ADVERTISEMENT

ಎಚ್1ಎನ್1: ಪಾಲಿಕೆಯಿಂದ ಮುನ್ನೆಚ್ಚರಿಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ಬೆಂಗಳೂರು:  ನಗರದಲ್ಲಿ ಎಚ್1ಎನ್1 ವ್ಯಾಪಕವಾಗಿ ಹರಡುತ್ತಿದೆ ಎಂಬ ದಟ್ಟ ವದಂತಿಗಳ ನಡುವೆ ರೋಗ ಹರಡುವುದನ್ನು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ. ಗೀತಾ ಶಶಿಕುಮಾರ್ ಸೋಮವಾರ ಇಲ್ಲಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಗರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಜನವರಿಯಿಂದ ಇದುವರೆಗೆ ನಗರದಲ್ಲಿ ನಾಲ್ವರು ಎಚ್1ಎನ್1ಗೆ ಸಾವನ್ನಪ್ಪಿದ್ದು, ಈ ಪೈಕಿ ಇಬ್ಬರು ಮಾತ್ರ ನಗರಕ್ಕೆ ಸೇರಿದವರಾಗಿದ್ದಾರೆ. ಫೆಬ್ರುವರಿಯಲ್ಲಿ ಒಬ್ಬರು, ಮಾರ್ಚ್‌ನಲ್ಲಿ ಇಬ್ಬರು ಹಾಗೂ ಏಪ್ರಿಲ್ ಒಬ್ಬರು ಈ ಕಾಯಿಲೆಯಿಂದ ಮರಣ ಹೊಂದಿದ್ದಾರೆ~ ಎಂದು ಮಾಹಿತಿ ನೀಡಿದರು.

`ನಗರದ ಕಲ್ಯಾಣ ನಗರದ ಸುಜಾ (*3), ರಾಜಾಜಿನಗರದ ಶಾಂತಾ (22), ಚಿಕ್ಕಬಳ್ಳಾಪುರದ ಮಾರಪ್ಪ (**) ಹಾಗೂ ಕೆಜಿಎಫ್‌ನ ರಾಮಾಚಾರಿ (*5) ಎಚ್1ಎನ್1ಗೆ ಸತ್ತಿದ್ದಾರೆ. ಇದುವರೆಗೆ ಎಚ್1ಎನ್1 ಸೋಂಕು ಲಕ್ಷಣವಿರುವ 58 ರೋಗಿಗಳು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಜನವರಿಯಲ್ಲಿ 1, ಫೆಬ್ರುವರಿಯಲ್ಲಿ 8, ಮಾರ್ಚ್‌ನಲ್ಲಿ 29 ಹಾಗೂ ಏಪ್ರಿಲ್ 20 ಪ್ರಕರಣಗಳು ಪತ್ತೆಯಾಗಿವೆ. ಸೋಂಕುಪೀಡಿತರಲ್ಲಿ ಏಳು ಮಂದಿ ರಾಜ್ಯದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದು, ನಾಲ್ವರು ಹೊರ (ಒಬ್ಬರು ಕೇರಳ ಹಾಗೂ ಮೂವರು ಆಂಧ್ರಪ್ರದೇಶ) ರಾಜ್ಯದವರಾಗಿದ್ದಾರೆ~ ಎಂದು ಅವರು ತಿಳಿಸಿದರು.

`ರೋಗ ಹರಡುವುದನ್ನು ನಿಯಂತ್ರಿಸಲು ಪಾಲಿಕೆಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕರಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ರೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪಾಲಿಕೆಯ ಹೆರಿಗೆ ಮತ್ತು ರೆಫರಲ್ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳನ್ನು ದಾಸ್ತಾನಿಡಲಾಗಿದೆ~ ಎಂದು ಅವರು ಹೇಳಿದರು.

`ಎಚ್1ಎನ್1 ಪ್ರಕರಣಗಳು ಕಂಡು ಬರುವಂತಹ ಪ್ರದೇಶಗಳಿಗೆ ಪಾಲಿಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ರೋಗ ಲಕ್ಷಣಗಳಿಂದ ಬಳಲುವ ರೋಗಿಯ ಮನೆಯ ಸುತ್ತಮತ್ತಲಿನ ಮನೆಗಳ ಸಮೀಕ್ಷೆ ನಡೆಸಿ ಇತರರಿಗೆ ಸೋಂಕು ಹರಡುತ್ತಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
 
ಎಚ್1ಎನ್1 ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ ಮನೆಯಲ್ಲೇ ಇರುವಂತೆ ಸಲಹೆ ಮಾಡಲಿದ್ದಾರೆ. ರೋಗ ವಾಸಿಯಾಗದಿದ್ದಲ್ಲಿ ಎರಡು ದಿನಗಳ ನಂತರ ವೈದ್ಯರ ಬಳಿ ಚಿಕಿತ್ಸೆ ಪಡೆಯುವಂತೆ ಸಲಹೆ ಮಾಡಲಿದ್ದಾರೆ~ ಎಂದರು.

