ADVERTISEMENT

ಎರಡೂವರೆ ದಶಕಗಳ ನಾಗರಿಕರ ಹೋರಾಟಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಬೆಂಗಳೂರು: ಕಾವಲಬೈರಸಂದ್ರದ ಸುತ್ತಮುತ್ತಲೂ ಇರುವ ಜನರು ಮೋದಿ ಗಾರ್ಡನ್ ಲೇಔಟ್ ತಲುಪುವ ಸಂಬಂಧ ರಕ್ಷಣಾ ಇಲಾಖೆ ನಿರ್ಮಿಸಿರುವ ಪರ್ಯಾಯ ರಸ್ತೆಯನ್ನು ಜನರ ಓಡಾಟಕ್ಕೆ ಮುಕ್ತಗೊಳಿಸುವಂತೆ ಹೈಕೋರ್ಟ್ ಗುರುವಾರ ರೆಜಿಮೆಂಟ್ ಸೆಂಟರ್‌ಗೆ ಆದೇಶಿಸಿದೆ.

ಇದೇ ರಸ್ತೆಯನ್ನು ಬಳಸುವ ಸಂಬಂಧ ಈ ಭಾಗದ ಜನರು ಎರಡೂವರೆ ದಶಕಗಳಿಂದ (1985ರಿಂದ) ನಡೆಸುತ್ತಿದ್ದ ಹೋರಾಟಕ್ಕೆ ಈ ಆದೇಶ ಹಿನ್ನೆಲೆಯಲ್ಲಿ ತೆರೆ ಬಿದ್ದಂತಾಗಿದೆ.

ಈ ರಸ್ತೆಯನ್ನು ಮುಚ್ಚಿರುವ ರೆಜಿಮೆಂಟ್ ಸೆಂಟರ್ ವಿರುದ್ಧ ಎ.ಆರ್.ಸುರೇಶ್ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಸುಮಾರು ಒಂದೂವರೆ ಕಿ.ಮೀ. ಅಂತರದ ಈ ರಸ್ತೆಯನ್ನು ರಕ್ಷಣಾ ಇಲಾಖೆ ಮುಚ್ಚಿದ್ದ ಹಿನ್ನೆಲೆಯಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ಜನರು ಸುಮಾರು 8 ಕಿ.ಮೀ. ದೂರ ಕ್ರಮಿಸಬೇಕಾಗಿದೆ ಎನ್ನುವುದು ಅರ್ಜಿದಾರರ ದೂರಾಗಿತ್ತು. ಅಷ್ಟೇ ಅಲ್ಲದೇ ಈ ವಿವಾದಿತ ರಸ್ತೆಯ ಮಧ್ಯೆ ಸರ್ಕಾರಿ ಶಾಲೆಗಳೂ ಇವೆ.
 
ಅಲ್ಲಿಗೆ ಹೋಗಲು ವಿದ್ಯಾರ್ಥಿಗಳು ಪರದಾಡಬೇಕಾಗುತ್ತಿದೆ. ಹನುಮ ದೇವಾಲಯ (ಕಲ್ಯಾಣ ಮಂಟಪ) ಇದೆ. ಆದರೆ ರಕ್ಷಣಾ ಇಲಾಖೆ ಇಲ್ಲಿಗೆ ಹೋಗಲು ಬಿಡದ ಕಾರಣ, ವಿವಾಹ ನೆರವೇರಿಸಲು ಕಷ್ಟಸಾಧ್ಯವಾಗುತ್ತಿದೆ ಎನ್ನುವುದೂ ಅರ್ಜಿದಾರರ ಆರೋಪವಾಗಿತ್ತು.

ರಸ್ತೆ ಮುಕ್ತಗೊಳಿಸಲು ಈ ಹಿಂದೆ ಕೋರ್ಟ್ ಆದೇಶಿಸಿತ್ತು. ಆದರೆ ರಸ್ತೆಯು ರಕ್ಷಣಾ ಇಲಾಖೆಗೆ ಸೇರಿದ್ದೋ ಅಥವಾ ಬಿಬಿಎಂಪಿಯ ವ್ಯಾಪ್ತಿಗೆ ಬರುವುದೋ ಎಂಬ ಬಗ್ಗೆ ಇಬ್ಬರ ನಡುವೆ ಜಟಾಪಟಿ ಇದ್ದ ಹಿನ್ನೆಲೆಯಲ್ಲಿ ಆದೇಶ ಪಾಲನೆ ಆಗಿರಲಿಲ್ಲ. ಇದರಿಂದ ಪಾಲಿಕೆ ಹಾಗೂ ರಕ್ಷಣಾ ಇಲಾಖೆ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನೂ ದಾಖಲು ಮಾಡಲಾಗಿತ್ತು. ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅದರ ನಿರ್ದೇಶನದ ಮೇರೆಗೆ ಪುನಃ ಹೈಕೋರ್ಟ್‌ಗೆ ಬಂದಿತ್ತು.

