ಬೆಂಗಳೂರು: ‘ಅಮೆರಿಕ, ಯುರೋಪ್ ಮತ್ತಿತರ ಕಡೆಗಳಲ್ಲಿ ಔಷಧ ತಜ್ಞರು ವೈದ್ಯರಿಗೆ ಸಲಹೆ ನೀಡುತ್ತಾರೆ. ಭಾರತದಲ್ಲಿ ಔಷಧ ತಜ್ಞರ ಬಗ್ಗೆ ನಿರ್ಲಕ್ಷ್ಯ ಧೋರಣೆ ಇದೆ. ಹೀಗಾಗಿ ಆರೋಗ್ಯ ಕ್ಷೇತ್ರ ದುರ್ಬಲ ಆಗಿದೆ’ ಎಂದು ಬೆಳಗಾವಿಯ ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ.ಚಂದ್ರಕಾಂತ ಕೊಕಾಟೆ ಅಭಿಪ್ರಾಯಪಟ್ಟರು.
ನಗರದ ಪಿಇಎಸ್ ಫಾರ್ಮಸಿ ಕಾಲೇಜಿನ ಆಶ್ರಯದಲ್ಲಿ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನಡೆದ ‘ಉದ್ಯಮ–ಶಿಕ್ಷಣ ಸಂಸ್ಥೆಗಳ ಸಂವಾದ’ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.
‘ಔಷಧ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಪಠ್ಯಕ್ರಮ ರೂಪಿಸಲು ಶೈಕ್ಷಣಿಕ ಸ್ವಾತಂತ್ರ್ಯ ಇದೆ. ಆದರೆ, ಪ್ರಾಧ್ಯಾಪಕರ ಜಿಗುಟುತನ, ಇಗೋ ಕಾರಣದಿಂದ ಈ ಕೆಲಸ ಆಗುತ್ತಿಲ್ಲ. ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಪ್ರಾಧ್ಯಾಪಕರು ತಮ್ಮ ಪ್ರವೃತ್ತಿಯನ್ನು ಬದಲಾಯಿಸಿ ಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್.ಶ್ರೀಪ್ರಕಾಶ್ ವಿಚಾರಸಂಕಿರಣ ಉದ್ಘಾಟಿಸಿ, ‘ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ದೊರಕುತ್ತಿಲ್ಲ. ಉದ್ಯಮಕ್ಕೆ ಬೇಕಾದ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮಗಳ ನಡುವೆ ಉತ್ತಮ ಬಾಂಧವ್ಯ ಮೂಡಬೇಕು’ ಎಂದು ಸಲಹೆ ನೀಡಿದರು.
‘ಸಂಶೋಧನಾ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ನೀಡಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಲ್ಲಿ ಉನ್ನತ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಈ ಕೇಂದ್ರ ವರ್ಷದೊಳಗೆ ಆರಂಭವಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.
ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಆರ್.ದೊರೆಸ್ವಾಮಿ ಅಧ್ಯಕ್ಷತೆ ವಹಿಸಿ, ‘ಫಾರ್ಮಸಿ ಕಾಲೇಜುಗಳು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ನ (ಎಐಸಿಟಿ) ಅಧೀನದಲ್ಲಿವೆ. ಪರಿಷತ್ ಎಂಜಿನಿಯರಿಂಗ್ ಕಾಲೇಜುಗಳಿಗೆ ಮೊದಲ ಆದ್ಯತೆ ನೀಡುತ್ತದೆ. ಬಳಿಕದ ಸ್ಥಾನ ಪಾಲಿಟೆಕ್ನಿಕ್‌ಗಳಿಗೆ. ಕೊನೆಯ ಆದ್ಯತೆ ಫಾರ್ಮಸಿ ಕಾಲೇಜುಗಳಿಗೆ. ಸಿಇಟಿಯಲ್ಲೂ ಫಾರ್ಮಸಿ ಕಾಲೇಜುಗಳಿಗೆ ಕೊನೆಯ ಆದ್ಯತೆ ನೀಡಲಾಗುತ್ತಿದೆ. ಇಂತಹ ಪ್ರವೃತ್ತಿ ಬದಲಾಗಿ ಫಾರ್ಮಸಿ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ದೊರಕಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.