ADVERTISEMENT

ಇಂದಿರಾನಗರದಲ್ಲಿ ಹೆಚ್ಚು ಶಬ್ದಮಾಲಿನ್ಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:43 IST
Last Updated 3 ಜನವರಿ 2014, 19:43 IST

ಬೆಂಗಳೂರು: ಇಂದಿರಾನಗರದ ಇಎಸ್‌ಐ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶ ನಗರದಲ್ಲಿಯೇ ಅತಿ ಹೆಚ್ಚು ಶಬ್ದ ಮಾಲಿನ್ಯವುಳ್ಳ ಪ್ರದೇಶವಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2012–13 ಕ್ಕೆ ಸಂಬಂಧಿಸಿದಂತೆ ವರದಿ ನೀಡಿದೆ.

ಆಸ್ಪತ್ರೆಗಳು ಮತ್ತು ಜನ ವಸತಿ ಇರುವ ಪ್ರದೇಶಗಳಲ್ಲಿ ಶಬ್ದದ ಪ್ರಮಾಣವು 50 ಡೆಸಿಬಲ್‌ಗಿಂತ ಕಡಿಮೆಯಿರಬೇಕು ಎಂಬ ನಿಯಮವಿದ್ದರೂ, ಇಲ್ಲಿ ಶೇ 85.5 ಡೆಸಿಬಲ್‌ನಷ್ಟು ಶಬ್ದಮಾಲಿನ್ಯವಿದೆ. ಇದು ವಾಹನಗಳ ಅವ್ಯವಸ್ಥಿತವಾದ ಚಲನೆಯಿಂದ ಉಂಟಾಗುತ್ತಿದೆ ಎಂದು ವರದಿ ಹೇಳಿದೆ.

ಆಸ್ಪತ್ರೆಗಳು ಮತ್ತು ಜನ ವಸತಿ ಇರುವ ಪ್ರದೇಶಗಳು ಶಾಂತವಾದ ವಾತಾವರಣವನ್ನು ಹೊಂದಿರಬೇಕು. ಆದರೆ, ನಗರದಲ್ಲಿ ಕೈಗಾರಿಕಾ ಪ್ರದೇಶಗಳಿಗಿಂತ ಹೆಚ್ಚು ಇಲ್ಲಿ ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ವರದಿ ತಿಳಿಸಿದೆ.

ಲೇಕ್‌ಸೈಡ್‌ ಮೆಡಿಕಲ್‌ ಕೇಂದ್ರದ ನಿರ್ದೇಶಕ ಡಾ.ಎಚ್‌.ಪರಮೇಶ ಅವರು, ‘ಅತಿಯಾದ ಶಬ್ಬದಿಂದ ಜನ­ಸಾಮಾನ್ಯರಲ್ಲಿ ಮತ್ತು ರೋಗಿಗಳಲ್ಲಿ ಕಿವುಡುತನ ಹೆಚ್ಚಾಗು­ತ್ತದೆ. ಆಸ್ಪತ್ರೆಗಳ ಸುತ್ತಮುತ್ತಲಿನ ಅತಿಯಾದ ಶಬ್ದದಿಂದ ತೀವ್ರ ನಿಗಾ ಘಟಕದಲ್ಲಿರುವ ರೋಗಿಗಳಿಗೆ ಆಮ್ಲಜನಕದ ಪ್ರಮಾಣ ಹೆಚ್ಚಾಗಿ ಬೇಕಾಗುತ್ತದೆ. ಮಕ್ಕಳಲ್ಲಿಯೂ ಅತಿ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನ
ಸುಪ್ರೀಂ ಕೋರ್ಟ್ ಡಿಸೆಂಬರ್‌ 10, 2013 ರಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವಿವಿಧ ಶಬ್ದವನ್ನುಂಟು ಮಾಡುವ ಹಾರ್ನ್‌ಗಳನ್ನು ನಿಷೇಧಿಸುವಂತೆ ನಿರ್ದೇಶನ ನೀಡಿತ್ತು.

ಶಬ್ದಮಾಲಿನ್ಯ ಹೆಚ್ಚಾಗಿದೆ
ಮಂಡಳಿಯಿಂದ ಮಾಲಿನ್ಯವನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ‘ಹಾರ್ನ್‌ ರಹಿತ ಸೋಮವಾರ’ ಅಭಿಯಾನವನ್ನು ಆರಂಭಿಸಿದ್ದೇವೆ. ಪೊಲೀಸ್‌ ಕಮಿಷನರ್‌ ಮತ್ತು ಬಿಬಿಎಂಪಿ ಅವರಿಗೆ ಅನೇಕ ಹಾರ್ನ್‌ಗಳನ್ನು ನಿಷೇಧಿಸುವಂತೆ ತಿಳಿಸಿದ್ದೇವೆ. ಕೆಲವು ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ ಹೆಚ್ಚಾಗಿರುವುದು ಕಂಡುಬಂದಿದೆ.
ಡಾ.ವಾಮನ ಆಚಾರ್ಯ, ಅಧ್ಯಕ್ಷ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT