ADVERTISEMENT

ಆರ್ಯವೈಶ್ಯ ಸಮಾಜ: ರೋಸಯ್ಯಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:35 IST
Last Updated 25 ಸೆಪ್ಟೆಂಬರ್ 2011, 19:35 IST

ಬೆಂಗಳೂರು: ಕರ್ನಾಟಕ ಆರ್ಯವೈಶ್ಯ ಮಹಾಸಭಾ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಮಿಳುನಾಡಿನ ರಾಜ್ಯಪಾಲ ಕೆ. ರೋಸಯ್ಯ ಅವರನ್ನು ಸನ್ಮಾನಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ರೋಸಯ್ಯ, `ಆಂಧ್ರ ಪ್ರದೇಶದಲ್ಲಿ ರಾಜಕೀಯ ಸಂಘಟಕನಾಗಿ, ಸಚಿವನಾಗಿ, ಮುಖ್ಯಮಂತ್ರಿಯಾಗಿ ದುಡಿದೆ. ಈಗ ತಮಿಳುನಾಡಿನ ರಾಜ್ಯಪಾಲನಾಗಿದ್ದೇನೆ. ಈ ಹುದ್ದೆಗಳದ್ದೆಲ್ಲಾ ಒಂದು ತೂಕವಾದರೆ ಜನರ ಅಭಿಮಾನವನ್ನು ಪಡೆದದ್ದು ಇನ್ನೊಂದು ತೂಕ.
 
ನನ್ನ ಶಕ್ತಿ ಸಾಮರ್ಥ್ಯ, ದೊಡ್ಡತನದಿಂದ ದೊಡ್ಡ ದೊಡ್ಡ ಹುದ್ದೆಗಳನ್ನು ಅನುಭವಿಸಿದೆ ಎಂದುಕೊಂಡರೆ ಅದು ತಪ್ಪು. ನನಗಿಂತಲೂ ದೊಡ್ಡವರು ಇದ್ದಾರೆ. ಆದರೆ ಅವರಿಗೆ ಸಿಗದ ಅವಕಾಶ ನನಗೆ ದೊರೆಯಿತು ಅಷ್ಟೇ~ ಎಂದು ಹೇಳಿದರು.

`ನನ್ನ ತಂದೆ ಮೂಲತಃ ವ್ಯಾಪಾರಿಯಲ್ಲ. ಕೇವಲ ಸಣ್ಣ ರೈತನಾಗಿದ್ದರು. ಸಹಿ ಮಾಡಲು ತಿಳಿಯವಷ್ಟು ಓದಿದರೆ ಸಾಕು ಎನ್ನುತ್ತಿದ್ದರು. ಆದರೆ ವಿಧಿ ಬೇರೆಯದನ್ನೇ ಬರೆಯಿತು. ಆಂಧ್ರಪ್ರದೇಶದ ಏಕೀಕರಣದ ಸಂದರ್ಭದಲ್ಲಿ ನಡೆದ ಬಲಿದಾನ ನಾನು ರಾಜಕೀಯಕ್ಕೆ ಧುಮುಕಲು ಪ್ರೇರಣೆಯಾಯಿತು~ ಎಂದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, `ಜಾತಿಯ ಬಲ ಹೊಂದಿಲ್ಲದಿದ್ದರೂ ಅವರು ಮುಖ್ಯಮಂತ್ರಿಯಾದರು. ಅದಕ್ಕಾಗಿ ಯಾವುದೇ ಲಾಬಿಯನ್ನೂ ಅವರು ಮಾಡಲಿಲ್ಲ. ಮುಖ್ಯಮಂತ್ರಿ ಹುದ್ದೆ ಸ್ವತಃ ಅವರ ಮನೆಗೇ ಹುಡುಕಿಕೊಂಡು ಬಂತು.

ಅಧಿಕಾರ ಬಿಡಲು ಹಿಂಜರಿಯುವ ಮುಖ್ಯಮಂತ್ರಿ ಕುರ್ಚಿಯನ್ನು ತಮ್ಮ ಸ್ವಂತ ಆಸನ ಎಂದು ಭಾವಿಸುವವರು ರೋಸಯ್ಯ ಅವರಿಂದ ಪಾಠ ಕಲಿಯಬೇಕಿದೆ~ ಎಂದರು.

ರೋಸಯ್ಯ ಅವರ ಪತ್ನಿ ಶಿವಲಕ್ಷ್ಮಿ, ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಿ.ಜಿ.ನಂದಕುಮಾರ್, ಎಐಸಿಸಿ ಮಾಜಿ ಸದಸ್ಯ ಎಚ್.ಎನ್.ಪ್ರೇಮಕುಮಾರ್, ಉದ್ಯಮಿ ಗಿರೀಶ್ ಪೆಂಡಕೂರು  ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.