೆಯೊಂದರಲ್ಲಿ ಇರುವುದನ್ನು ಪತ್ತೆ ಹಚ್ಚಲಾಯಿತು. ಆ ಮನೆಯ ಮೇಲೆ ದಾಳಿ ನಡೆಸಿದಾಗ ಆರೋಪಿಗಳು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು. ಸಿಬ್ಬಂದಿ ಸ್ಥಳೀಯ ಪೊಲೀಸರ ನೆರವಿನಿಂದ ಅವರನ್ನು ಬೆನ್ನಟ್ಟಿ ಬಂಧಿಸಿದರು.ವರಪ್ರಸಾದ್, ಧರ್ಮ ಮತ್ತಿತರರು ತಲೆಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.