ADVERTISEMENT

‘ಎಸ್‌ಐಟಿ ತನಿಖೆ ಬಾಕಿ’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

‘ಕೋರ್ಟ್‌ ಮೇಲ್ವಿಚಾರಣೆ ಯಲ್ಲಿ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು’ ಎಂದು ಕೋರಿ ಸೌಜನ್ಯಳ ತಂದೆ ಚಂದಪ್ಪ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಬೆಳ್ತಂಗಡಿ ಪೊಲೀಸರು ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ಸಿಬಿಐ ಕಡೆಗಣಿಸಿದೆ’ ಎಂದು ಆರೋಪಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಈ ಪ್ರಕರಣದಲ್ಲಿ ರಾಜ್ಯ ಪೊಲೀಸ್‌, ಸಿಐಡಿ, ಸಿಬಿಐ ತನಿಖೆ ಆಗಿದೆ. ಇನ್ನು ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆಯೊಂದು ಬಾಕಿ ಉಳಿದಿದೆ’ ಎಂದು ಹೇಳಿದರು.

‘ಬೆಳ್ತಂಗಡಿ ಪೊಲೀಸರಿಂದ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕಾಗಿಯೇ ತನಿಖೆಯನ್ನು ಮೊದಲು ಸಿಐಡಿಗೆ ವಹಿಸಲಾಗಿತ್ತು. ಆನಂತರವೇ ಸಿಬಿಐಗೆ ವಹಿಸಲಾಗಿದೆ. ಆದರೆ, ಸಿಬಿಐ ತನಿಖೆ ಕೂಡಾ ಅನುಮಾನಾಸ್ಪದವಾಗಿದೆಯಲ್ಲಾ, ಸಾಕ್ಷಿಗಳಾದ ಹರೀಶ್ ಮತ್ತು ಗೋಪಾಲ್ ಅವರ ಹೇಳಿಕೆಗಳನ್ನು ದೋಷಾರೋಪ ಪಟ್ಟಿಯಲ್ಲಿ ಏಕೆ ಉಲ್ಲೇಖಿಸಿಲ್ಲ’ ಎಂದು ಪ್ರಶ್ನಿಸಿದರು.

‘ಹರೀಶ್ ಹಾಗೂ ಗೋಪಾಲ್ ಹೇಳಿಕೆಗಳನ್ನು ದೋಷಾರೋಪ ಪಟ್ಟಿಯಲ್ಲಿ ದಾಖಲಿಸದಿರುವುದಕ್ಕೆ ಕಾರಣ ಏನು ಎಂಬುದಕ್ಕೆ ತನಿಖಾಧಿಕಾರಿಗಳಿಂದ ಮಾಹಿತಿ ಪಡೆದು ಕೋರ್ಟ್‌ಗೆ ಒದಗಿಸಬೇಕು’ ಎಂದು ಸಿಬಿಐ ಪರ ವಕೀಲರಿಗೆ ಸೂಚಿಸಿದರು.

ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ.

ಏನಿದು ಪ್ರಕರಣ? : 17 ವರ್ಷದ ಸೌಜನ್ಯ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿ.ಯು ಓದುತ್ತಿದ್ದಳು. ‘2012ರ ಅಕ್ಟೋಬರ್‌ 10ರಂದು ಆಕೆ ಕಾಲೇಜಿನಿಂದ ಮನೆಗೆ ಬರುವಾಗ ದಾರಿ ಮಧ್ಯದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾಗಿದ್ದಳು’ ಎಂದು ಬೆಳ್ತಂಗಡಿ ಪೊಲಿಸರು ಪ್ರಕರಣ ದಾಖಲಿಸಿದ್ದರು.

ಸಾರ್ವಜನಿಕರ ಒತ್ತಡದ ಮೇರೆಗೆ ಪ್ರಕರಣವನ್ನು ರಾಜ್ಯ ಸರ್ಕಾರ 2013ರ ನವೆಂಬರ್‌ನಲ್ಲಿ ಸಿಐಡಿಗೆ ವಹಿಸಿತ್ತು. ನಂತರ ಸಿಬಿಐ ತನಿಖೆಗೆ
ವರ್ಗಾಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.