ಬೆಂಗಳೂರು: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಾವುದೇ ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುವುದಿಲ್ಲ' ಎಂಬ ಸ್ಪಷ್ಟವಾದ ಭರವಸೆ ನೀಡುವವರೆಗೆ ಗುರುವಾರದಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪೌರಕಾರ್ಮಿಕರು ಪಟ್ಟು ಹಿಡಿದಿದ್ದು, ಬಿಬಿಎಂಪಿ ಮತ್ತೊಂದು ಸಮಸ್ಯೆಯಲ್ಲಿ ಸಿಕ್ಕಿಬಿದ್ದಿದೆ.
ನಿಧಾನವಾಗಿ ಕಸದಿಂದ ಮುಕ್ತವಾಗುತ್ತಿದ್ದ ನಗರ, ಪೌರ ಕಾರ್ಮಿಕರ ಈ ದಿಢೀರ್ ನಿರ್ಧಾರದಿಂದ ಮತ್ತೆ ಆತಂಕಕ್ಕೆ ಒಳಗಾಗಿದೆ. ಗುರುವಾರದಿಂದ ಕಸ ವಿಲೇವಾರಿ ಸುಸೂತ್ರವಾಗಿ ನಡೆಯುವುದು ಕಷ್ಟ ಎನಿಸಿದೆ.
ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಿಂದ ಬಿಬಿಎಂಪಿ ಕಚೇರಿವರೆಗೆ ಬುಧವಾರ ಮೆರವಣಿಗೆ ನಡೆಸಿದ ಪೌರಕಾರ್ಮಿಕರು, ಹೊಸ ಗುತ್ತಿಗೆ ನೆಪದಲ್ಲಿ 8,000 ಜನರನ್ನು ಕೆಲಸದಿಂದ ತೆಗೆಯುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ತಾಜ್ಯ ನಿರ್ವಹಣೆ ಹೊಣೆಯನ್ನು ಹೊಸಬರು ಇಲ್ಲವೆ ಹಳಬರು ಯಾವ ಗುತ್ತಿಗೆದಾರರು ಹೊತ್ತರೂ ಯಾವೊಬ್ಬ ಪೌರ ಕಾರ್ಮಿಕನನ್ನೂ ಕೈಬಿಡಬಾರದು. ಕಾನೂನುಬಾಹಿರವಾಗಿ ಕಾರ್ಮಿಕರ ವೇತನದಲ್ಲೇ ಕಡಿತ ಮಾಡಿಕೊಳ್ಳುತ್ತಿರುವ ಪಿಎಫ್ ಮತ್ತು ಇಎಸ್‌ಐ ಮೊತ್ತವನ್ನು ವಾಪಸು ಕೊಡಬೇಕು. 4,000 ಕಾಯಂ ಪೌರ ಕಾರ್ಮಿಕರ ನೇಮಕಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ರಾತ್ರಿ ಹೊತ್ತಿನಲ್ಲಿ ಕಸ ವಿಲೇವಾರಿ ಮಾಡದೆ ಹಗಲಿನಲ್ಲೇ ಸಾಗಿಸುವ ವ್ಯವಸ್ಥೆ ಮಾಡಬೇಕು' ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
`ಕಸ ಸಾಗಾಟದ ಸಂದರ್ಭದಲ್ಲಿ ಸಾವನ್ನಪ್ಪಿದ ಕಾರ್ಮಿಕರ ಕುಟುಂಬಕ್ಕೆ ತಲಾ ರೂ 20 ಲಕ್ಷ ಪರಿಹಾರ ನೀಡಬೇಕು. ಗ್ಲೌಸ್, ಬೂಟು ಹಾಗೂ ಸಮವಸ್ತ್ರ ಕೊಡಬೇಕು. ವಾರಕ್ಕೊಮ್ಮೆ ಸಂಬಳಸಹಿತ ರಜೆ ನಿಡಬೇಕು. ಮಹಿಳಾ ಕಾರ್ಮಿಕರಿಗೆ ಸಂಬಳ ಸಹಿತ ಹೆರಿಗೆ ರಜೆ ಸೌಲಭ್ಯ ಒದಗಿಸಬೇಕು. ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಬೇಕು' ಎಂದು ಆಗ್ರಹಿಸಿದರು.
