ADVERTISEMENT

ಇಬ್ಬರು ಕಾರ್ಮಿಕರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 20:01 IST
Last Updated 11 ಮಾರ್ಚ್ 2018, 20:01 IST
ಇಬ್ಬರು ಕಾರ್ಮಿಕರ ದುರ್ಮರಣ
ಇಬ್ಬರು ಕಾರ್ಮಿಕರ ದುರ್ಮರಣ   

ಬೆಂಗಳೂರು: ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವ ಉದ್ದೇಶದಿಂದ ಕೈಗೊಂಡಿರುವ ಕೆ.ಸಿ ವ್ಯಾಲಿ (ಕೋರಮಂಗಲ- ಚಲ್ಲಘಟ್ಟ ಕಣಿವೆ) ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ.

ಉತ್ತರಪ್ರದೇಶದ ಸಂದೀಪ್ (21) ಹಾಗೂ ಅಖಿಲೇಶ್‌ (20) ಮೃತರು. ಎಂಜಿನಿಯರ್ ಉಮಾಶಂಕರ್‌ (35) ಎಂಬುವವರು ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಮ್ಮಡಿಹಳ್ಳಿ ಸಮೀಪದ ಕೈತೋಟ ಗ್ರಾಮದಲ್ಲಿ ಕಬ್ಬಿಣದ ಪೈಪ್‌ ಅಳವಡಿಕೆಗಾಗಿ ಕಾಮಗಾರಿ ನಡೆಯುತ್ತಿದೆ. ಅಲ್ಲಿ ಭಾನುವಾರ ಆರು ಮಂದಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಸಂದೀಪ್ ಹಾಗೂ ಅಖಿಲೇಶ್‌  ವೆಲ್ಡಿಂಗ್ ಮಾಡುತ್ತಿದ್ದರು. ಪಾಯದಲ್ಲೇ ನಿಂತುಕೊಂಡು ಉಮಾಶಂಕರ್‌, ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದರು.

ADVERTISEMENT

ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಾಯದ ಪಕ್ಕವೇ ಇದ್ದ ಮಣ್ಣಿನ ದಿಬ್ಬ ಕುಸಿದು ಬಿದ್ದಿತ್ತು. ಮಣ್ಣಿನಡಿ ಸಿಲುಕಿದ್ದ ಮೂವರೂ ಕೂಗಾಡಲಾರಂಭಿಸಿದ್ದರು. ಸಹಾಯಕ್ಕೆ ಬಂದ ಸ್ಥಳೀಯರು, ಮಣ್ಣು ತೆರವುಗೊಳಿಸಿ ಅವರರನ್ನು ಆಸ್ಪತ್ರೆಗೆ ಕಳುಹಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಸಂದೀಪ್‌ ಹಾಗೂ ಅಖಿಲೇಶ್‌ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಕಾಮಗಾರಿ ಗುತ್ತಿಗೆದಾರ ಮತ್ತು ಜಾಗದ ಮಾಲೀಕರ ವಿರುದ್ಧ ವೈಟ್‌ಫೀಲ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೈಪ್‌ ಒಳಗೆ ಇದ್ದವರು ಪಾರು: ‘10 ಅಡಿಯಷ್ಟು ಆಳವಿರುವ ಪಾಯದಲ್ಲಿ ಕಬ್ಬಿಣದ ಪೈಪ್‌ಗಳನ್ನು ಅಳವಡಿಸಲಾಗಿದೆ. ಅವುಗಳ ಜೋಡಣೆಗಾಗಿ ವೆಲ್ಡಿಂಗ್ ಕೆಲಸ ನಡೆಯುತ್ತಿರುವಾಗಲೇ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದರು.

‘ಪೈಪ್‌ ಒಳಗೆ ನಾಲ್ವರು ಕಾರ್ಮಿಕರಿದ್ದರು. ಸಂದೀಪ್, ಅಖಿಲೇಶ್‌ ಹಾಗೂ ಉಮಾಶಂಕರ್‌ ಹೊರಗಡೆ ಇದ್ದರು. ಆ ಮೂವರಷ್ಟೇ ಮಣ್ಣಿನಲ್ಲಿ ಸಿಲುಕಿ
ಕೊಂಡಿದ್ದರು’ ಎಂದರು.

‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಕಾರ್ಮಿಕರು, ಕಾಮಗಾರಿ ನಡೆಯುತ್ತಿದ್ದ ಸ್ಥಳದ ಸಮೀಪವೇ ಶೆಡ್ ನಿರ್ಮಿಸಿಕೊಂಡು ವಾಸವಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.