ಬೆಂಗಳೂರು: ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ನಾಗರಿಕರಿಗೆ `ಆಧಾರ್~ ಗುರುತಿನ ಚೀಟಿಯನ್ನು ತ್ವರಿತವಾಗಿ ವಿತರಿಸುವ ಉದ್ದೇಶದಿಂದ ಹೊಸ ತಂತ್ರಾಂಶದ ಪರೀಕ್ಷಾರ್ಥ ಬಳಕೆಗೆ ಚಾಲನೆ ನೀಡಿದೆ. ನೂತನ ತಂತ್ರಾಂಶದ ಪೂರ್ಣ ಪ್ರಮಾಣದ ಬಳಕೆ ಸೋಮವಾರದಿಂದ (ಇದೇ 30) ಆರಂಭವಾಗಲಿದೆ. ಅದಾದ ನಂತರವಷ್ಟೇ `ಆಧಾರ್~ ಗುರುತಿನ ಚೀಟಿ ನೋಂದಣಿ ಪ್ರಕ್ರಿಯೆ ಚಾಲನೆ ಪಡೆದುಕೊಳ್ಳಲಿದೆ.
ನಾಗರಿಕರು ನೀಡುವ ಮಾಹಿತಿಯನ್ನು ಹೆಚ್ಚು ನಿಖರವಾಗಿ ದಾಖಲಿಸುವ ಹಾಗೂ ಗುಪ್ತವಾಗಿ ಸಂಗ್ರಹಿಸುವ ಉದ್ದೇಶದಿಂದ ನೂತನ ತಂತ್ರಾಂಶವನ್ನು (ಸಾಫ್ಟ್‌ವೇರ್) ಅಭಿವೃದ್ಧಿಪಡಿಸಲಾಗಿದೆ. ತಂತ್ರಾಂಶಕ್ಕೆ ಯುಐಡಿಎಐನ ಪ್ರಾದೇಶಿಕ ಕಚೇರಿಗಳಲ್ಲಿ ಬುಧವಾರ ಚಾಲನೆ ನೀಡಲಾಗಿದೆ. ಅಲ್ಲಿನ ಅಧಿಕಾರಿಗಳಿಂದ ಬರುವ ಸಲಹೆ-ಸೂಚನೆ ಆಧರಿಸಿ ತಂತ್ರಾಂಶದಲ್ಲಿ ಕೆಲವು ಬದಲಾವಣೆ ತರುವ ಸಾಧ್ಯತೆಯೂ ಇದೆ ಎಂದು ಯುಐಡಿಎಐನ ಉಪ ಮಹಾನಿರ್ದೇಶಕ ಅಶೋಕ ದಳವಾಯಿ `ಪ್ರಜಾವಾಣಿ~ಗೆ ತಿಳಿಸಿದರು.
ಇದೇ 30ರಂದು ತಂತ್ರಾಂಶವನ್ನು ಬಳಕೆಗೆ ಮುಕ್ತಗೊಳಿಸಲಾಗುವುದು. ನಂತರ ನೋಂದಣಿ ಏಜೆನ್ಸಿ ಯಾವುದಿರಬೇಕು ಎಂಬ ಕುರಿತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ನೇತೃತ್ವದ ಸಮಿತಿ ನಿರ್ಧಾರ ಕೈಗೊಳ್ಳಬೇಕು. ಹೊಸ ತಂತ್ರಾಂಶ ಅಳವಡಿಕೆಯ ಕಾರಣ, `ಆಧಾರ್~ ಗುರುತಿನ ಚೀಟಿ ನೋಂದಣಿ ವೆಚ್ಚ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿಂದಿನ ನೋಂದಣಿ ಏಜೆನ್ಸಿಯನ್ನೇ ಮುಂದುವರಿಸಬೇಕೋ, ಇಲ್ಲವೋ ಎಂಬ ಕುರಿತು ಮುಖ್ಯಮಂತ್ರಿಗಳ ನೇತೃತ್ವದ ಸಮಿತಿ ನಿರ್ಣಯಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.