`ಕೆಲಸದ ಸಮಯದಲ್ಲಿ ಕಾರ್ಮಿಕನೊಬ್ಬ ಮೃತಪಟ್ಟರೆ ಅದರ ಪುರ್ಣ ಹೊಣೆಯನ್ನು ಪ್ರಧಾನ ಉದ್ಯೋಗದಾತರಾದ ಬಿಬಿಎಂಪಿ ಅಧಿಕಾರಿಗಳೇ ಹೊರಬೇಕು. ಕನಿಷ್ಠ ವೇತನದ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಮಾಡಿ ಎಲ್ಲ ಕಾರ್ಮಿಕರನ್ನು ಕಾಯಂ ಮಾಡಬೇಕು' ಎಂದು ಒತ್ತಾಯಿಸಿದರು.
`ಐಪಿಡಿ ಸಾಲಪ್ಪ ವರದಿ ಪ್ರಕಾರ ಪ್ರತಿ 500 ಜನಸಂಖ್ಯೆಗೆ ಒಬ್ಬರಂತೆ ಪೌರ ಕಾರ್ಮಿಕರು ಇರಬೇಕು. ಈ ವರದಿ ಪ್ರಕಾರ ನಗರಕ್ಕೆ 30 ಸಾವಿರ ಕಾರ್ಮಿಕರ ಅಗತ್ಯ ಇದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 4,000 ಕಾಯಂ ಮತ್ತು 17,000 ಗುತ್ತಿಗೆ ಕಾರ್ಮಿಕರು ಮಾತ್ರ ಇದ್ದಾರೆ. ಇನ್ನೂ 9,000 ಕಾರ್ಮಿಕರ ಕೊರತೆ ಇದೆ. ಇಂತಹ ಸನ್ನಿವೇಶದಲ್ಲಿ ಇದ್ದ ಕಾರ್ಮಿಕರ ಸಂಖ್ಯೆಯನ್ನೇ ಕಡಿತಗೊಳಿಸುತ್ತಿರುವುದು ಯಾವ ನ್ಯಾಯ' ಎಂದು ಪ್ರಶ್ನಿಸಿದರು.
`ಬಿವಿಜಿ ಇಂಡಿಯಾ ಲಿಮಿಟೆಡ್ ಸಂಸ್ಥೆ ಕಸ ವಿಲೇವಾರಿ ವ್ಯವಸ್ಥೆಯನ್ನು ಗುತ್ತಿಗೆ ಪಡೆದಿದ್ದು, 17,000 ಜನರಲ್ಲಿ 8,000 ಪೌರ ಕಾರ್ಮಿಕರನ್ನು ಕಡಿಮೆ ಮಾಡಲು ಹೊರಟಿದೆ. ಈಗ ಒಬ್ಬ ಕಾರ್ಮಿಕ ದಿನಕ್ಕೆ ಒಂದು ಕಿ.ಮೀ. ರಸ್ತೆಯನ್ನು ಸ್ವಚ್ಛ ಮಾಡುತ್ತಾನೆ. ಹೊಸ ವ್ಯವಸ್ಥೆಯಲ್ಲಿ 8 ಕಿ.ಮೀ. ರಸ್ತೆ ಸ್ವಚ್ಛ ಮಾಡಬೇಕಾಗುತ್ತದೆ' ಎಂದು ಆತಂಕ ವ್ಯಕ್ತಪಡಿಸಿದರು.
