ADVERTISEMENT

ಆರ್ಟ್ ಆಫ್‌ಲಿವಿಂಗ್ನಿಂದ ಕೆರೆ ಒತ್ತುವರಿ ಆರೋಪ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಬೆಂಗಳೂರು: ಕೆರೆಯನ್ನು ಒತ್ತುವರಿ ಮಾಡಿಕೊಂಡು ಶ್ರೀ ಶ್ರೀ ರವಿಶಂಕರ ಗುರೂಜಿ ಅವರು `ಆರ್ಟ್ ಆಫ್ ಲಿವಿಂಗ್~ ಕಟ್ಟಡ ನಿರ್ಮಾಣ ಮಾಡಿರುವುದಾಗಿ ದೂರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಎನ್.ಶ್ರೀರಾಮ ರೆಡ್ಡಿ ಎನ್ನುವವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ `ಆರ್ಟ್ ಆಫ್ ಲಿವಿಂಗ್~ಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

ಕಗ್ಗಲಿಪುರದಲ್ಲಿನ ಸರ್ವೆ ನಂ. 46ರಲ್ಲಿ ಇರುವ ಸುಮಾರು 42.52 ಹೆಕ್ಟೇರ್ ಪ್ರದೇಶದಲ್ಲಿನ ಉಡಿಪಾಳ್ಯ ಕೆರೆಯನ್ನು ಒತ್ತುವರಿ ಮಾಡಿಕೊಂಡು ಐಷಾರಾಮಿ ಬಂಗಲೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸಂಬಂಧಿತ ಇಲಾಖೆಗಳ ಅನುಮತಿಯನ್ನೂ ಪಡೆದಿಲ್ಲ ಎನ್ನುವುದು ಅರ್ಜಿದಾರರ ದೂರು.

ಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿರುವುದು ಸಣ್ಣ ನೀರಾವರಿ ಇಲಾಖೆಯ ಕರ್ತವ್ಯ.

`ಆರ್ಟ್ ಆಫ್ ಲಿವಿಂಗ್~ ಕಟ್ಟಡವೂ ಇದೇ ರೀತಿ ನಿರ್ಮಾಣಗೊಂಡಿದೆ ಎಂದು ತಿಳಿದಿದ್ದರೂ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದಾರೆ. ಇಡೀ ಕೆರೆಯನ್ನು ಕಬಳಿಸಿ ನಿಸರ್ಗದ ಸೌಂದರ್ಯವನ್ನು ಹಾಳುಗೆಡವಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮಕ್ಕೆ ಆದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

ಭೂಹಗರಣ: ವಿಚಾರಣೆ ಮುಂದಕ್ಕೆ
`ಕರ್ನಾಟಕ ಲೋಕಾಯುಕ್ತ ಕಾಯ್ದೆ~ಯನ್ನು ಮೀರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧದ ಭೂ ಹಗರಣಗಳ ತನಿಖೆಯನ್ನು ನ್ಯಾಯಮೂರ್ತಿ ಬಿ.ಪದ್ಮರಾಜ ಆಯೋಗಕ್ಕೆ ವಹಿಸಲಾಗಿದೆ ಎಂದು ದೂರಿ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಯವರೆಗೆ ವಿಚಾರಣೆಗೆ ತಡೆ ನೀಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.