ADVERTISEMENT

ಉಪನ್ಯಾಸಕರ ವೇತನ ವಿವಾದ: ಪರಿಷತ್‌ನಲ್ಲಿ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:45 IST
Last Updated 1 ಫೆಬ್ರುವರಿ 2012, 19:45 IST

ಬೆಂಗಳೂರು: ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ಅವಧಿಯ ವೇತನ ಬಿಡುಗಡೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಗಳವಾರ ಆಡಳಿತ ಪಕ್ಷದ ಸದಸ್ಯರ ಉಪಸ್ಥಿತಿಯಲ್ಲಿ ತೀರ್ಮಾನ ಪ್ರಕಟಿಸಿರುವುದು ಬುಧವಾರ ವಿಧಾನ ಪರಿಷತ್‌ನಲ್ಲಿ ವಾಕ್ಸಮರಕ್ಕೆ ಕಾರಣವಾಯಿತು.

ವಿಧಾನ ಪರಿಷತ್‌ನ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳನ್ನು ಪ್ರತಿನಿಧಿಸುವ ಬಿಜೆಪಿಯ ಕೆಲ ಸದಸ್ಯರು ಮಂಗಳವಾರ ಸಚಿವರನ್ನು ಭೇಟಿಮಾಡಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಪ್ರತಿಭಟನೆ ಅವಧಿಯ ವೇತನ ತಡೆ ಹಿಡಿದಿರುವ ಆದೇಶವನ್ನು ರದ್ದು ಮಾಡುವಂತೆ ಕೋರಿದ್ದರು. ಪ್ರತಿಭಟನೆ ಅವಧಿಯ ವೇತನ ಬಿಡುಗಡೆಗೆ ಆದೇಶ ಹೊರಡಿಸುವುದಾಗಿ ಸಚಿವರು ಪ್ರಕಟಿಸಿದ್ದರು.

ಕಾಗೇರಿ ಬುಧವಾರ ಪರಿಷತ್‌ನಲ್ಲಿ ಈ ಕುರಿತು ಹೇಳಿಕೆ ನೀಡಿದರು. ತಕ್ಷಣ ವಾಗ್ದಾಳಿ ನಡೆಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ಪುಟ್ಟಣ್ಣ, ಪಕ್ಷೇತರ ಸದಸ್ಯ ಮರಿತಿಬ್ಬೇಗೌಡ, `ಆಡಳಿತ ಪಕ್ಷದ ಸದಸ್ಯರ ಮಾತ್ರ ಸಭೆ ನಡೆಸಿ ರಾಜಕೀಯ ಮಾಡುತ್ತಿದ್ದೀರಿ. ನಾವು ಶಿಕ್ಷಕರ ಪ್ರತಿನಿಧಿಗಳಲ್ಲವೇ~ ಎಂದು ಪ್ರಶ್ನಿಸಿದರು.

ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸದನದ ಹೊರಗೆ ತೀರ್ಮಾನ ಪ್ರಕಟಿಸಿರುವುದಕ್ಕಾಗಿ ಜೆಡಿಎಸ್‌ನ ಎಂ.ಸಿ.ನಾಣಯ್ಯ ಮತ್ತು ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ ಅವರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಮುಖ್ಯಮಂತ್ರಿಮಧ್ಯ ಪ್ರವೇಶಿಸಿ ವಾಗ್ದಾಳಿಗೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.