`ಎಂಟು ಗಂಟೆ ಅವಧಿಯಲ್ಲಿ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವೆ' ಎಂದು ಪ್ರಶ್ನಿಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ, ಮುಖಂಡರಾದ ಎ.ಜೈರೀಮ್, ಎಸ್.ಬಾಲನ್, ಚಿನ್ನೋಡು, ಗೌರಿ, ಎನ್.ಪಿ. ಶ್ರೀನಿವಾಸಲು, ಕೆ.ಶ್ರೀನಿವಾಸಲು, ಸಿ.ಎನ್.ಆನಂದ್, ಸೂರ್ಯನಾರಾಯಣ, ಪ್ರಸನ್ನ, ಎಂ.ಜೆ. ಶ್ರೀನಿವಾಸ್, ಕೆ.ಸೋಮಶೇಖರ್ ಮತ್ತು ಎನ್.ಶ್ರೀನಿವಾಸಮೂರ್ತಿ ನೇತೃತ್ವ ವಹಿಸಿದ್ದರು.
ಸಾಲಪ್ಪ ವರದಿ ಅನುಷ್ಠಾನದ ಬೇಡಿಕೆ ಇನ್ನೂ ಈಡೇರಿಲ್ಲ. ಬಿಬಿಎಂಪಿ ಹೊಸಬರಿಗೆ ಕಸ ವಿಲೇವಾರಿಯನ್ನು ಗುತ್ತಿಗೆ ನೀಡಿದ್ದು, ತಮ್ಮ ವೆಚ್ಚ ಉಳಿಸಿಕೊಳ್ಳಲು 8,000 ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಇದನ್ನು ಸಹಿಸಲು ಸಾಧ್ಯವಿಲ್ಲ. ಬಿಬಿಎಂಪಿ ಆಯುಕ್ತರು ನಮಗೆ ಯಾವುದೇ ಸ್ಪಷ್ಟ ಭರವಸೆಯನ್ನು ನೀಡಿಲ್ಲ. ಬಾಕಿ ವೇತನ ಬಿಡುಗಡೆಗೂ ಕ್ರಮ ಕೈಗೊಂಡಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಕರ್ತವ್ಯಕ್ಕೆ ತೆರಳುವುದಿಲ್ಲ.
-ಎ.ಜೈರೀಮ್, ಬೆಂಗಳೂರು ನಗರ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ, ರಾಜ್ಯ ಪೌರ ಕಾರ್ಮಿಕರ ಮಹಾಸಂಘದ ಪ್ರಧಾನ ಕಾರ್ಯದರ್ಶಿ
ಪೌರಕಾರ್ಮಿಕರ ಹಿತವನ್ನು ಯಾವುದೇ ಕಾರಣಕ್ಕೂ ಅಲಕ್ಷ್ಯ ಮಾಡುವುದಿಲ್ಲ. ಕಾರ್ಮಿಕ ಕಾನೂನಿನ ಪ್ರಕಾರ ಎಲ್ಲರಿಗೂ ಕನಿಷ್ಠ ವೇತನ ನೀಡಲಾಗುತ್ತಿದೆ. ಗುತ್ತಿಗೆದಾರರಿಂದ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿ ಚೆಕ್ ಮೂಲಕ ವೇತನ ನೀಡುತ್ತಿದೆ. ಎಷ್ಟು ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಾರೆ ಎಂಬುದು ಗುತ್ತಿಗೆದಾರರಿಗೆ ಬಿಟ್ಟ ವಿಚಾರ. ಮಿಕ್ಕವರಿಗೆ ಬಿಬಿಎಂಪಿ ಉದ್ಯೋಗ ಕೊಡಲು ಸಿದ್ಧವಿದೆ. ಎರಡನೇ ಶಿಫ್ಟ್‌ನಲ್ಲಿ ಅವರಿಗೆ ಕೆಲಸ ಕೊಡಲಾಗುತ್ತದೆ. ವಾಸ್ತವ ಸ್ಥಿತಿಯನ್ನು ಪೌರ ಕಾರ್ಮಿಕರು ಅರ್ಥ ಮಾಡಿಕೊಂಡಿದ್ದು, ಕೆಲಸಕ್ಕೆ ಹಾಜರಾಗುವ ವಿಶ್ವಾಸ ಇದೆ.
-ರಜನೀಶ್ ಗೋಯಲ್,
ಬಿಬಿಎಂಪಿ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.