ADVERTISEMENT

ಇಂದಿರಾನಗರದ ಆರು ಪಬ್‌ ಬಂದ್‌ಗೆ ಆದೇಶ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 20:46 IST
Last Updated 30 ಡಿಸೆಂಬರ್ 2017, 20:46 IST
ಇಂದಿರಾನಗರದ ಆರು  ಪಬ್‌ ಬಂದ್‌ಗೆ ಆದೇಶ
ಇಂದಿರಾನಗರದ ಆರು ಪಬ್‌ ಬಂದ್‌ಗೆ ಆದೇಶ   

ಬೆಂಗಳೂರು: ಅಗ್ನಿ ಸುರಕ್ಷತಾಕ್ರಮಗಳನ್ನು ಕೈಗೊಳ್ಳದಿದ್ದಕ್ಕೆ ಇಂದಿರಾನಗರದ ಆರು ಪಬ್‌ಗಳನ್ನು ಬಂದ್‌ ಮಾಡುವಂತೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಎಂ.ಎನ್‌.ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಮುಂಬೈನ ಪಬ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ ಬೆನ್ನಲ್ಲೇ, ನಗರದ ಪಬ್‌ಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ರೆಡ್ಡಿ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗಳಿಗೆ ಸೂಚನೆ ನೀಡಿದ್ದರು. ಅದರನ್ವಯ ಅಧಿಕಾರಿಗಳು 10 ತಂಡಗಳನ್ನು ರಚಿಸಿಕೊಂಡು ಶನಿವಾರ ನಗರದ ಪಬ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇಂದಿರಾನಗರದ ‘ವೇಪರ್‌ ಪಬ್‌’, ‘ಪೆಕಾಸ್ ಪಬ್’, ‘ಹಮ್ಮಿಂಗ್ ಟ್ರಿ’, ‘ಶೆರ್ಲಾಕ್ ಪಬ್‌’, ‘ಟಿಪ್ಸಿ ಬುಲ್’ ಹಾಗೂ ‘ಎಸ್ಕೇಪ್ ಹೋಟೆಲ್ ಆ್ಯಂಡ್‌ ಸ್ಪಾ’ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದಿರುವುದು ಪತ್ತೆಯಾಯಿತು. ಈ ಬಗ್ಗೆ ಅಧಿಕಾರಿಗಳು ಡಿಜಿಪಿ ಅವರಿಗೆ ವರದಿ ಸಲ್ಲಿಸಿದ್ದರು. ಅದರನ್ವಯ ಡಿಜಿಪಿ ಕ್ರಮ ತೆಗೆದುಕೊಂಡಿದ್ದಾರೆ.

ADVERTISEMENT

ಆರು ಪಬ್‌ಗೆ ನೋಟಿಸ್‌: ಕೋರಮಂಗಲದ 15ಕ್ಕೂ ಹೆಚ್ಚು ಪಬ್‌ಗಳಿಗೂ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಅಲ್ಲಿಯ ‘ಬಾರ್‌ಬೆಕ್‌ ನ್ಯಾಷನಲ್‌’, ‘ಬಾಸಿಲ್ ಮೊನಾರ್ಕ್‌’, ‘ತುಬೆ ಬಾರ್’, ‘ಆರ್‌.ಎನ್‌ ಸ್ಕ್ವೇರ್’, ‘ಬಾರ್ಲೆಜ್‌ ಬಾರ್‌’ ಹಾಗೂ ‘ಇಕ್ವಿನಾಕ್ಸ್‌ ಇಂದ್ರಪ್ರಸ್ಥ’ ಪಬ್‌ಗಳ ಕಟ್ಟಡದಲ್ಲಿ ಸುರಕ್ಷತಾ ಕ್ರಮ ಇಲ್ಲದಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು.

ಡಿಜಿಪಿ ಸೂಚನೆಯಂತೆ ಈ ಆರು ಪಬ್‌ಗಳಿಗೆ ನೋಟಿಸ್ ನೀಡಿರುವ ಅಧಿಕಾರಿಗಳು, ‘ಮುಂದಿನ 15 ದಿನಗಳ ಒಳಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ, ‍ಪಬ್‌ ಬಂದ್‌ ಮಾಡಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.