ADVERTISEMENT

ಐ.ಟಿ ವಲಯಕ್ಕೆ ಒತ್ತು ನೀಡಿ: ಐಟಿಇಸಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:34 IST
Last Updated 20 ಏಪ್ರಿಲ್ 2013, 19:34 IST
ನಗರದಲ್ಲಿ ಐಟಿಇಸಿ ಸಂಘಟನೆಯು ಶನಿವಾರ ಏರ್ಪಡಿಸಿದ್ದ `ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಾಗೂ ತಂತ್ರಜ್ಞರಿಗಾಗಿ ಚುನಾವಣಾ ಪ್ರಣಾಳಿಕೆ' ಕುರಿತ ಸರ್ವಪಕ್ಷಗಳ ಸಮಾವೇಶದಲ್ಲಿ (ಎಡದಿಂದ) ಸಿಪಿಎಂ ಮುಖಂಡ ಪ್ರಕಾಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಪ್ರಭಾಕರ, ಸಿಪಿಎಂಎಲ್ ಮುಖಂಡ ವಿ.ಶಂಕರ್, ಕೆಜೆಪಿ ಉಪಾಧ್ಯಕ್ಷ ಮೈಕೆಲ್ ಫರ್ನಾಂಡಿಸ್, ಲೋಕಸತ್ತಾ ಪಕ್ಷದ ವಕ್ತಾರ ಅಜಿತ್ ಹಾಗೂ ಅಮ್ ಆದ್ಮಿ ಪಕ್ಷದ ಮುಖಂಡ ಸುಮಿತ್ ಭಾಗವಹಿಸಿದ್ದರು
ನಗರದಲ್ಲಿ ಐಟಿಇಸಿ ಸಂಘಟನೆಯು ಶನಿವಾರ ಏರ್ಪಡಿಸಿದ್ದ `ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಾಗೂ ತಂತ್ರಜ್ಞರಿಗಾಗಿ ಚುನಾವಣಾ ಪ್ರಣಾಳಿಕೆ' ಕುರಿತ ಸರ್ವಪಕ್ಷಗಳ ಸಮಾವೇಶದಲ್ಲಿ (ಎಡದಿಂದ) ಸಿಪಿಎಂ ಮುಖಂಡ ಪ್ರಕಾಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಪ್ರಭಾಕರ, ಸಿಪಿಎಂಎಲ್ ಮುಖಂಡ ವಿ.ಶಂಕರ್, ಕೆಜೆಪಿ ಉಪಾಧ್ಯಕ್ಷ ಮೈಕೆಲ್ ಫರ್ನಾಂಡಿಸ್, ಲೋಕಸತ್ತಾ ಪಕ್ಷದ ವಕ್ತಾರ ಅಜಿತ್ ಹಾಗೂ ಅಮ್ ಆದ್ಮಿ ಪಕ್ಷದ ಮುಖಂಡ ಸುಮಿತ್ ಭಾಗವಹಿಸಿದ್ದರು   

ಬೆಂಗಳೂರು: `ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ಸೂಕ್ತ ರಕ್ಷಣೆ ಹಾಗೂ ಕಾರ್ಮಿಕ ಕಾನೂನುಗಳ ಪರಿಣಾಮಕಾರಿ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರಕಟಿಸಬೇಕು' ಎಂದು ಐಟಿಇಸಿ ಸಂಘಟನೆ ಆಗ್ರಹಿಸಿದೆ.

ನಗರದಲ್ಲಿ `ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಾಗೂ ತಂತ್ರಜ್ಞರಿಗಾಗಿ ಚುನಾವಣಾ ಪ್ರಣಾಳಿಕೆ' ಕುರಿತ ಸರ್ವಪಕ್ಷಗಳ ಸಮಾವೇಶವನ್ನು ಐಟಿಇಸಿ ಸಂಘಟನೆ ಶನಿವಾರ ಏರ್ಪಡಿಸಿತ್ತು.

ಸಮಾವೇಶದಲ್ಲಿ ಮಾತನಾಡಿದ ಸಂಘಟನೆಯ ಮುಖ್ಯಸ್ಥ ಸುರೇಶ್, `ಐ.ಟಿ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಶೋಷಣೆ ಇದೆ. ಕಾರ್ಮಿಕ ಕಾನೂನುಗಳಿಂದ ಐಟಿ ಕ್ಷೇತ್ರವನ್ನು ಹೊರಗಿಡಲಾಗಿದ್ದು, ಉದ್ಯೋಗಿಗಳು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ. ನಕಲಿ ಕಂಪೆನಿಗಳ ಹಾವಳಿ ಮಿತಿ ಮೀರಿದ್ದು, ಉದ್ಯೋಗಿಗಳನ್ನು ವಂಚಿಸಲಾಗುತ್ತಿದೆ. ಆದರೆ ಈ ಯಾವ ಸಮಸ್ಯೆಗಳನ್ನೂ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ದೇಶದ ಅಭಿವೃದ್ಧಿಯಲ್ಲಿ ಐಟಿ ಕ್ಷೇತ್ರದ ಕೊಡುಗೆ ಅಪಾರ. ಇಲ್ಲಿನ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ದೊಡ್ಡ ನಷ್ಟ ಸಂಭವಿಸಲಿದೆ. ಆದ್ದರಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರು, ಟ್ರಾಫಿಕ್ ಸಮಸ್ಯೆ ನಿವಾರಣೆ, ಮಹಿಳೆಯರ ರಕ್ಷಣೆಗೆ ಸೂಕ್ತ ವ್ಯವಸ್ಥೆ, ಕಾರ್ಮಿಕ ಕಾನೂನುಗಳ ಜಾರಿ, ಕ್ಯಾಂಪಸ್ ಆಯ್ಕೆ ಹಾಗೂ ಗುತ್ತಿಗೆ ಆಧಾರದ ನೇಮಕಾತಿಗೆ ಹೊಸ ವಿಧಾನ ಸೇರಿದಂತೆ ಹಲವು ಸಮಸ್ಯೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರಕಟಿಸಬೇಕು' ಎಂದು ಅವರು ಒತ್ತಾಯಿಸಿದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಟಿ.ಪ್ರಭಾಕರ ಮಾತನಾಡಿ, `ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮತ್ತಷ್ಟು ಐಟಿ ವಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು' ಎಂದರು.

ಕೆಜೆಪಿ ಉಪಾಧ್ಯಕ್ಷ ಮೈಕೆಲ್ ಫರ್ನಾಂಡಿಸ್ ಮಾತನಾಡಿ, `ಐಟಿ ಉದ್ಯೋಗಿಗಳ ಹಕ್ಕುಗಳ ರಕ್ಷಣೆ ಹಾಗೂ ಕಾರ್ಮಿಕ ಕಾನೂನುಗಳ ಜಾರಿಗೆ ಕೆಜೆಪಿ ಸದಾ ಬದ್ಧ' ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ, ಆಮ್ ಆದ್ಮಿ , ಲೋಕಸತ್ತಾ ಸೇರಿದಂತೆ ಎಡ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.