ಬೆಂಗಳೂರು: `ಕನ್ನಡದ ಪ್ರಶ್ನೆ ಬಂದಾಗ ಎಲ್ಲಾ ಕನ್ನಡಪರ ಸಂಘಟನೆಗಳು ತಮ್ಮ ಮಿತಿಗಳನ್ನು ಮೀರಿ ಒಂದಾಗಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು~ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಕರೆ ನೀಡಿದರು.
ತಮಗೆ ಪಂಪ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
`ಕನ್ನಡದ ವಿಚಾರವಾಗಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಾಹಿತ್ಯ ಪರಿಷತ್ತು ಸರಿಯಾದ ನಿಲುವು ತಾಳುತ್ತಿಲ್ಲ. ಎರಡೂ ಸಂಸ್ಥೆಗಳ ಅಧ್ಯಕ್ಷರು ಕನ್ನಡಕ್ಕಾಗಿ ದುಡಿದವರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕನ್ನಡದ ಅಳಿವು ಉಳಿವಿನ ಸಂದರ್ಭದಲ್ಲಿ ಈ ಸಂಸ್ಥೆಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರಿತು ವರ್ತಿಸಬೇಕು. ಹಾಗೆ ನಡೆದುಕೊಳ್ಳದಿದ್ದರೂ ಕನ್ನಡದ ಚಳವಳಿ ನಿಲ್ಲುವುದಿಲ್ಲ. ಚಳವಳಿಗೆ ಯಾರೂ ಅನಿವಾರ್ಯವಲ್ಲ~ ಎಂದು ಎಚ್ಚರಿಕೆ ನೀಡಿದರು.
`ರಾಜ್ಯದಲ್ಲಿರುವಷ್ಟು ಭಾಷಾ ಪರ ಸಂಘಟನೆಗಳನ್ನು ಬೇರೆಲ್ಲೂ ಕಾಣಲಾಗದು. ಎಲ್ಲಿ ರೋಗಿ ಗಳಿರುತ್ತಾರೋ ಅಲ್ಲಿ ಔಷಧಾಲಯ ಇರುತ್ತದೆ. ಕನ್ನಡಪರ ಸಂಘಟನೆಗಳು ಔಷಧಾಲಯವಿದ್ದಂತೆ. ಆದರೆ ಕೆಲವರು ರೋಗ ಹಾಗೇ ಇರಲೆಂದು ಬಯಸುವುದು ದುರದೃಷ್ಟದ ಸಂಗತಿ~ ಎಂದು ಹೇಳಿದರು.
`ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತದ್ದನ್ನು ಪಾಟೀಲ ಪುಟ್ಟಪ್ಪನವರು ಟೀಕಿಸಿದರು. ಇದು ಅವರ ವ್ಯಕ್ತಿತ್ವಕ್ಕೆ ಉಚಿತವಾದ ಮಾತಲ್ಲ. ಟೀಕಿಸುವ ಸಂದರ್ಭ ಇದಲ್ಲ. ಜಗಳ ಬೇರೆ, ವಿಚಾರ ಬೇರೆ. ಕನ್ನಡಕ್ಕೆ ದೊಡ್ಡ ಪ್ರಶಸ್ತಿ ಬಂದಾಗ ಅದನ್ನು ಒಪ್ಪುವ ಸಹೃದಯತೆ ಇರಬೇಕು~ ಎಂದರು.
ಸಂಶೋಧಕ ಡಾ. ಹಂಪ ನಾಗರಾಜಯ್ಯ, `ಪಂಪ ತನಗೆ ಆಶ್ರಯ ನೀಡಿದ ಅರಿಕೇಸರಿಯನ್ನು ಕಾವ್ಯದಲ್ಲಿ ಟೀಕಿಸಿದ. ಚಂಪಾ ಕೂಡ ಸರ್ಕಾರವನ್ನು ಮುಖ್ಯಮಂತ್ರಿಗಳನ್ನು ಟೀಕಿಸಿದವರು. ಕನ್ನಡದ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ನಿರ್ಭಿಡೆಯಿಂದ ದನಿ ಎತ್ತಿದವರು. ಅವರು ಕನ್ನಡದ ದೊಡ್ಡ ಸಾಕ್ಷಿ ಪ್ರಜ್ಞೆ~ ಎಂದು ಮೆಚ್ಚುಗೆ ಸೂಚಿಸಿದರು.
`ಚಂಪ ಜಗಳಗಂಟಿ ಎನ್ನುತ್ತಾರೆ. ಆದರೆ ಪ್ರತಿ ಊರಿನಲ್ಲೂ ನೀರನ್ನು ಸಮನಾಗಿ ಹಂಚುವ ನೀರುಗಂಟಿ ಇರುತ್ತಾರೆ. ಜಗಳಗಂಟಿಯೂ ಸಹ ನೀರುಗಂಟಿಯಂತೆ ಸಮಾನತೆಗಾಗಿ ಹೋರಾಡುವವರು. ಅವರು ಎಂದೂ ಹೃದಯವನ್ನು ಅಶುಚಿಗೊಳಿಸಿಕೊಂಡವರಲ್ಲ~ ಎಂದರು.
ಕವಿ ಜರಗನಹಳ್ಳಿ ಶಿವಶಂಕರ್, ಲೇಖಕಿ ಪ್ರೊ.ಬಿ.ನಾರಾಯಣಮ್ಮ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ, ವೇದಿಕೆಯ ಕಾರ್ಯಾಧ್ಯಕ್ಷ ದ್ವಾರನಕುಂಟೆ ಪಾತಣ್ಣ, ಉಪಾಧ್ಯಕ್ಷ ರು.ಬಸಪ್ಪ, ಖಜಾಂಚಿ ನಾ.ಮಲ್ಲಿಕಾರ್ಜುನ, ಲೇಖಕಿ ಎಂ.ಎಸ್.ಶಶಿಕಲಾಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.