ADVERTISEMENT

ಓಕಳಿಪುರ ಅಷ್ಟ ಪಥದ ಕಾರಿಡಾರ್‌ ಸನ್ನಿಹಿತ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಬೆಂಗಳೂರು: ನಗರದ ರೈಲ್ವೆ ನಿಲ್ದಾಣದ ಸಮೀಪದ ಓಕುಳಿಪುರ ಜಂಕ್ಷನ್‌ ಆಸುಪಾಸಿನ ಪ್ರದೇಶದಲ್ಲಿ ಗಂಟೆಗಟ್ಟಲೆ ಸಂಚಾರದಟ್ಟಣೆಯಲ್ಲಿ ಸಿಲುಕಿ ಬಳಲಿರುವ ವಾಹನ ಸವಾರರು ಮುಂದಿನ ದಿನಗಳಲ್ಲಿ ಒತ್ತಡರಹಿತರಾಗಿ ಸಂಚರಿಸಬಹುದು.

ಓಕಳಿಪುರ ಜಂಕ್ಷನ್‌ನಿಂದ ಫೌಂಟೇನ್‌ ವೃತ್ತದವರೆಗೆ (ಸಂಗೊಳ್ಳಿ ರಾಯಣ್ಣ) ಎಂಟು ಪಥದ ಸಿಗ್ನಲ್‌ ಮುಕ್ತ ಕಾರಿಡಾರ್‌ ಶೀಘ್ರದಲ್ಲೇ ನಿರ್ಮಾಣವಾಗಲಿದೆ. ಈ ಕಾರಿಡಾರ್ ನಿರ್ಮಾಣಕ್ಕೆ ಎದುರಾಗಿದ್ದ ಆತಂಕವನ್ನು ರಾಜ್ಯ ಸರ್ಕಾರ ನಿವಾರಿಸಿದೆ. ಕಾರಿಡಾರ್‌ ನಿರ್ಮಾಣದಿಂದ ವಾಹನ ದಟ್ಟಣೆ ಕಡಿಮೆ ಆಗಿ ನಗರದ ಕೇಂದ್ರ ಭಾಗ ಹಾಗೂ ರಾಜಾಜಿನಗರ, ವಿಜಯನಗರ, ಬಸವೇಶ್ವರ ನಗರ, ನಾಗರಭಾವಿ ಮತ್ತಿತರ ಪ್ರದೇಶಗಳ ನಡುವೆ ಸುಲಲಿತ ಸಂಚಾರ ವ್ಯವಸ್ಥೆ ರೂಪುಗೊಳ್ಳಲಿದೆ.

ದಟ್ಟಣೆ ಯಾಕೆ: ಕೆಂಪೇಗೌಡ ಬಸ್‌ ನಿಲ್ದಾಣ, ನಗರ ರೈಲು ನಿಲ್ದಾಣದ ಪಕ್ಕದಲ್ಲೇ ಈ ಜಂಕ್ಷನ್‌ ಇರುವುದರಿಂದ ವಾಹನ ದಟ್ಟಣೆ ವಿಪರೀತವಾಗಿದೆ. ವರ್ಷದಿಂದ ವರ್ಷಕ್ಕೆ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಪರಿತಪಿಸುವಂತಾಗಿದೆ.

12 ವರ್ಷದ ಹಳೆಯ ಪ್ರಸ್ತಾಪ
2002ರಲ್ಲೇ ಪಾಲಿಕೆಯಿಂದ ಈ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿತ್ತು. ರಾಜ್ಯ ಸರ್ಕಾರ 2012ರ ಫೆ.2ರಂದೇ ಅಷ್ಟ ಪಥದ ಈ ಯೋಜನೆಗೆ ಒಪ್ಪಿಗೆ ನೀಡಿದ್ದರೂ ಭೂಮಿ ಹಸ್ತಾಂತರ ವಿವಾದದಿಂದಾಗಿ ಕಾಮಗಾರಿ ಆರಂಭವಾಗಿರಲಿಲ್ಲ. ಅಗತ್ಯ ಸ್ಥಳ ಬಿಟ್ಟುಕೊಡಲು ರೈಲ್ವೆ ಇಲಾಖೆ ಸಮ್ಮತಿಸಿರಲಿಲ್ಲ. 2012ರ ಡಿ.20ರಂದು ಗುದ್ದಲಿ ಪೂಜೆ ಕೂಡ ಮಾಡಲಾಗಿತ್ತು. ಜಮೀನು ಹಸ್ತಾಂತರ ವಿಳಂಬದ ಕಾರಣ ₨ 115.50 ಕೋಟಿ ವೆಚ್ಚದ ಈ ಕಾಮಗಾರಿ ಒಂದೂವರೆ ವರ್ಷದಿಂದ ನೆನಗುದಿಗೆ ಬಿದ್ದಿತ್ತು.