ಕಟ್ಟಡ ತೆರವಿಗೆ ಆದೇಶ
ವಿಜಯನಗರದ ಬಳಿ ಇರುವ `ಸತ್ಯಪ್ರಕಾಶ್ ಆಸ್ಪತ್ರೆ~ಯ ನೆಲ ಮಹಡಿಯನ್ನು ಮೂರು ದಿನಗಳಲ್ಲಿ ತೆರವುಗೊಳಿಸುವಂತೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಕಾನೂನು ಉಲ್ಲಂಘಿಸಿ ಇಲ್ಲಿ ಮೂರು ಮಹಡಿಗಳ ಕಟ್ಟಡ ನಿರ್ಮಾಣವಾಗಿದೆ ಎಂದು ದೂರಿ ಚಿಕ್ಕಣ್ಣ ಎನ್ನುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಎರಡು ಮಹಡಿ ನಿರ್ಮಾಣಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಮೂರನೇ ಮಹಡಿ ನಿರ್ಮಾಣಗೊಂಡಿದೆ ಎನ್ನುವುದು ಅರ್ಜಿದಾರರ ದೂರಾಗಿತ್ತು.

ಆದರೆ, ನೆಲಮಹಡಿಯ ನಿರ್ಮಾಣಕ್ಕೆ ನೀಡಿರುವ ಅನುಮತಿಯನ್ನೂ ಹಿಂದಕ್ಕೆ ಪಡೆದಿರುವ ಕುರಿತು ವಿಚಾರಣೆ ವೇಳೆ ಬಿಬಿಎಂಪಿ ತಿಳಿಸಿತು. ಈ ಹಿನ್ನೆಲೆಯಲ್ಲಿ ತೆರವಿಗೆ ಪೀಠ ನಿರ್ದೇಶಿಸಿದೆ.

ರಕ್ಷಣೆ ಹಿಂದಕ್ಕೆ: ಮಾಹಿತಿಗೆ ಆದೇಶ
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಅವರ ವಿರುದ್ಧ ಭೂಹಗರಣಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿರುವ ಎನ್.ರಾಮಾಂಜನಪ್ಪ ಅವರಿಗೆ ನೀಡಲಾದ ಪೊಲೀಸ್ ರಕ್ಷಣೆಯನ್ನು ಏತಕ್ಕೆ ಹಿಂದಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರಿಗೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಇವರಿಗೆ 2010ರ ಡಿಸೆಂಬರ್‌ನಲ್ಲಿ ರಕ್ಷಣೆ ನೀಡಲಾಗಿತ್ತು. ಅದನ್ನು 2011ರ ಜುಲೈನಲ್ಲಿ ವಿಸ್ತರಣೆ ಮಾಡಲಾಗಿತ್ತು. ಕಳೆದ ಡಿ.10ರಂದು ಅದನ್ನು ಹಿಂದಕ್ಕೆ ಪಡೆಯಲಾಗಿದೆ.

ಅವರಿಗೆ ರಕ್ಷಣೆ ನೀಡಲು ಕೋರ್ಟ್ ನೀಡಿರುವ ಅವಧಿ ಮುಗಿದ ಹಿನ್ನೆಲೆಯಲ್ಲಿ ಹಿಂದಕ್ಕೆ ಪಡೆಯಲಾಗಿದೆ ಎನ್ನುವುದು ಪೊಲೀಸರ ವಾದ. ಆದರೆ ಇದು ಸರಿಯಲ್ಲ ಎನ್ನುವುದು ರಾಮಾಂಜನಪ್ಪ ಅವರ ವಾದ. ಈ ಹಿನ್ನೆಲೆಯಲ್ಲಿ ವಾಸ್ತವ ಸ್ಥಿತಿ ತಿಳಿಯಲು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಬಯಸಿದ್ದಾರೆ.

ತನಿಖೆಗೆ ಹಸಿರು ನಿಶಾನೆ
`ಇನ್ನೋವೇಟಿವ್ ಫಿಲಂ ಸಿಟಿ~ ಅಧ್ಯಕ್ಷ ಸರವಣ ಪ್ರಸಾದ್ ಅವರ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದತಿ ತಡೆಗೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಇವರ ಮೇಲಿರುವ ಆರೋಪಗಳು ಗಂಭೀರವಾಗಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಯಲಿ ಎಂದು ನ್ಯಾಯಮೂರ್ತಿ ಎನ್.ಆನಂದ ನಿರ್ದೇಶಿಸಿದ್ದಾರೆ.

ಫಿಲಂ ಸಿಟಿಯಲ್ಲಿ ನಿರ್ಮಾಣ ಮಾಡಿರುವ ವಾಣಿಜ್ಯ ಸಂಕೀರ್ಣದಲ್ಲಿ ಹಣ ತೊಡಗಿಸುವಂತೆ ತಿಳಿಸಿ ಭಾರಿ ಅವ್ಯವಹಾರ ಮಾಡಿರುವ ಆರೋಪ ಇವರ ಮೇಲೆ ಇದೆ. ಇವರ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ `ಹೂಡಿಕೆದಾರರ ಸಂಘ~ ದೂರು ದಾಖಲು ಮಾಡಿತ್ತು.

ಆದುದರಿಂದ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ರದ್ದತಿಗೆ ಅವರು ಕೋರಿದ್ದರು. ಆದರೆ ಅರ್ಜಿಯನ್ನು ನ್ಯಾಯಮೂರ್ತಿಗಳು ವಜಾಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.