`ಎಚ್1ಎನ್1 ವೈರಸ್‌ನಿಂದ ಗಾಳಿಯ ಮೂಲಕ ಹರಡುವ ರೋಗ. ಈ ಹಿಂದೆ ಚಳಿಗಾಲದಲ್ಲಿ ಈ ರೋಗ ಹರಡಿದ್ದರೆ, ಇದೀಗ ಬೇಸಿಗೆಯಲ್ಲಿ ಹರಡಿದೆ. ಕಳೆದ ಬಾರಿಗೆ ಹೋಲಿಸಿದರೆ ಇದು ಬೇರೆ ರೀತಿಯ ವೈರಸ್ ಆಗಿರುವುದರಿಂದ ಬೇಸಿಗೆಯಲ್ಲೂ ಕಾಯಿಲೆ ಹರಡುತ್ತಿದೆ~ ಎಂದು ಡಾ. ಗೀತಾ ಶಶಿಕುಮಾರ್ ತಿಳಿಸಿದರು.

`ಈ ರೋಗದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಸಾರ್ವಜನಿಕರಲ್ಲಿ ಅನಗತ್ಯವಾಗಿ ಭಯ- ಆತಂಕ ಹುಟ್ಟಿಸುವ ರೀತಿಯಲ್ಲಿ ವರದಿ ಪ್ರಕಟಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಎಚ್1ಎನ್1 ರೋಗದ ಬಗ್ಗೆ ನಿಮ್ಹಾನ್ಸ್‌ನಲ್ಲಿ ಉಚಿತವಾಗಿ ಪರೀಕ್ಷೆ ನಡೆಸಲಾಗುತ್ತದೆ.
 
ನಾರಾಯಣ ನೇತ್ರಾಲಯ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲೂ ರೋಗದ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಈ ಎರಡು ಆಸ್ಪತ್ರೆಗಳಲ್ಲಿ ರೋಗಿಗಳು ನಿಗದಿತ ಮೊತ್ತ ಪಾವತಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ~ ಎಂದು ಸ್ಪಷ್ಟಪಡಿಸಿದರು.

ರೋಗ ಲಕ್ಷಣಗಳು...
ತೀವ್ರ ಸ್ವರೂಪದ ಜ್ವರ, ಅತಿ ಭೇದಿ-ವಾಂತಿ, ಅತಿಯಾದ ಮೈ ಕೈ ನೋವು, ಕೆಮ್ಮು ಮತ್ತು ಹಳದಿ ಕಫ, ನೆಗಡಿ ಮತ್ತು ಗಂಟಲು ಕೆರೆತ, ಉಸಿರಾಟ ತೊಂದರೆ. ರೋಗ ತಡೆಗೆ ಅನುಸರಿಸಬೇಕಾದ ಕ್ರಮಗಳು

* ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳಿ.

* ಮೂಗು, ಕಣ್ಣು ಅಥವಾ ಬಾಯಿ ಮುಟ್ಟಿಕೊಳ್ಳುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.

* ಚೆನ್ನಾಗಿ ನಿದ್ದೆ ಮಾಡಿ. ದೈಹಿಕವಾಗಿ ಚಟುವಟಿಕೆಯಿಂದಿರಿ. ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಿ.

* ಧಾರಾಳವಾಗಿ ನೀರು ಕುಡಿಯಿರಿ. ಪೌಷ್ಠಿಕಾಂಶವಿರುವ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

* ಜನಸಂದಣಿಯಿರುವ ಸ್ಥಳಗಳಿಗೆ ಹೋದಾಗ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳುವುದನ್ನು ಮರೆಯದಿರಿ (ಉದಾ: ಮಾಸ್ಕ್ ಹಾಕಿಕೊಳ್ಳುವುದು, ರೋಗ ಲಕ್ಷಣವಿರುವ ವ್ಯಕ್ತಿಗಳಿಂದ ಒಂದು ಮೀಟರ್ ದೂರ ಇರುವುದು).
ಮಾಡಬಾರದ ಕ್ರಿಯೆಗಳು...

* ಹಸ್ತಲಾಘವ ಅಥವಾ ಇತರೆ ರೂಪದಲ್ಲಿ ದೈಹಿಕ ಸಂಪರ್ಕದೊಂದಿಗೆ ಶುಭ ಕೋರುವುದು.

* ವೈದ್ಯರ ಸಲಹೆಯಿಲ್ಲದೆ ಔಷಧಿ ಪಡೆದುಕೊಳ್ಳುವುದು.

* ರಸ್ತೆಯಲ್ಲಿ/ ಎಲ್ಲೆಂದರಲ್ಲಿ ಉಗುಳುವುದು.

* ಅನಾವಶ್ಯಕವಾಗಿ ಜನಸಂದಣಿ ಪ್ರದೇಶಗಳಿಗೆ ಭೇಟಿ ನೀಡುವುದು, ಅನಾವಶ್ಯಕವಾಗಿ ಪ್ರಯಾಣಿಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.