ನೋಂದಣಿ ಏಜೆನ್ಸಿ ಯಾವುದು ಎಂಬ ಕುರಿತು ಅಂತಿಮ ನಿರ್ಣಯ ಹೊರಬಿದ್ದ ನಂತರವಷ್ಟೇ `ಆಧಾರ್~ ಗುರುತಿನ ಚೀಟಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಕಾಲಮಿತಿ ಇಲ್ಲ. ಪ್ರಕ್ರಿಯೆ ಸೋಮವಾರವೇ ಆರಂಭವಾಗಬಹುದು ಅಥವಾ ವಿಳಂಬವೂ ಆಗಬಹುದು ಎಂದರು. `ಆಧಾರ್~ ಗುರುತಿನ ಚೀಟಿ ನೋಂದಣಿ ಕಾರ್ಯ ಎರಡು ತಿಂಗಳಿನಿಂದ ಸ್ಥಗಿತಗೊಂಡಿದೆ.
17.5 ಕೋಟಿ ಸಂಖ್ಯೆ: ದೇಶದಾದ್ಯಂತ ಇದುವರೆಗೆ ಅಂದಾಜು 17.5 ಕೋಟಿ ನಾಗರಿಕರಿಂದ `ಬಯೋಮೆಟ್ರಿಕ್~ ಮತ್ತು ಇತರ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ ಗುರುತಿನ ಚೀಟಿಯನ್ನು ಎಲ್ಲರಿಗೂ ವಿತರಿಸಲಾಗಿಲ್ಲ ಎಂದರು.
ಎರಡನೆಯ ಹಂತದಲ್ಲಿ ನೋಂದಣಿ ಮತ್ತು ಮಾಹಿತಿಯನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡುವಾಗ ಪ್ರಾಧಿಕಾರ ಹೆಚ್ಚಿನ ನಿಗಾ ವಹಿಸಲಿದೆ. ಪ್ರತಿ ಕೇಂದ್ರದಲ್ಲಿ ನೋಂದಣಿಗೆ ಬರುವ ಸಾರ್ವಜನಿಕರು ನೀಡುವ ಮಾಹಿತಿಯ ಸತ್ಯಾಸತ್ಯತೆ ಪರಿಶೀಲನೆಗೆ ಪ್ರತ್ಯೇಕ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ನೇಮಕ ಮಾಡುವುದು ಕಡ್ಡಾಯ.
ಮಾಹಿತಿಯನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡುವ ಹಂತದಲ್ಲಿ ಯಾವುದೇ ತಪ್ಪುಗಳು ಆಗದಂತೆ ನಿಗಾ ವಹಿಸಲಾಗಿದೆ. ಒಂದು ತಪ್ಪು ಕಂಡುಬಂದರೂ ಸಂಬಂಧಪಟ್ಟ ಸಿಬ್ಬಂದಿಗೆ 500 ರೂಪಾಯಿವರೆಗೆ ದಂಡ ವಿಧಿಸಲಾಗುವುದು. ಬಯೋಮೆಟ್ರಿಕ್ ಮಾಹಿತಿಯನ್ನು ಯುಐಡಿಎಐನ ಪ್ರಧಾನ ಸರ್ವರ್‌ಗೆ ಪ್ರತಿ ಹತ್ತು ದಿನಗಳಿಗೆ ಒಮ್ಮೆ ಸಲ್ಲಿಸಬೇಕು. ಇದು ಮಾಹಿತಿ ನಕಲು ತಡೆಗೆ ಸಹಾಯ ಮಾಡುತ್ತದೆ ಎಂದರು.
`ಶಾಶ್ವತ ಕೇಂದ್ರಗಳು~: ಮೊದಲ ಹಂತದಲ್ಲಿ ನೋಂದಣಿ ಪ್ರಕ್ರಿಯೆ ನಡೆದ ಜಿಲ್ಲೆಗಳಲ್ಲೂ ಶಾಶ್ವತ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಲ್ಲದೆ, ಅಗತ್ಯ ದಾಖಲೆಗಳನ್ನು ಹೊಂದಿದವರು ರಾಜ್ಯದ ಯಾವುದೇ ಪ್ರದೇಶದಲ್ಲಿರುವ ನೋಂದಣಿ ಕೇಂದ್ರದ ಮೂಲಕ `ಆಧಾರ್~ ಗುರುತಿನ ಚೀಟಿ ಪಡೆಯಬಹುದು. ಹಿಂದೆ ನೋಂದಣಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡವರೂ ಅಗತ್ಯ ದಾಖಲೆಗಳೊಂದಿಗೆ ಯುಐಡಿಎಐ ಕೇಂದ್ರಕ್ಕೆ ಮತ್ತೆ ಭೇಟಿ ನೀಡಬಹುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.