ADVERTISEMENT

ಆರೇ ದಿನದಲ್ಲಿ 37 ದ್ವಿಚಕ್ರ ವಾಹನ ಕದ್ದರು

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:50 IST
Last Updated 8 ಮೇ 2018, 19:50 IST
ಆರೋಪಿಗಳಾದ ಹರ್ಷವರ್ಧನ್ (ಎಡ ಚಿತ್ರ) ಮತ್ತು ಚಂದ್ರಶೇಖರ್
ಆರೋಪಿಗಳಾದ ಹರ್ಷವರ್ಧನ್ (ಎಡ ಚಿತ್ರ) ಮತ್ತು ಚಂದ್ರಶೇಖರ್   

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಕಂಬಾಲಪಲ್ಲಿ ತಾಲ್ಲೂಕಿನ ಕಾಟಗೊಂಡ ಗ್ರಾಮದ ಹರಿಕೃಷ್ಣ (19), ಆನಂದ್ (24), ಹರ್ಷವರ್ಧನ್ (19) ಹಾಗೂ ಚಂದ್ರಶೇಖರ್‌ (25) ಬಂಧಿತರು. ಅವರಿಂದ ₹21.35 ಲಕ್ಷ ಮೌಲ್ಯದ 37 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಐಪಿಎಲ್‌ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿದ್ದ ವೇಳೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ಓಡಾಡುತ್ತಿದ್ದರು. ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸುತ್ತಿದ್ದ ವಾಹನಗಳನ್ನು ಗುರುತಿಸಿ ಕದ್ದೊಯ್ಯುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಕ್ರೀಡಾಂಗಣದಲ್ಲಿ ಏಪ್ರಿಲ್‌ 13ರಿಂದ 6 ಬಾರಿ ಐಪಿಎಲ್‌ ಪಂದ್ಯಗಳು ನಡೆದಿವೆ. ಆರೇ ದಿನಗಳಲ್ಲಿ ಆರೋಪಿಗಳು, 37 ದ್ವಿಚಕ್ರ ವಾಹನಗಳನ್ನು ಕದ್ದಿದ್ದಾರೆ.’ ಎಂದರು.

ಲಾಕ್‌ ಮುರಿದು ವಾಹನ ಚಾಲು: ‘ದ್ವಿ ಚಕ್ರ ವಾಹನ ಕದಿಯಲೆಂದೇ ಆರೋಪಿಗಳು, ಐಪಿಎಲ್‌ ಪಂದ್ಯಕ್ಕೂ ಮುನ್ನಾದಿನ ನಗರಕ್ಕೆ ಬರುತ್ತಿದ್ದರು. ಸಾರ್ವಜನಿಕರು ತಮ್ಮ ಬೈಕ್‌ಗಳನ್ನು ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿ ಕ್ರಿಕೆಟ್‌ ವೀಕ್ಷಿಸಲು ಕ್ರೀಡಾಂಗಣದೊಳಗೆ ಹೋಗುತ್ತಿದ್ದರು. ಅದನ್ನು ಗಮನಿಸುತ್ತಿದ್ದ ಆರೋಪಿಗಳು, ಹ್ಯಾಂಡಲ್‌ ಲಾಕ್‌ ಮುರಿದು ವಾಹನ ಚಾಲು ಮಾಡುತ್ತಿದ್ದರು. ಕೆಲ ವಾಹನಗಳನ್ನು ಚಾಲು ಮಾಡಲು ನಕಲಿ ಕೀಗಳನ್ನು ಬಳಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಕದ್ದ ಬೈಕ್‌ಗಳನ್ನು ಟಿನ್‌ ಫ್ಯಾಕ್ಟರಿವರೆಗೂ ಓಡಿಸಿಕೊಂಡು ಹೋಗುತ್ತಿದ್ದ ಆರೋಪಿಗಳು, ಅಲ್ಲಿಯ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸುತ್ತಿದ್ದರು. ಮರುದಿನ ಬೆಳಿಗ್ಗೆ ಆ ಬೈಕ್‌ಗಳನ್ನು ತೆಗೆದುಕೊಂಡು ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದರು’ ಎಂದರು.

‘ದ್ವಿಚಕ್ರ ವಾಹನ ಕಳವು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದರಿಂದ, ಗಸ್ತು ಹೆಚ್ಚಿಸಲಾಗಿತ್ತು. ಇತ್ತೀಚೆಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯೊಬ್ಬ ನಮಗೆ ಸಿಕ್ಕಿಬಿದ್ದಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಾಯ್ಬಿಟ್ಟ. ಆತ ನೀಡಿದ ಮಾಹಿತಿಯಂತೆ ಉಳಿದ ಆರೋಪಿಗಳನ್ನು ಬಂಧಿಸಿದೆವು’ ಎಂದರು.

