ADVERTISEMENT

ಈ ವರ್ಷ 1,389 ಮಂದಿಗೆ ಡೆಂಗಿ ಜ್ವರ

ಎನ್.ನವೀನ್ ಕುಮಾರ್
Published 11 ಜುಲೈ 2017, 19:57 IST
Last Updated 11 ಜುಲೈ 2017, 19:57 IST
ಈ ವರ್ಷ 1,389 ಮಂದಿಗೆ ಡೆಂಗಿ ಜ್ವರ
ಈ ವರ್ಷ 1,389 ಮಂದಿಗೆ ಡೆಂಗಿ ಜ್ವರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗಿ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆರೋಗ್ಯ ಇಲಾಖೆಯ ಅಂಕಿ–ಅಂಶಗಳ ಪ್ರಕಾರ ಜನವರಿಯಿಂದ ಜುಲೈ 10ರವರೆಗೆ 1,389 ಡೆಂಗಿ ಪ್ರಕರಣಗಳು ದೃಢಪಟ್ಟಿವೆ.

ಶಂಕಿತ ಡೆಂಗಿಯಿಂದ ಬಳಲುತ್ತಿರುವ ನೂರಾರು ರೋಗಿಗಳು ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.

‘ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಪ್ರತಿದಿನ 20 ಮಕ್ಕಳು ದಾಖಲಾಗುತ್ತಿದ್ದಾರೆ. ಅವರೆಲ್ಲ ಶಂಕಿತ ಡೆಂಗಿಯಿಂದ ಬಳಲುತ್ತಿದ್ದು, ರಕ್ತದ ಮಾದರಿಗಳನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ’ ಎಂದು ಸಂಸ್ಥೆಯ ನಿರ್ದೇಶಕಿ ಡಾ.ಆಶಾ ಬೆನಕಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಳ್ಳಂದೂರಿನಲ್ಲಿರುವ ಸಾಕ್ರ ಆಸ್ಪತ್ರೆಯ ಆಂತರಿಕ ಚಿಕಿತ್ಸಾ ವಿಭಾಗದ ಡಾ.ಸುಬ್ರತ್‌ ದಾಸ್‌, ‘ಡೆಂಗಿಯಿಂದ ಬಳಲುತ್ತಿರುವ 8–10 ರೋಗಿಗಳು ಪ್ರತಿದಿನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಪೈಕಿ 2–3 ಮಕ್ಕಳು ಸೇರಿರುತ್ತಾರೆ. ಪ್ಲೇಟ್‌ಲೇಟ್‌ಗಳು ಕಡಿಮೆ ಇರುವ ರೋಗಿಗಳಿಗೆ  ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಜುಲೈನಿಂದ ಡೆಂಗಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ’ ಎಂದರು.

ADVERTISEMENT

‘ಸೊಳ್ಳೆಗಳ ಉತ್ಪತ್ತಿಗೆ ಮುಂಗಾರು ಅವಧಿ ಪ್ರಸಕ್ತವಾಗಿದೆ. ಇದರಿಂದ ಡೆಂಗಿ, ಚಿಕೂನ್‌ಗುನ್ಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇನ್ನೂ ಒಂಡೆರಡು ತಿಂಗಳು ಇದೇ ಪರಿಸ್ಥಿತಿ ಇರುತ್ತದೆ. ಹೀಗಾಗಿ ರೋಗ ಬರದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ವಿಕ್ರಂ ಆಸ್ಪತ್ರೆಯ ಆಂತರಿಕ ಚಿಕಿತ್ಸಾ ವಿಭಾಗದ ಕನ್ಸಲ್ಟೆಂಟ್‌ ಡಾ. ಕುದೂರ್‌ ಎನ್‌.ಮಂಜುನಾಥ್‌, ‘ನಮ್ಮ ಆಸ್ಪತ್ರೆಗೆ
ಪ್ರತಿದಿನ 5–6 ಡೆಂಗಿ ರೋಗಿಗಳು ಬರುತ್ತಾರೆ. ಇವರಲ್ಲಿ ಕನಿಷ್ಠ 4 ಮಂದಿ ಒಳರೋಗಿಗಳಾಗಿ ದಾಖಲಾಗುತ್ತಾರೆ. ಅವರ ರಕ್ತದ ಮಾದರಿಗಳ ಪರೀಕ್ಷೆಯನ್ನು ಆಸ್ಪತ್ರೆಯಲ್ಲೇ ನಡೆಸುತ್ತೇವೆ’ ಎಂದು ಹೇಳಿದರು.

