ADVERTISEMENT

ಆ ಕಣ್ಣಿಗೆ ಬೆಣ್ಣೆ; ಈ ಕಣ್ಣಿಗೆ ಸುಣ್ಣ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವರಸೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:51 IST
Last Updated 2 ಸೆಪ್ಟೆಂಬರ್ 2013, 19:51 IST

ಬೆಂಗಳೂರು: ನಗರದ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ ಮತ್ತಿತರ ಸ್ಥಳಗಳಿಂದ ತೆರಳುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್‌ಗಳ ಸಿಬ್ಬಂದಿ ಪಡೆಯುವ ಮನೆ ಬಾಡಿಗೆ ಭತ್ಯೆ ಶೇ 25. ಜಿಗಣಿ, ಗುಂಜೂರು ಮತ್ತಿತರ ಗ್ರಾಮೀಣ ಡಿಪೊಗಳಿಂದ ನಗರಕ್ಕೆ ಸಂಚರಿಸುವ ಬಸ್‌ಗಳ ಸಿಬ್ಬಂದಿ ಮನೆ ಬಾಡಿಗೆ ಹಾಗೂ ಗ್ರಾಮೀಣ ವಿಶೇಷ ಭತ್ಯೆ ಸೇರಿ ಒಟ್ಟು ಭತ್ಯೆ ಶೇ 21!

ಇದು ಸಂಸ್ಥೆಯ ನಗರ ಡಿಪೊ ಹಾಗೂ ಗ್ರಾಮೀಣ ಡಿಪೊಗಳ ಸಿಬ್ಬಂದಿ ಪಡೆಯುತ್ತಿರುವ ಭತ್ಯೆಯ ವ್ಯತ್ಯಾಸ. ಸಂಸ್ಥೆಯಲ್ಲಿ ಭತ್ಯೆ ನೀಡುವಾಗಲೂ ತಾರತಮ್ಯ ಮಾಡಲಾಗುತ್ತಿದೆ ಎಂದು ಗ್ರಾಮೀಣ ಡಿಪೊಗಳ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಏಳು ಗ್ರಾಮೀಣ ಡಿಪೊಗಳು ಸೇರಿದಂತೆ 40 ಡಿಪೊಗಳನ್ನು ಸಂಸ್ಥೆ ಹೊಂದಿದೆ. ಜಿಗಣಿ, ಸೂರ್ಯನಗರ, ಸೀಗೆಹಳ್ಳಿ, ಬಿಡದಿ, ಹೊಸಕೋಟೆ, ಅಡಕಮಾರನಹಳ್ಳಿ, ಗುಂಜೂರಿನಲ್ಲಿ ಗ್ರಾಮೀಣ ಡಿಪೊಗಳು ಇವೆ. `ಬಿಎಂಟಿಸಿಯಲ್ಲಿ ಸುಮಾರು 33,000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೊಂದು ಗ್ರಾಮೀಣ ಡಿಪೊಗಳಲ್ಲಿ 500-600 ಸಿಬ್ಬಂದಿ ಸೇರಿ ಏಳು ಡಿಪೊಗಳಲ್ಲಿ 4,000ಕ್ಕೂ ಅಧಿಕ ಸಿಬ್ಬಂದಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಸಂಸ್ಥೆಗೆ ಅಧಿಕ ಲಾಭ ತರುವುದು ಗ್ರಾಮೀಣ ಡಿಪೊಗಳೇ. ಆದರೆ, ಇಲ್ಲಿನ ಸಿಬ್ಬಂದಿಗೆ ತಾರತಮ್ಯ ಮಾಡಲಾಗುತ್ತಿದೆ' ಎಂದು ಅವರು ದೂರಿದ್ದಾರೆ.

`ಬಿಎಂಟಿಸಿಯ ಮೊದಲ ಗ್ರಾಮೀಣ ಡಿಪೊ ಕೈಗಾರಿಕಾ ಪ್ರದೇಶವಾದ ಜಿಗಣಿಯಲ್ಲಿ 2006ರ ಜೂನ್ 15ರಂದು ಆರಂಭವಾಯಿತು. ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರನ್ನು ಜಿಗಣಿಗೆ ವರ್ಗಾವಣೆ ಮಾಡಲಾಯಿತು. 2010ರ ಸೆಪ್ಟೆಂಬರ್‌ವರೆಗೂ ಇಲ್ಲಿನ ಸಿಬ್ಬಂದಿಗೆ ನಗರ ಡಿಪೊಗಳ ಸಿಬ್ಬಂದಿಗೆ ನೀಡುವಷ್ಟೇ ಮನೆ ಬಾಡಿಗೆ ಭತ್ಯೆ ಹಾಗೂ ಸಿಸಿಎ ನೀಡಲಾಗುತ್ತಿತ್ತು. ಆ ಬಳಿಕ ಮನೆ ಬಾಡಿಗೆ ಭತ್ಯೆಯನ್ನು ಶೇ 10ರಿಂದ ಶೇ 7ಕ್ಕೆ ಇಳಿಸಲಾಯಿತು. ಅದೇ ಹೊತ್ತಿಗೆ ನಗರ ಡಿಪೊಗಳ ಸಿಬ್ಬಂದಿಯ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಿಸಲಾಯಿತು. ಗ್ರಾಮೀಣ ವಿಶೇಷ ಭತ್ಯೆ ರೂಪದಲ್ಲಿ ಶೇ 14 ನೀಡಲು ಆರಂಭಿಸಲಾಯಿತು. ಗ್ರಾಮೀಣ ಭತ್ಯೆ ಹೆಸರಿನಲ್ಲಿ ಸಿಬ್ಬಂದಿಗೆ ಅನ್ಯಾಯ ಮಾಡಲಾಗಿದೆ' ಎಂದು ನಿರ್ವಾಹಕರೊಬ್ಬರು ದೂರಿದರು.

