ಬೆಂಗಳೂರು: ಜೀವನದ ಆರೋಗ್ಯಕರ ಕ್ಷಣಗಳನ್ನು ಕಳೆಯಲು ಚಿತ್ರದುರ್ಗದ ಕಾಲೇಜು ವಿದ್ಯಾರ್ಥಿ ಆದರ್ಶ ದಿವಾಕರ್ ಕಳೆದ 8 ವರ್ಷಗಳಿಂದ ಕಾಯುತ್ತಲೇ ಇದ್ದಾರೆ. ಆದರೆ, ಅವರಿಗೆ ಅಗತ್ಯವಾದ ಮೂತ್ರಪಿಂಡ ದಾನವಾಗಿ ನೀಡುವವರು ಮಾತ್ರ ಇದುವರೆಗೆ ಸಿಕ್ಕಿಲ್ಲ.
ಆದರ್ಶ, 21ರ ಹರೆಯದಲ್ಲೇ ಮೂತ್ರಪಿಂಡ ವೈಫಲ್ಯದ ಸಮಸ್ಯೆಗೆ ತುತ್ತಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಡಯಾಲಿಸಿಸ್ ಮೇಲಿದ್ದಾರೆ. ಅಂಗಾಂಗ ಕಸಿಗೆ ಸಂಬಂಧಿಸಿದ ವಲಯ ಸಮನ್ವಯ ಸಮಿತಿ (ಜೆಡ್‌ಸಿಸಿಕೆ)ಯಲ್ಲಿ ಅವರು 2005ರಲ್ಲೇ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಮೂತ್ರಪಿಂಡವನ್ನು ದಾನವಾಗಿ ಸ್ವೀಕರಿಸಲು ಅವರ ಪಾಳಿ ಮಾತ್ರ ಬಂದಿಲ್ಲ.
‘ಯಾರಾದರೂ ಮೂತ್ರಪಿಂಡವನ್ನು ದಾನ ಮಾಡುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. ಇತರರಂತೆ ನೆಮ್ಮದಿಯ ಜೀವನ ನಡೆಸುವ ಅಭಿಲಾಷೆ ನನ್ನದಾಗಿದೆ. ಮೂತ್ರಪಿಂಡ ಸಿಕ್ಕರೆ ನನಗೆ ಪುನರ್ಜನ್ಮವೇ ಸಿಕ್ಕಂತೆ’ ಎಂದು ಹೇಳುತ್ತಾರೆ ಬಿ.ಎ ಅಂತಿಮ ವರ್ಷದಲ್ಲಿ ಓದುತ್ತಿರುವ ಆದರ್ಶ.
‘ನನ್ನ ಗೆಳೆಯರೆಲ್ಲ ವಾರಕ್ಕೆ ಆರು ದಿನ ತರಗತಿಗೆ ಹಾಜರಾದರೆ ನಾನು ಕೇವಲ ಮೂರು ದಿನ ಹೋಗುತ್ತೇನೆ. ಮಿಕ್ಕ ಮೂರು ದಿನ ಡಯಾಲಿಸಿಸ್‌ಗೆ ತೆರಳಬೇಕಾಗುತ್ತದೆ. ಜೆಡ್‌ಸಿಸಿಕೆಯಲ್ಲಿ ಹೆಸರು ನೋಂದಾಯಿಸಿಕೊಂಡು ಎಂಟು ವರ್ಷಗಳೇ ಕಳೆದಿದ್ದರೂ ಇದುವರೆಗೆ ಒಮ್ಮೆಯೂ ಅಲ್ಲಿಂದ ನನಗೆ ಕರೆ ಬಂದಿಲ್ಲ’ ಎಂದು ಅತ್ಯಂತ ನೋವಿನಿಂದ ವಿವರಿಸುತ್ತಾರೆ. ಆದರ್ಶ ಅವರಿಗೆ ಚಿಕಿತ್ಸೆ ನೀಡುತ್ತಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ. ಅನಿಲ್ ಕುಮಾರ್, ‘ಮೂತ್ರಪಿಂಡ ಕಸಿ ಮಾಡಲು ರಕ್ತದ ಗುಂಪು ಮತ್ತು ರೋಗಿಯ ವಯಸ್ಸು ಎರಡೂ ಮುಖ್ಯ. ವಿರಳ ರಕ್ತದ ಗುಂಪಾಗಿದ್ದು, ರೋಗಿಗೆ ವಯಸ್ಸಾಗಿದ್ದರೆ ಕಸಿ ಮಾಡುವುದು ಕಷ್ಟ’ ಎಂದು ಹೇಳುತ್ತಾರೆ.
ರಾಜ್ಯದಲ್ಲಿ ಮೂತ್ರಪಿಂಡದ ದಾನಕ್ಕಾಗಿ ಕಾಯ್ದಿರುವ ಜನರ ಸಂಖ್ಯೆ ದೊಡ್ಡದಿದೆ. ‘ನಮ್ಮಲ್ಲಿ ಒಟ್ಟಾರೆ 910 ಜನ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಮೃತರಿಂದ ವಿರಳವಾಗಿ ಮೂತ್ರಪಿಂಡಗಳು ದಾನವಾಗಿ ಸಿಗುತ್ತಿವೆ. ಹೀಗಾಗಿ ಕಾಯುವುದು ಅನಿವಾರ್ಯವಾಗಿದೆ’ ಎಂದು ಜೆಡ್‌ಸಿಸಿಕೆ ಮುಖ್ಯ ಕಸಿ ಸಮನ್ವಯಾಧಿಕಾರಿ ಕೆ.ಯು. ಮಂಜುಳಾ ಕನ್ನಡಿ ಹಿಡಿಯುತ್ತಾರೆ.
‘ಅಂಗಾಂಗಳ ಕಸಿಗಾಗಿ ಪ್ರತಿಯೊಬ್ಬ ರೋಗಿ ಕನಿಷ್ಠ ಮೂರು ತಿಂಗಳು ಕಾಯಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ. ‘ಮೂತ್ರಪಿಂಡಕ್ಕಾಗಿ ಅಧಿಕ ಬೇಡಿಕೆ ಇರುವುದರಿಂದ ರೋಗಿಗಳ ಕಾಯುವ ಅವಧಿ ತುಂಬಾ ಹೆಚ್ಚಾಗಿದೆ’ ಎಂದು ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಡಾ.ಎಚ್.ಎಸ್. ಸುದರ್ಶನ ಬಲ್ಲಾಳ ವಿವರಿಸುತ್ತಾರೆ.
‘ಮೂತ್ರಪಿಂಡ ವೈಫಲ್ಯದ ಸಮಸ್ಯೆಗೆ ಡಯಾಲಿಸಿಸ್ ಉತ್ತಮ ಪರಿಹಾರವಲ್ಲ. ಇದರಿಂದ ಸಂಕೀರ್ಣ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯೇ ಹೆಚ್ಚು’ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.