‘ಯಾವುದೇ ವೈರಾಣುವಿನಿಂದ ಜ್ವರ ಬಂದರೂ ಅದರ ಲಕ್ಷಣಗಳು ಒಂದೇ ರೀತಿ ಇರುತ್ತವೆ. ರೋಗಿಗೆ ಯಾವ ರೋಗ ಬಂದಿದೆ ಎಂಬುದನ್ನು ನಿರ್ದಿಷ್ಟವಾಗಿ ಪತ್ತೆ ಹಚ್ಚಬೇಕು. ಹೀಗಾಗಿ ವಿವಿಧ ಪರೀಕ್ಷೆಗಳನ್ನು ನಡೆಸುತ್ತೇವೆ’ ಎಂದರು.

‘ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಗೆ ಮೂರು ತಿಂಗಳಿಂದ 121 ಡೆಂಗಿ, 32 ಎಚ್‌1ಎನ್‌1 ಹಾಗೂ 6 ಚಿಕೂನ್‌ಗುನ್ಯ ರೋಗಿಗಳು ದಾಖಲಾಗಿದ್ದಾರೆ. ಪ್ರತಿದಿನ 15–20 ಡೆಂಗಿ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ’ ಎಂದು ಆಸ್ಪತ್ರೆಯ ಆಂತರಿಕ ಚಿಕಿತ್ಸಾ ವಿಭಾಗದ ನಿರ್ದೇಶಕಿ ಡಾ.ಸುಧಾ ಮೆನನ್‌ ಹೇಳಿದರು.

ಎನ್‌ವಿಬಿಡಿಸಿಪಿಯ ಆರೋಗ್ಯ ವೈದ್ಯಾಧಿಕಾರಿ ಡಾ.ನವೀನ್‌ ಕುಮಾರ್‌, ‘ನಿಮ್ಹಾನ್ಸ್‌ ಆಸ್ಪತ್ರೆಯ ಆವರಣದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ (ಎನ್‌ಐವಿ) ಜನವರಿಯಿಂದ ಈವರೆಗೆ 355 ರಕ್ತದ ಮಾದರಿಗಳು ಬಂದಿವೆ. ಇದರಲ್ಲಿ 175 ಮಂದಿಗೆ ಡೆಂಗಿ ಹಾಗೂ 28 ಮಂದಿಗೆ ಚಿಕೂನ್‌ಗುನ್ಯ ಇರುವುದು ಖಚಿತಗೊಂಡಿದೆ’ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯ ಮಲೇರಿಯಾ ಮತ್ತು ಫೈಲೇರಿಯಾ ವಿಭಾಗದ ಉಪನಿರ್ದೇಶಕ ಡಾ.ಪ್ರಕಾಶ್‌ ಕುಮಾರ್‌, ‘ನಗರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತವೆ. ಅಲ್ಲೆಲ್ಲ ನೀರು ನಿಲ್ಲುತ್ತದೆ. ಕೊಳೆಗೇರಿಗಳಿಗೆ ಕುಡಿಯುವ ನೀರನ್ನು ನಿಯಮಿತವಾಗಿ ಸರಬರಾಜು ಮಾಡುವುದಿಲ್ಲ. ಹೀಗಾಗಿ ತೊಟ್ಟಿಗಳು, ಡ್ರಮ್‌ಗಳಲ್ಲಿ ನೀರನ್ನು ಸಂಗ್ರಹಿಸುತ್ತಾರೆ. ಇದರ ಜತೆಗೆ, ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಮಳೆಗಾಲದಲ್ಲಿ ಶುದ್ಧ ನೀರು ಎಲ್ಲೆಂದರಲ್ಲಿ ಸಂಗ್ರಹಗೊಳ್ಳುತ್ತಿದೆ. ಈ ಕಾರಣಗಳಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ’ ಎಂದರು.

