ADVERTISEMENT

ಆಣೆ ಮಾಡಿಸಿ ಮಾಂಗಲ್ಯ ಕದ್ದರು!

ಗಮನ ಬೇರೆಡೆ ಸೆಳೆದು ವೃದ್ಧೆಯ 40ಗ್ರಾಂ ಸರ ಕದ್ದೊಯ್ದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:56 IST
Last Updated 5 ಅಕ್ಟೋಬರ್ 2017, 19:56 IST

ಬೆಂಗಳೂರು: ಪರ್ಸ್ ಕದ್ದಿಲ್ಲವೆಂದು ಮಾಂಗಲ್ಯ ಮುಟ್ಟಿ ಪ್ರಮಾಣ ಮಾಡುವಂತೆ ವೃದ್ಧೆಗೆ ಪೀಡಿಸಿದ ಇಬ್ಬರು ಚಾಲಾಕಿ ಮಹಿಳೆಯರು, ನಂತರ ಅವರ ಗಮನ ಬೇರೆಡೆ ಸೆಳೆದು 40 ಗ್ರಾಂನ ಚಿನ್ನದ ಮಾಂಗಲ್ಯ ಸರ ಕದ್ದೊಯ್ದಿದ್ದಾರೆ.‌

ಚನ್ನಸಂದ್ರ ಮುಖ್ಯರಸ್ತೆಯ ಮುಳಕಟ್ಟಮ್ಮ ದೇವಸ್ಥಾನದ ಬಳಿ ಅ.2ರಂದು ಈ ಘಟನೆ ನಡೆದಿದೆ. ವಂಚನೆಗೊಳಗಾದ ಪದ್ಮಾ (69) ಅವರು ರಾಜರಾಜೇಶ್ವರಿನಗರ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ಆಧರಿಸಿ ವಂಚಕಿಯರ ಬಂಧನಕ್ಕೆ ಬಲೆ ಬೀಸಿದ್ದಾರೆ.

ದೇವಸ್ಥಾನಕ್ಕೆ ಕರೆದಳು: ‘ಚನ್ನಸಂದ್ರದ ಕಾವೇರಿ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ನೆಲೆಸಿರುವ ನಾನು, ಅ.2ರ ಬೆಳಿಗ್ಗೆ 10.15ರ ಸುಮಾರಿಗೆ ಅಕ್ಕಿ ಬೀಸಿಕೊಂಡು ಬರಲು ಸಮೀಪದ ಮಿಲ್‌ಗೆ ಹೋಗಿದ್ದೆ. ಇನ್ನೂ ಮಿಲ್ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ, ಹೊರಗಡೆಯೇ ಕುಳಿತಿದ್ದೆ. ಈ ವೇಳೆ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ನನ್ನ ಬಳಿ ಬಂದ ಒಬ್ಬಾಕೆ, ‘ಮಿಲ್ ಬಾಗಿಲು ತೆಗೆಯುವಷ್ಟರಲ್ಲಿ ದೇವಸ್ಥಾನಕ್ಕೆ ಹೋಗಿ ಬರೋಣ ಬನ್ನಿ ಆಂಟಿ’ ಎಂದು ಕರೆದಳು. ಹೀಗಾಗಿ, ನಾನು ಆಕೆಯ ಜತೆ ಸಮೀಪದ ಶನಿಮಹಾತ್ಮ ದೇವಸ್ಥಾನಕ್ಕೆ ತೆರಳಿದೆ’ ಎಂದು ಪದ್ಮಾ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ದೇವಸ್ಥಾನದ ಬಾಗಿಲು ಸಹ ಹಾಕಿದ್ದರಿಂದ ಇಬ್ಬರೂ ಸಮೀಪದ ಕಟ್ಟೆಯೊಂದರ ಮೇಲೆ ಕುಳಿತುಕೊಂಡೆವು. ಈ ವೇಳೆ ಆಕೆ, ‘ಆಂಟಿ ದುಡ್ಡು ಎಣಿಸಬೇಕಿದೆ. ಸ್ವಲ್ಪ ಹೊತ್ತು ಪಾಪುವನ್ನು ಎತ್ತಿಕೊಳ್ಳಿ’ ಎಂದು ಮಗುವನ್ನು ನನ್ನ ಕೈಗೆ ಕೊಟ್ಟಳು. ಆಕೆ ನೋಟು ಎಣಿಸುತ್ತಿರುವಾಗಲೇ ಸ್ಥಳಕ್ಕೆ ಬಂದ ಮತ್ತೊಬ್ಬ ಮಹಿಳೆ, ‘ನನ್ನ ಪರ್ಸ್ ಕಳವಾಗಿದೆ. ನೀವೇನಾದರೂ ತೆಗೆದುಕೊಂಡಿದ್ದೀರಾ’ ಎಂದು ಕೇಳಿದಳು. ಅದಕ್ಕೆ ನಾವಿಬ್ಬರೂ ಇಲ್ಲ ಎಂದು ಹೇಳಿದೆವು.

