ADVERTISEMENT

ಕಡಲೆಕಾಯಿ ಪರಿಷೆಯಲ್ಲಿ ಖರೀದಿ ಸಂಭ್ರಮ...

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 10:01 IST
Last Updated 11 ಡಿಸೆಂಬರ್ 2012, 10:01 IST

ಬೆಂಗಳೂರು:  ಕಣ್ಣು ಹಾಯಿಸಿದಲ್ಲೆಲ್ಲಾ ರಾಶಿ ರಾಶಿ ಕಡಲೆಕಾಯಿ. ತೃಪ್ತಿಯಾಗುವಷ್ಟು ಕಡಲೆಕಾಯಿಯನ್ನು ತಿಂದು ಸಂಭ್ರಮಿಸಿದ ಜನರು. ಕಡಲೆಕಾಯಿಯ ಈ ಸಂಭ್ರಮ ಕಂಡುಬಂದಿದ್ದು ಸೋಮವಾರ ಬಸವನಗುಡಿಯಲ್ಲಿ ನಡೆದ ಕಡಲೆಕಾಯಿ ಪರಿಷೆಯಲ್ಲಿ.

ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿ ಮಾರಾಟ ಭರ್ಜರಿಯಾಗಿ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಜನರು ಕಡಲೆಕಾಯಿಯನ್ನು ಖರೀದಿಸಿದರು. ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪರಿಷೆಯಲ್ಲಿ ಭಾಗವಹಿಸಿದ್ದರು.

ಪರಿಷೆಯ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ವ್ಯಾಪಾರಿ ಲಿಂಗರಾಜು, `ಕಳೆದ ಆರು ವರ್ಷಗಳಿಂದ ಪರಿಷೆಯಲ್ಲಿ ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದೇನೆ. ಕಳೆದ ಬಾರಿ ದಿನವೊಂದಕ್ಕೆ ಸಾವಿರ ರೂಪಾಯಿ ವ್ಯಾಪಾರ ಮಾಡಿದ್ದೆ. ಈ ಬಾರಿಯೂ ವ್ಯಾಪಾರ ತುಸು ಜೋರಾಗಿಯೇ ಇದ್ದು, ಈ ದಿನದ ಗಳಿಕೆ 1,200 ರೂಪಾಯಿ ಆಗಿದೆ' ಎಂದು ಸಂತಸ ವ್ಯಕ್ತಪಡಿಸಿದರು.

ಗ್ರಾಹಕ ಶ್ರೀನಿವಾಸ್, `ಕಳೆದ ಬಾರಿ 25 ರೂಪಾಯಿಗೆ ಒಂದು ಕೆ.ಜಿ. ಕಡಲೆ ಕಾಯಿ ದೊರೆಯುತ್ತಿತ್ತು. ಆದರೆ ಈಗ 10 ರೂಪಾಯಿ ಹೆಚ್ಚಳಗೊಂಡಿದೆ. ಆದರೆ ಪ್ರತಿ ವರ್ಷ ಪರಿಷೆಯಲ್ಲಿ ಕಡಲೆಕಾಯಿ ಕೊಂಡರೆ ಒಂದು ರೀತಿಯ ನೆಮ್ಮದಿ' ಎಂದು ಹೇಳಿದರು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೆ.ಜಿ. ಕಡಲೆ ಕಾಯಿಯ ದರದಲ್ಲಿ 5 ರಿಂದ 10 ರೂಪಾಯಿ ಏರಿಕೆ ಕಂಡಿದೆ. ಪರಿಷೆಯಲ್ಲಿ ಕೇವಲ ಕಡಲೆಕಾಯಿ ಮಾತ್ರವಲ್ಲದೇ ಬಣ್ಣದ ಗೊಂಬೆಗಳು, ಆಟದ ಸಾಮಾನುಗಳು ಚಿಣ್ಣರ ಗಮನ ಸೆಳೆದವು. ಪರಿಷೆಯು ಮಂಗಳವಾರವೂ ಮುಂದುವರೆಯಲಿದೆ.

ಪರಿಷೆಯಿಂದ ಬಸವನಗುಡಿಯ ಭಾಗದಲ್ಲಿ ತುಸು ಸಂಚಾರ ದಟ್ಟಣೆಯು ಕಂಡುಬಂತು. ತ್ಯಾಗರಾಜನಗರ ಹಾಗೂ ಬಸವನಗುಡಿ ರಸ್ತೆಯ ವಾಹನಗಳ ಮಾರ್ಗವನ್ನು ಹನುಮಂತನಗರ ರಸ್ತೆಗೆ ಮಾರ್ಗ ಬದಲಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.