ADVERTISEMENT

ಅರ್ಕಾವತಿ ಬಡಾವಣೆ ಬಗೆಹರಿದ ವಿವಾದ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ಬೆಂಗಳೂರು: ಅರ್ಕಾವತಿ ಬಡಾವಣೆ ನಿರ್ಮಾಣ ಸಂಬಂಧ ಉಂಟಾಗಿದ್ದ ವಿವಾದ ಕೊನೆಗೂ ಬಗೆಹರಿದಿದ್ದು, ಬಡಾವಣೆಗಾಗಿ ಭೂಮಿ ನೀಡಿರುವ ರೈತರಿಗೆ ಅಭಿವೃದ್ಧಿ ಪಡಿಸಿದ ಶೇ 40ರಷ್ಟು ಜಮೀನು ನೀಡುವ ಸರ್ಕಾರದ ಪ್ರಸ್ತಾವಕ್ಕೆ ರೈತರು ಸಮ್ಮತಿಸಿದ್ದಾರೆ.ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶುಕ್ರವಾರ ನಡೆದ ನಗರದ ಶಾಸಕರು, ಸಚಿವರು ಮತ್ತು ರೈತ ಮುಖಂಡರ ಸಭೆಯಲ್ಲಿ ವಿವಾದಕ್ಕೆ ಸರ್ವ ಸಮ್ಮತ ಪರಿಹಾರ ರೂಪಿಸಲಾಗಿದ್ದು, ಇದಕ್ಕೆ ರೈತರು ಒಪ್ಪಿದ್ದಾರೆ ಎಂದು ಗೃಹ ಸಚಿವ ಆರ್.ಅಶೋಕ ಸುದ್ದಿಗಾರರಿಗೆ ತಿಳಿಸಿದರು.

2003ರಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಗ ಪ್ರತಿ ಎಕರೆಗೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು. ಆದರೆ ಇದಕ್ಕೆ ಒಪ್ಪದ ರೈತರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಷ್ಟೇ ಅಲ್ಲದೆ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಕಳೆದ ಕೆಲ ದಿನಗಳಿಂದ ಧರಣಿ ನಡೆಸುತ್ತಿದ್ದರು. ಧರಣಿ ನಿರತರೊಂದಿಗೆ ಈಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತುಕತೆ ನಡೆಸಿದ ಸಂದರ್ಭದಲ್ಲಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರು. ಆ ಪ್ರಕಾರ ಸಚಿವರಾದ ಆರ್.ಅಶೋಕ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದ ಡಿ.ಬಿ.ಚಂದ್ರೇಗೌಡ ಅವರು ಶುಕ್ರವಾರ ಬೆಳಿಗ್ಗೆ ರೈತ ಮುಖಂಡರೊಂದಿಗೆ ಚರ್ಚಿಸಿ ವಿವಾದಕ್ಕೆ ಇತಿಶ್ರೀ ಹಾಡಿದರು.

ರೈತರು ಅಭಿವೃದ್ಧಿಪಡಿಸಿದ ಭೂಮಿಯನ್ನು ಶೇ 60ರಷ್ಟು ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆದರೆ ಅಂತಿಮವಾಗಿ ಶೇ 40ರಷ್ಟು ಭೂಮಿ ನೀಡಲು ಸಮ್ಮತಿಸಲಾಯಿತು. ಒಂದು ಎಕರೆ ಭೂಮಿಯನ್ನು ರೈತರು ನೀಡಿದರೆ ಅಭಿವೃದ್ಧಿಪಡಿಸಿದ ನಂತರ 9,583 ಚದರ ಅಡಿ ಜಾಗ ಮರಳಿ ರೈತರ ಕೈಸೇರಲಿದೆ.ಮಾತುಕತೆ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ  ಕೋಡಿಹಳ್ಳಿ ಚಂದ್ರಶೇಖರ್, ಶಾಸಕ ಕೃಷ್ಣ ಬೈರೇಗೌಡ, ಸತೀಶ್ ರೆಡ್ಡಿ, ರೈತ ಮುಖಂಡ ಡಿ.ಎಸ್.ಗೌಡ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.