ಫೈನಾನ್ಸ್‌ ಹೆಸರಿನಲ್ಲಿ ಮಾರಾಟ: ‘ಸೆಕೆಂಡ್‌ಹ್ಯಾಂಡ್‌ ವಾಹನ ವ್ಯಾಪಾರಿಗಳ ಜತೆ ಒಡನಾಟವಿಟ್ಟುಕೊಂಡಿದ್ದ ಆರೋಪಿಗಳು, ಅವರಿಗೇ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

ನೋಂದಣಿ ದಾಖಲೆಗಳು ಇಲ್ಲದಿದ್ದರಿಂದ ವಾಹನಗಳನ್ನು ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದರು. ಆಗ, ‘ನಾವು ಫೈನಾನ್ಸ್‌ ಕಂಪನಿ ಉದ್ಯೋಗಿಗಳು. ವಾಹನಗಳ ಮಾಲೀಕರು ಸಾಲ ಮರುಪಾವತಿ ಮಾಡದಿದ್ದರಿಂದ ಜಪ್ತಿ ಮಾಡಿದ್ದೇವೆ. ಸದ್ಯಕ್ಕೆ ವಾಹನ ಖರೀದಿಸಿ. ಕೆಲ ದಿನ ಬಿಟ್ಟು ದಾಖಲೆ ತಂದುಕೊಡುತ್ತೇವೆ’ ಎಂದು ಆರೋಪಿಗಳು ಹೇಳುತ್ತಿದ್ದರು. ಅದನ್ನು ನಂಬಿ ವ್ಯಾಪಾರಿಗಳು, ಅರ್ಧ ಬೆಲೆ ವಾಹನಗಳನ್ನು ಖರೀದಿಸುತ್ತಿದ್ದರು ಎಂದರು.

ರಾಜಕೀಯ ಸಮಾವೇಶದಲ್ಲೂ ಕಳವು: ನಗರದ ಬಳ್ಳಾರಿ ರಸ್ತೆಯ ಅರಮನೆ ಮೈದಾನ ಸೇರಿದಂತೆ ವಿವಿಧೆಡೆ ರಾಜಕೀಯ ಪಕ್ಷಗಳ ಆಯೋಜಿಸಿದ್ದ ಸಮಾವೇಶದ ಸ್ಥಳಕ್ಕೂ ಆರೋಪಿಗಳು ಹೋಗುತ್ತಿದ್ದರು. ಅಲ್ಲಿಯೂ ದ್ವಿ ಚಕ್ರ ವಾಹನಗಳನ್ನು ಕದಿರುವ ಮಾಹಿತಿ ಇದೆ ಎಂದು ಪೊಲೀಸರು ಹೇಳಿದರು.

‘ಕ್ರೀಡಾಂಗಣದ ಬಳಿ ಬೈಕ್‌ಗಳನ್ನು ಕದ್ದಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ರಾಜಕೀಯ ಸಮಾವೇಶದಲ್ಲಿ ಕದ್ದಿರುವ ಬೈಕ್‌ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಆರೋಪಿಗಳ ವಿರುದ್ಧ ಕಬ್ಬನ್ ಪಾರ್ಕ್ ಮತ್ತು ಕಮರ್ಷಿಯಲ್ ಸ್ಟ್ರೀಟ್  ಠಾಣೆಯಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಯಾರಾದರೂ ಬೈಕ್‌ ಕಳೆದುಕೊಂಡವರು ಇದ್ದರೆ, ಠಾಣೆಗೆ ಬಂದು ದೂರು ನೀಡಬಹುದು’ ಎಂದರು.

ಮೋಜು– ಮಸ್ತಿಗಾಗಿ ಕೃತ್ಯ

ಬಂಧಿತ ಆರೋಪಿಗಳೆಲ್ಲ ಒಂದೇ ಗ್ರಾಮದವರು. ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದ ಅವರು, ಕೆಲಸಕ್ಕೆಂದು ಕೆಲ ದಿನ ಬೆಂಗಳೂರಿಗೂ  ಬಂದು ಹೋಗಿದ್ದರು. ನಂತರವೇ ದ್ವಿ ಚಕ್ರ ವಾಹನ ಕಳವು ಮಾಡಲು ತೀರ್ಮಾನಿಸಿದ್ದರು ಎಂದು ಪೊಲೀಸರು ತಿಳಿಸಿದರು.

‘ತಮ್ಮೂರಿನಿಂದ ಬಸ್ಸಿನಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿಗಳು, ವಾಪಸ್‌ ಹೋಗುವಾಗ ಬೈಕ್‌ನಲ್ಲಿ ಹೋಗುತ್ತಿದ್ದರು. ಕೆಲ ಬೈಕ್‌ಗಳನ್ನು ಟಿನ್‌ ಫ್ಯಾಕ್ಟರಿ ಬಳಿಯ ಪಾರ್ಕಿಂಗ್‌ ಜಾಗದಲ್ಲೇ ನಿಲ್ಲಿಸಿದ್ದರು. ಮರುದಿನ ಪುನಃ ನಗರಕ್ಕೆ ಬಂದು ಅವುಗಳನ್ನೂ ತೆಗೆದುಕೊಂಡು ಹೋಗುತ್ತಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.