`ಸಂಸ್ಥೆಯ ಹಿರಿಯ ಅಧಿಕಾರಿಗಳು ಪೊಲೀಸರನ್ನು ಹಾಗೂ ಶಿಕ್ಷಕರನ್ನು ಉದಾಹರಿಸಿ ಭತ್ಯೆ ತಾರತಮ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ. ಪೊಲೀಸರು ಸರಹದ್ದು ಪ್ರದೇಶದಲ್ಲಿ ಮಾತ್ರ ಕೆಲಸ ಮಾಡುತ್ತಾರೆ. ಶಿಕ್ಷಕರು ಪಾಠ ಮಾಡುವುದು ಒಂದೇ ಶಾಲೆಯಲ್ಲಿ. ಗ್ರಾಮೀಣ ಡಿಪೊಗಳು ಹೆಸರಿಗೆ ಮಾತ್ರ. ಇಲ್ಲಿನ ಬಸ್‌ಗಳು ದಿನಕ್ಕೆ ಹತ್ತಾರು ಬಾರಿ ನಗರಕ್ಕೆ ಸಂಚಾರ ಮಾಡುತ್ತವೆ. ಅಲ್ಲದೆ ಸಿಬ್ಬಂದಿಯನ್ನು ಬಿಎಂಟಿಸಿಗೇ ನೇಮಕ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಡಿಪೊಗೆಂದು ಪ್ರತ್ಯೇಕವಾಗಿ ನೇಮಕ ಮಾಡಿಕೊಂಡಿಲ್ಲ' ಎಂದು ಚಾಲಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

`ಗ್ರಾಮೀಣ ಡಿಪೊಗಳ ಸಿಬ್ಬಂದಿಗೆ ಕೆಲಸದ ಒತ್ತಡವೂ ಜಾಸ್ತಿ. ಈ ಡಿಪೊಗಳ ಚಾಲಕ ಒಂದು ಪಾಳಿಗೆ 150 ಕಿ.ಮೀ. ದೂರ ಬಸ್ ಚಲಾಯಿಸಿದರೆ, ನಗರ ಡಿಪೊ ಚಾಲಕ ದಿನಕ್ಕೆ ಅಂದಾಜು 100 ಕಿ.ಮೀ ದೂರ ಬಸ್ ಚಲಾಯಿಸುತ್ತಾನೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ಮೂಲಸೌಕರ್ಯವೂ ಇಲ್ಲ. ಇಲ್ಲಿನ ಕ್ವಾರ್ಟ್ರಸ್‌ಗಳು ಗೋಡೌನ್ ರೀತಿ ಇವೆ. ಜಿಗಣಿ ಮತ್ತಿತರ ಕಡೆಗಳಲ್ಲಿ ನಗರಕ್ಕಿಂತ ಮನೆ ಬಾಡಿಗೆ ಜಾಸ್ತಿ ಇದೆ. ಇಂತಹ ಕಷ್ಟಕರ ಸ್ಥಿತಿಯಲ್ಲಿ ಉದ್ಯೋಗ ನಿರ್ವಹಿಸಬೇಕಿದೆ' ಎಂದು ಮತ್ತೊಬ್ಬ ಚಾಲಕ ಸಮಸ್ಯೆಗಳ ಪಟ್ಟಿ ಮಾಡುತ್ತಾರೆ.

`ಭತ್ಯೆ ವ್ಯತ್ಯಾಸದ ಮೂಲಕ ಸಂಸ್ಥೆ ತಿಂಗಳಿಗೆರೂ1 ಕೋಟಿ ಉಳಿತಾಯ ಮಾಡುತ್ತಿದೆ. ಆದರೆ, ಸಂಸ್ಥೆಯ ನಷ್ಟದ ಪ್ರಮಾಣ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಿದೆ. ಸಿಬ್ಬಂದಿ ವೇತನ ಹೆಚ್ಚಳದಿಂದ ಸಂಸ್ಥೆಯ ಹೊರೆ ಹೆಚ್ಚಾಗುತ್ತಿದೆ ಎಂದು ಸಾರಿಗೆ ಸಚಿವರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸಮಜಾಯಿಷಿ ನೀಡುತ್ತಿದ್ದಾರೆ. ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಯಿಂದ ಭಾರಿ ನಷ್ಟ ಉಂಟಾಗುತ್ತಿದೆ' ಎಂದು ನಿರ್ವಾಹಕರೊಬ್ಬರು ದೂರುತ್ತಾರೆ.

ಸಂಸ್ಥೆಯ ಪಾತ್ರ ಇಲ್ಲ
ಸಂಸ್ಥೆಯ ಸಿಬ್ಬಂದಿಯ ಮನೆ ಬಾಡಿಗೆ ಭತ್ಯೆಯಲ್ಲಿ ವ್ಯತ್ಯಾಸ ಉಂಟಾಗಿರುವುದರಲ್ಲಿ ಸಂಸ್ಥೆಯ ಪಾತ್ರ ಇಲ್ಲ. ಸರ್ಕಾರ ರೂಪಿಸಿದ ಕಾನೂನು ಪ್ರಕಾರವೇ ಭತ್ಯೆ ಪಾವತಿ ಮಾಡಲಾಗುತ್ತಿದೆ. ನಗರದಲ್ಲಿ ಕೆಲಸ ಮಾಡುವವರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ನಿರ್ವಹಿಸುವವರ ಭತ್ಯೆಯಲ್ಲಿ ಶೇ 5 ವ್ಯತ್ಯಾಸ ಇದೆ. ಇದಕ್ಕೆ ಸರ್ಕಾರ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿದೆ.
- ಅಂಜುಂ ಪರ್ವೇಜ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.