ರೋಗದ ಲಕ್ಷಣ
ಈಡಿಸ್‌ ಈಜಿಪ್ಟೈ ಎಂಬ ಸೊಳ್ಳೆಯ ಕಡಿತದಿಂದ ಡೆಂಗಿ ಹಾಗೂ ಚಿಕೂನ್‌ಗುನ್ಯ ಬರುತ್ತದೆ. ನಿಂತ ಸ್ವಚ್ಛ ನೀರಿನಲ್ಲಿ ಹುಟ್ಟುವ ಈ ಸೊಳ್ಳೆಗಳು ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತವೆ.
ಹಠಾತ್ತನೆ ಬರುವ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರದ ನೋವು, ಮೈ–ಕೈ ನೋವು, ಕೀಲು
ಗಳಲ್ಲಿ ನೋವು, ವಾಕರಿಕೆ ಮತ್ತು ವಾಂತಿ ಈ ರೋಗದ ಲಕ್ಷಣಗಳು.
ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ತೋರಿಸಬೇಕು. ನೀರಿನಾಂಶ ಇರುವಂತಹ ಪದಾರ್ಥ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು.

ಸೊಳ್ಳೆಗೆ ತಾಣಗಳು
ಒಡೆದ ಟೈರ್‌ಗಳು, ತೆಂಗಿನ ಚಿಪ್ಪುಗಳು, ಸಿಮೆಂಟ್‌ ತೊಟ್ಟಿಗಳು, ತೆರೆದ ಪ್ಲಾಸ್ಟಿಕ್‌ ಪರಿಕರಗಳು, ಪ್ಲಾಸ್ಟಿಕ್‌ ಡ್ರಮ್‌ಗಳು, ಬಕೆಟ್‌ಗಳು, ನೀರಿನ ತೊಟ್ಟಿಗಳು, ಏರ್‌ಕೂಲರ್‌ಗಳು, ಅನುಪಯುಕ್ತ ಒರಳು ಕಲ್ಲುಗಳು, ಬಿಸಾಡಿದ ಪ್ಲಾಸ್ಟಿಕ್‌ ಲೋಟಗಳು, ಬಾಟಲಿಗಳು, ಮಡಿಕೆಗಳು, ಒಡೆದ ಪಿಂಗಾಣಿ ಪಾತ್ರೆಗಳು, ಹೂವಿನ ಕುಂಡಗಳ ತಟ್ಟೆಗಳು.

ಮುನ್ನೆಚ್ಚರಿಕೆ

ಡೆಂಗಿ ಮತ್ತು ಚಿಕೂನ್‌ಗುನ್ಯಕ್ಕೆ ನಿಖರ ಔಷಧವಿಲ್ಲ. ಸೊಳ್ಳೆಗಳ ನಿಯಂತ್ರಣದಿಂದ ರೋಗವನ್ನು ಹತೋಟಿಗೆ ತರಬಹುದು. ತೊಟ್ಟಿ, ಡ್ರಮ್‌ ಹಾಗೂ ಮಡಿಕೆಯಲ್ಲಿ ಶೇಖರಿಸಿದ ನೀರಿನಲ್ಲಿ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಜತೆಗೆ ಮನೆಯ ಸುತ್ತಲಿನ ಚರಂಡಿ ಹಾಗೂ ಗುಂಡಿಗಳಲ್ಲಿ ನಿಂತಿರುವ ನೀರಿನಲ್ಲೂ ಸೊಳ್ಳೆಗಳ ಸಂತಾನೋತ್ಪತ್ತಿ ನಡೆಯುತ್ತದೆ. ಹೀಗಾಗಿ ಸಿಮೆಂಟ್‌ ತೊಟ್ಟಿ, ಡ್ರಮ್‌ ಮತ್ತು ಮಡಿಕೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ನಂತರ ನೀರು ತುಂಬಿಸಬೇಕು. ಚರಂಡಿ ಹಾಗೂ ಗುಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.