ADVERTISEMENT

ಆಸ್ತಿ ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 19:25 IST
Last Updated 3 ಫೆಬ್ರುವರಿ 2011, 19:25 IST

ಬೆಂಗಳೂರು: ತಮ್ಮ ವಿರುದ್ಧ ಭೂ ಹಗರಣದ ಆರೋಪ ಮಾಡಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ತಿರುಗೇಟು ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದು, ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ವಿವಿಧೆಡೆ ಇರುವ ಆಸ್ತಿಗಳ ತನಿಖೆಗೆ ಆದೇಶಿಸಿದ್ದಾರೆ.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ. ಬಾಲಕೃಷ್ಣಗೌಡ ಪತ್ನಿ ಎಚ್.ಕವಿತಾ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಪತ್ನಿ ಭವಾನಿ, ಅವರ ಪುತ್ರರಾದ ಆರ್.ಪ್ರಜ್ವಲ್, ಆರ್. ಸೂರಜ್ ಅವರು ಹೊಂದಿರುವ ಆಸ್ತಿಗಳ ಬಗ್ಗೆ ತನಿಖೆ ಶುರುವಾಗಿದ್ದು, ಅವರಿಗೆಲ್ಲ ನೋಟಿಸ್ ಜಾರಿ ಮಾಡಲಾಗಿದೆ.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ, ‘ಕಾನೂನುಬಾಹಿರವಾಗಿ ದೇವೇಗೌಡ ಕುಟುಂಬದವರು ಕೃಷಿ ಭೂಮಿ ಖರೀದಿಸಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ನಾನು ನೀಡಿದ್ದ ದೂರನ್ನು ಆಧರಿಸಿ ಯಡಿಯೂರಪ್ಪ ತನಿಖೆಗೆ ಆದೇಶಿಸಿದ್ದಾರೆ’ ಎಂದರು.

ಹೊಳೇನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ ಗೋಮಾಳ ಮತ್ತು ಕೆರೆ ಅಂಗಳದ 82 ಎಕರೆ ಭೂಮಿಯನ್ನು ದೇವೇಗೌಡ ಕುಟುಂಬದವರು ದರ್ಖಾಸ್ತು ಮಾಡಿಸಿಕೊಂಡಿದ್ದಾರೆ. ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಕಳೆದ 28ರಂದು ಈ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ ಎಂದರು.

ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬದವರು 500 ಕೋಟಿ ರೂಪಾಯಿ ಬೆಲೆ ಬಾಳುವ ಸುಮಾರು 100 ಎಕರೆ ಜಮೀನು ಹೊಂದಿದ್ದಾರೆ ಎಂದು ಅವರು ಆರೋಪಿಸಿದರು.

ಸದಸ್ಯತ್ವ ರದ್ದುಪಡಿಸಲು ಆಗ್ರಹ: ಎಚ್.ಡಿ.ಕುಮಾರಸ್ವಾಮಿ ಅವರು ಸದಾಶಿವನಗರದಲ್ಲಿ 98.39 ಲಕ್ಷ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಹೊಂದಿದ್ದಾರೆ. ಆದರೆ ನಾಮಪತ್ರ ಸಲ್ಲಿಸುವಾಗ ಇದನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿಲ್ಲ. ಆದ್ದರಿಂದ ಅವರ ಸದಸ್ಯತ್ವವನ್ನು ರದ್ದುಪಡಿಸುವಂತೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಲಿಂಗಾಯತರ ವಿರೋಧಿ: ಲಿಂಗಾಯತರು ಒಳ್ಳೆಯದು ಮಾಡುವುದನ್ನು ದೇವೇಗೌಡ ಕುಟುಂಬದವರು ಸಹಿಸುವುದಿಲ್ಲ ಎಂದು ಅವರು  ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.