ADVERTISEMENT

`ಆಗದಿದ್ದರೆ ಹೇಳಿ, ಬಿಬಿಎಂಪಿ ಮುಚ್ಚೋಣ'

ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:54 IST
Last Updated 5 ಸೆಪ್ಟೆಂಬರ್ 2013, 19:54 IST

ಬೆಂಗಳೂರು: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎದುರಿಸುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಯಾವ ಪ್ರಮಾಣದ್ದು? ಈ ಸಮಸ್ಯೆಯನ್ನು ಪರಿಹರಿಸಲು ನಿಮ್ಮಿಂದ ಆಗದಿದ್ದರೆ ಹೇಳಿ, ಪಾಲಿಕೆಯನ್ನು ಮುಚ್ಚಿ ಅದರ ಕೆಲಸಗಳನ್ನು ಬೇರೊಂದು ಪ್ರಾಧಿಕಾರಕ್ಕೆ ವಹಿಸುವಂತೆ ಆದೇಶ ನೀಡುತ್ತೇವೆ' ಎಂದು ಮೌಖಿಕವಾಗಿ ಹೇಳುವ ಮೂಲಕ ಹೈಕೋರ್ಟ್ ಬಿಬಿಎಂಪಿಯನ್ನು ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.

41 ಪ್ಯಾಕೇಜ್‌ಗಳಿಗೆ ಹೊಸದಾಗಿ ಕರೆದಿರುವ ಟೆಂಡರ್‌ನಲ್ಲಿ ನಿಯಮ ಪಾಲಿಸಿಲ್ಲ ಎಂದು ದೂರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಕುಮಾರ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ಐಎಎಸ್ ಅಧಿಕಾರಿಯೊಬ್ಬರು ಪಾಲಿಕೆಯ ಮುಖ್ಯಸ್ಥರಾಗಿದ್ದಾರೆ. ಇಷ್ಟಿದ್ದರೂ, ನ್ಯಾಯಾಲಯ ನೀಡುವ ಆದೇಶಗಳನ್ನು ಪಾಲಿಸಲು ನಿಮ್ಮಿಂದ ಸಾಧ್ಯವಾಗುವುದಿಲ್ಲವೇ?' ಎಂದು ಪ್ರಶ್ನಿಸಿತು.

`ಟೆಂಡರ್ ನೀಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಾವು ನೀಡಿದ್ದ ಆದೇಶ ಏನು? ಆದರೆ ನೀವು ಅನುಸರಿಸುತ್ತಿರುವುದು ಏನು? ಈ ರೀತಿ ಏಕೆ ನಡೆದುಕೊಳ್ಳುತ್ತಿದ್ದೀರಿ?' ಎಂದೂ ಪ್ರಶ್ನಿಸಿತು. ಯಾರಿಗೆ, ಯಾವಾಗ, ಎಷ್ಟು ಅವಧಿಗೆ ತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲಾಗಿದೆ ಎಂಬ ಬಗ್ಗೆ ವಿವರ ನೀಡುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿ, ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.