ADVERTISEMENT

ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಶೀಘ್ರ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 20:10 IST
Last Updated 5 ಜುಲೈ 2017, 20:10 IST
ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಶೀಘ್ರ ಚಾಲನೆ
ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಶೀಘ್ರ ಚಾಲನೆ   

ಬೆಂಗಳೂರು: ನಗರದಲ್ಲಿ ವಾಸಿಸುತ್ತಿರುವ ವಸತಿರಹಿತ ಬಡವರಿಗೆ ಸೂರು ನಿರ್ಮಿಸಿ ಹಂಚಿಕೆ ಮಾಡುವ ‘ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ’ಗೆ ಶೀಘ್ರ ಚಾಲನೆ ಸಿಗಲಿದೆ.

ಯೋಜನೆಯ ರೂಪುರೇಷೆ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ವಸತಿ, ಹಣಕಾಸು, ಕಂದಾಯ ಇಲಾಖೆ, ಗೃಹ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಬಹುಮಹಡಿಗಳ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ತಕ್ಷಣ ವಸತಿ ಇಲಾಖೆಗೆ ಹಸ್ತಾಂತರಿಸುವಂತೆ ಹಣಕಾಸು ಇಲಾಖೆಗೆ ಮುಖ್ಯಮಂತ್ರಿ ಆದೇಶಿಸಿದರು.

ADVERTISEMENT

‘ಯೋಜನೆಗೆ ಅಗತ್ಯವಾದ 1,130 ಎಕರೆ ಸರ್ಕಾರಿ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ.   ಮಂಜೂರಾತಿಗೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ’ ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಈ ಜಾಗದಲ್ಲಿ ಮನೆಗಳನ್ನು ನಿರ್ಮಿಸಬಹುದೇ, ಅದು ವಾಸಯೋಗ್ಯವೇ ಎಂಬ ಬಗ್ಗೆ ಸ್ಥಳ ಪರಿಶೀಲಿಸಿ ಹತ್ತು ದಿನಗಳ ಒಳಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಯೋಜನೆಯಡಿ ನಿಗದಿಪಡಿಸಿದ ಮನೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿಯವರಿಗೆ ಶೇ 30 , ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ತಲಾ ಶೇ 10, ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು ಮೀಸಲಿಡಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.

ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ. ಅತ್ಯಂತ ಪಾರದರ್ಶಕವಾಗಿ ಮನೆಗಳನ್ನು ಹಂಚಿಕೆ ಮಾಡಲು ಮತ್ತು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದರು.

ಸಭೆ ಬಳಿಕ ಮಾತನಾಡಿದ ವಸತಿ ಸಚಿವ ಎಂ. ಕೃಷ್ಣಪ್ಪ, ‘ಬೆಂಗಳೂರು ಸುತ್ತಮುತ್ತ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನು ತೆರವುಗೊಳಿಸಿರುವ ಪೈಕಿ 1,300 ಎಕರೆ ಜಾಗವನ್ನು ಈ ಉದ್ದೇಶಕ್ಕೆ ಗುರುತಿಸಲಾಗಿದೆ. ನೆಲಮಹಡಿ ಜೊತೆಗೆ ಮೂರು ಅಂತಸ್ತಿನ (ಜಿ+3) ಮನೆಗಳನ್ನು ನಿರ್ಮಾಣ ಮಾಡಲಾಗುವುದು’ ಎಂದರು.

‘ಬೆಂಗಳೂರಿನಲ್ಲಿ ವಸತಿರಹಿತ 60 ಲಕ್ಷ ಕುಟುಂಬಗಳಿವೆ. ಈಗಾಗಲೇ 26 ಲಕ್ಷ ಮನೆಗಳನ್ನು ನಿರ್ಮಿಸಿಕೊಡಲಾಗಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.