‘ಪರ್ಸ್ ಕದ್ದಿಲ್ಲವೆಂದು ತಾಳಿ ಮೇಲೆ ಪ್ರಮಾಣ ಮಾಡಿ ಹೇಳಿ ಎಂದು ಆ ಮಹಿಳೆ ಪಟ್ಟು ಹಿಡಿದಳು. ನನ್ನ ಕೈಗೆ ಮಗು ಕೊಟ್ಟಿದ್ದವಳು ತಕ್ಷಣ ತನ್ನ ತಾಳಿ ತೆಗೆದು ಆಣೆ ಮಾಡಿದಳು. ಆ ನಂತರ ನಾನು ಸಹ ಮಾಂಗಲ್ಯ ಸರ ತೆಗೆದು ಪ್ರಮಾಣ ಮಾಡಿದೆ.’

‘ಈ ಹಂತದಲ್ಲಿ ಮಾಂಗಲ್ಯ ಪಡೆದ ಅವರಿಬ್ಬರೂ, ‘ಈಗಷ್ಟೇ ತಾಳಿ ಮೇಲೆ ಪ್ರಮಾಣ ಮಾಡಿದ್ದೀರಿ. ತಕ್ಷಣ ಅದನ್ನು ಕುತ್ತಿಗೆಗೆ ಹಾಕಿಕೊಂಡರೆ ಪತಿ ಜೀವಕ್ಕೆ ಅಪಾಯ. ಇದನ್ನು ಸೀರೆಯ ಸೆರಗಿನಲ್ಲಿಟ್ಟುಕೊಂಡು ಮನೆಗೆ ಹೋಗಿ’ ಎಂದು ಹೇಳಿದರು. ಅವರೇ ಸೆರಗಿಗೆ ಗಂಟು ಕಟ್ಟಿ ಅಲ್ಲಿಂದ ಹೊರಟು ಹೋದರು.

‘ನಾನು ಮನೆಗೆ ಹೋಗಿ ಗಂಟು ಬಿಚ್ಚಿದಾಗ ಅದರಲ್ಲಿ ಬರೀ ಮಣ್ಣು ಇತ್ತು. ಹೀಗೆ, ನನ್ನ ಗಮನ ಬೇರೆಡೆ ಸೆಳೆದು ಮಹಿಳೆಯರು ವಂಚಿಸಿದ್ದಾರೆ’ ಎಂದು ತಿಳಿಸಿರುವ ಪದ್ಮಾ ಅವರು, ವಂಚಿಸಿರುವ ಮಹಿಳೆಯರನ್ನು ಪತ್ತೆ ಮಾಡಿ, 40 ಗ್ರಾಂನ ಚಿನ್ನದ ಮಾಂಗಲ್ಯ ಸರ ವಾಪಸ್ ಕೊಡಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

**

ಪತ್ತೆಗೆ ವಿಶೇಷ ತಂಡ ರಚನೆ

‘ಮಗು ಎತ್ತಿಕೊಂಡು ಬಂದಿದ್ದ ಮಹಿಳೆ ಕೆಂಪು ಸೀರೆ ತೊಟ್ಟಿದ್ದು, ಆಕೆಯ ವಯಸ್ಸು 30 ರಿಂದ 35 ವರ್ಷ. ಆ ನಂತರ ಬಂದಾಕೆ 20 ರಿಂದ 25 ವರ್ಷದವಳು. ಆಕೆ ಚೂಡಿದಾರ್ ಧರಿಸಿದ್ದಳು’ ಎಂದು ಪದ್ಮಾ ಹೇಳಿಕೆ ಕೊಟ್ಟಿದ್ದಾರೆ. ‌ಅವರ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ. ದೇವಸ್ಥಾನ ಸಮೀಪದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಆರೋಪಿಗಳ ಚಲನವಲನಗಳು ದಾಖಲಾಗಿದ್ದು, ಅದನ್ನು ಆಧರಿಸಿ ಶೋಧ ನಡೆಸುತ್ತಿದ್ದೇವೆ‌ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.