ಬಳಿಕ ಜಾಗ ನೀಡಲು ಒಪ್ಪಿದ ರೈಲ್ವೆ ಇಲಾಖೆ, ಬೇರೆಡೆ ಭೂಮಿ ಒದಗಿಸುವಂತೆ ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಬಿನ್ನಿ ಮಿಲ್ ಬಳಿಯ 3.16 ಎಕರೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಓಕಳಿಪುರ ಜಂಕ್ಷನ್‌ ಕಾಮಗಾರಿ ಸಲುವಾಗಿ ರೈಲ್ವೆಗೆ ಸೇರಿದ 12,818 ಚ.ಮೀ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಇದಕ್ಕೆ ಪರ್ಯಾಯವಾಗಿ ಬಿನ್ನಿಮಿಲ್‌ನ 3.16 ಎಕರೆ ಜಾಗವನ್ನು ಹಸ್ತಾಂತರ ಮಾಡಲಾಗಿದೆ. ಈ ಜಾಗಕ್ಕೆ ₨ 70.13 ಕೋಟಿ ನೀಡಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಮೊತ್ತವನ್ನು ಬಿಬಿಎಂಪಿ ನೀಡಿದೆ.

ಭೂಸ್ವಾಧೀನ ಮತ್ತಿತರ ಕಾರಣಗಳಿಂದಾಗಿ ಈ ಯೋಜನೆಯಿಂದ ಜನರಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ. ಯೋಜನೆಗೆ ಅಧಿಕ ಪ್ರಮಾಣದ ಜಾಗವನ್ನು ದಕ್ಷಿಣ ರೈಲ್ವೆಯಿಂದಲೇ ಪಡೆಯಲಾಗುತ್ತಿದೆ. ಸ್ಥಳೀಯರ 251 ಚದರ ಮೀಟರ್‌ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಯೋಜನೆಯ ಸಾರ
*ಭೂಸ್ವಾಧೀನ, ಒಳಚರಂಡಿಗಳ ಸ್ಥಳಾಂತರ ಸೇರಿದಂತೆ ಒಟ್ಟು ಯೋಜನಾ ವೆಚ್ಚ ₨115 ಕೋಟಿ
*ಟೆಂಡರ್‌ ಮೊತ್ತ ₨102.82 ಕೋಟಿ
*ರೈಲ್ವೆ ಇಲಾಖೆಯಿಂದ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಭೂಪ್ರದೇಶ 12,818 ಚದರ ಮೀಟರ್
*ಪರ್ಯಾಯವಾಗಿ ರೈಲ್ವೆಗೆ ಬಿನ್ನಿ ಮಿಲ್ ಬಳಿ 3.16 ಎಕರೆ ಹಸ್ತಾಂತರ
*ಯೋಜನಾ ಪ್ರದೇಶದ ರೈಲ್ವೆ ರನ್ನಿಂಗ್ ರೂಮ್ ಕಟ್ಟಡ ಸ್ಥಳಾಂತರಿಸಿ ಮರು ನಿರ್ಮಾಣ
*ಈಗಿರುವ ರೈಲ್ವೆ ವಸತಿಗೃಹವನ್ನು ನೆಲಸಮ ಮಾಡಿ ಹೊಸ ವಸತಿಗೃಹ ನಿರ್ಮಾಣಕ್ಕೆ ಬಿಬಿಎಂಪಿಯಿಂದ ₨4.5 ಕೋಟಿ ಆರಂಭಿಕ ಠೇವಣಿ
*ಬೆಂಗಳೂರು–ತುಮಕೂರು ಹಾಗೂ ಬೆಂಗಳೂರು–ಚೆನ್ನೈ ರೈಲು ಮಾರ್ಗದಲ್ಲಿ ಎಂಟು ಪಥದ ರೈಲ್ವೆ ಕೆಳಸೇತುವೆ (ಆರ್‌ಯುಬಿ) ನಿರ್ಮಾಣವೂ ಈ ಯೋಜನೆಯಲ್ಲಿ ಸೇರಿದೆ.

18 ತಿಂಗಳಲ್ಲಿ ಯೋಜನೆ ಪೂರ್ಣ
ಈ ಯೋಜನೆಯ ಗುತ್ತಿಗೆಯನ್ನು ಸಿಂಪ್ಲೆಂಕ್ಸ್‌ ನಿರ್ಮಾಣ ಸಂಸ್ಥೆಗೆ ನೀಡಲಾಗಿದೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದು, ನಿರ್ಮಾಣ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ನಿಗಾ ವಹಿಸಲು ಸೂಚಿಸಲಾಗಿದೆ.

ADVERTISEMENT

89 ಮರಗಳ ತೆರವು
ರಸ್ತೆ ನಿರ್ಮಾಣ ಕಾರಣದಿಂದ ರೈಲ್ವೆ ನಿಲ್ದಾಣ ಸಮೀಪದ ಹಲವು ಕಟ್ಟಡಗಳನ್ನು ನೆಲಸಮ ಮಾಡಬೇಕಾಗಿದೆ. 52 ವಸತಿ ಗೃಹಗಳು ತೆರವುಗೊಳ್ಳಲಿವೆ. ಬಿಬಿಎಂಪಿ ವ್ಯಾಪ್ತಿಯ  39 ಹಾಗೂ ರೈಲ್ವೆ ವ್ಯಾಪ್ತಿಯ 50  ಮರಗಳನ್ನು ಕಟಾವು ಮಾಡಬೇಕಿದೆ. ಆದಷ್ಟು ಬೇಗ ಈ ಕೆಲಸ ಮಾಡಲಾಗುವುದು. ಅದರ ಬಳಿಕ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.