ADVERTISEMENT

‘ಅಹಿಂಸಾ’ ನೌಕರರ ರ‍್ಯಾಲಿ; ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 20:10 IST
Last Updated 10 ನವೆಂಬರ್ 2017, 20:10 IST
ನಗರದ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಶುಕ್ರವಾರ ಮಧ್ಯಾಹ್ನ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪಕ್ಕದ ಕೆ.ಆರ್‌.ಮಾರುಕಟ್ಟೆಯ ಏಕಮುಖ ರಸ್ತೆಯಲ್ಲಿ ಬೈಕ್‌ ಸವಾರರು ಸಂಚರಿಸಿದರು –ಪ್ರಜಾವಾಣಿ ಚಿತ್ರ
ನಗರದ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಶುಕ್ರವಾರ ಮಧ್ಯಾಹ್ನ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪಕ್ಕದ ಕೆ.ಆರ್‌.ಮಾರುಕಟ್ಟೆಯ ಏಕಮುಖ ರಸ್ತೆಯಲ್ಲಿ ಬೈಕ್‌ ಸವಾರರು ಸಂಚರಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಡ್ತಿ ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗ) ನೌಕರರು ಶುಕ್ರವಾರ ರ‍್ಯಾಲಿ ನಡೆಸಿದ್ದರಿಂದ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ರೈಲು, ಬಸ್‌ ಹಾಗೂ ಖಾಸಗಿ ವಾಹನಗಳಲ್ಲಿ ನಗರಕ್ಕೆ ಬಂದಿದ್ದ ನೌಕರರು ಬೆಳಿಗ್ಗೆ 9 ಗಂಟೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದರು. ಅದರಿಂದಾಗಿ ಉದ್ಯಾನದ ಅಕ್ಕ–ಪಕ್ಕದ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಶೇಷಾದ್ರಿಪುರ ಮೇಲ್ಸೇತುವೆ, ಮಹಾರಾಣಿ ಕಾಲೇಜು ಮುಂಭಾಗ, ಪ್ಯಾಲೇಸ್‌ ರಸ್ತೆ, ಆನಂದರಾವ್ ವೃತ್ತ ಹಾಗೂ ನೃಪತುಂಗ ರಸ್ತೆಯಲ್ಲಿ ದಟ್ಟಣೆ ಕಂಡುಬಂತು.

ಉದ್ಯಾನದಿಂದ 11 ಗಂಟೆಗೆ ಹೊರಟ ರ‍್ಯಾಲಿಯು ಪ್ಯಾಲೇಸ್‌ ರಸ್ತೆ, ಚಾಲುಕ್ಯ ವೃತ್ತ, ಬಳ್ಳಾರಿ ರಸ್ತೆ ಮೂಲಕ ಸಾಗಿ 1 ಗಂಟೆಗೆ ಅರಮನೆ ಮೈದಾನ ತಲುಪಿತು. ರ‍್ಯಾಲಿ ಸಾಗುತ್ತಿದ್ದ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರವೇ ಬಂದ್‌ ಆಗಿತ್ತು.

ADVERTISEMENT

ವಿಮಾನ ನಿಲ್ದಾಣದಿಂದ ಬರುತ್ತಿದ್ದ ವಾಹನಗಳನ್ನು ಸಿ.ವಿ.ರಾಮನ್‌ ರಸ್ತೆ ಕೆಳಸೇತುವೆಯಲ್ಲಿ ಕೆಲನಿಮಿಷ ತಡೆಯಲಾಗಿತ್ತು. ನಿಲ್ದಾಣದತ್ತ ಹೋಗುತ್ತಿದ್ದ ವಾಹನಗಳನ್ನು ರ‍್ಯಾಲಿ ಹಿಂದೆ ಬಿಡಲಾಯಿತು. ಇದರಿಂದ ವಾಹನಗಳು ನಿಧಾನವಾಗಿ ಚಲಿಸಿದವು. ದಟ್ಟಣೆ ಹೆಚ್ಚಾಗುತ್ತಿದ್ದಂತೆ, ರ‍್ಯಾಲಿ ಸಾಗುತ್ತಿದ್ದ ರಸ್ತೆಯ ಅರ್ಧಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು. ರ‍್ಯಾಲಿಯು ಮೈದಾನ ತಲುಪಿದ ನಂತರ, ಸಂಚಾರ ವ್ಯವಸ್ಥೆ ಯಥಾಸ್ಥಿತಿಗೆ ಮರಳಿತು.

ಪ್ರತಿಭಟನೆ ವೇಳೆ ದಟ್ಟಣೆ ಉಂಟಾಗಬಾರದು ಎಂದು ಸಂಚಾರ ಪೊಲೀಸರು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಉದ್ಯಾನ ಬಳಿ ಪ್ರತಿಭಟನಾಕಾರರ ವಾಹನಗಳೇ ಹೆಚ್ಚಿದ್ದವು. ಅಂಥ ವಾಹನಗಳನ್ನು ಚಾಲಕರು ರ‍್ಯಾಲಿಯ ಹಿಂದೆಯೇ ಚಲಾಯಿಸಿಕೊಂಡು ಹೋಗಿದ್ದರಿಂದ ದಟ್ಟಣೆ ಉಂಟಾಯಿತು.

***
ನಗರದ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಿಎಂಟಿಸಿ ಬಸ್ಸೊಂದು ಕೆಟ್ಟು ನಿಂತಿತು. ಅದರಿಂದ ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿ, ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.

ಪುರಭವನದಿಂದ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ ಕಡೆಗೆ ಹೊರಟಿದ್ದ ಬಸ್‌, ಕೆ.ಆರ್‌.ಮಾರುಕಟ್ಟೆ ಬಳಿ ಬರುತ್ತಿದ್ದಂತೆ ಬಂದ್‌ ಆಯಿತು. ಪುನಃ ಸ್ಟಾರ್ಟ್‌ ಆಗಲಿಲ್ಲ. ಆಗ ಪ್ರಯಾಣಿಕರನ್ನು ಬೇರೊಂದು ಬಸ್ಸಿನಲ್ಲಿ ಕಳುಹಿಸಲಾಯಿತು. ಬಸ್‌ ಪಕ್ಕ ದ್ವಿಚಕ್ರ ವಾಹನಗಳು ಹಾದು ಹೋಗಲು ಮಾತ್ರ ಸ್ಥಳಾವಕಾಶವಿತ್ತು. ಉಳಿದೆಲ್ಲ ವಾಹನಗಳು, ಅದರ ಹಿಂದೆಯೇ ಸಾಲುಗಟ್ಟಿ ನಿಂತಿದ್ದವು.

ಕೆಲ ವಾಹನಗಳ ಸವಾರರು, ಕೆ.ಆರ್‌.ಮಾರುಕಟ್ಟೆಗೆ ಹೋಗುವ ಏಕಮುಖ ರಸ್ತೆಯಲ್ಲಿ ಸಂಚರಿಸಿ ಮೈಸೂರು ರಸ್ತೆಗೆ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.