ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳನ್ನು ಪೂರ್ಣವಾಗಿ ಕನ್ನಡಿಗರಿಗೇ ಮೀಸಲಿಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಒತ್ತಾಯಿಸಿದ್ದಾರೆ.
ನಿಗಮದಲ್ಲಿ ಖಾಲಿ ಇರುವ ಕಾವಲುಗಾರ ಸೇರಿದಂತೆ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರ ಮೇಲೆ ಉತ್ತರ ಭಾರತೀಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ನಿಗಮವು ಸಾರ್ವಜನಿಕರೊಂದಿಗೆ ಇಂಗ್ಲಿಷ್ ಭಾಷೆಯಲ್ಲಿ ಪತ್ರ ವ್ಯವಹಾರ ನಡೆಸುವ ಮೂಲಕ ಕನ್ನಡವನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದ್ದಾರೆ.
ನಿಗಮದ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಆಡಳಿತ ಹಾಗೂ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನೇ ಬಳಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.
‘ಮಾತೃ ಭಾಷಾ ವಿವಾದ ಕುರಿತು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ವಿಚಾರಣೆಯನ್ನು ಕಾಯ್ದಿರಿಸಿದೆ. ವಿಚಾರಣೆ ಸಂದರ್ಭದಲ್ಲಿನ ಬೆಳವಣಿಗೆಗಳನ್ನು ನೋಡಿದರೆ ತೀರ್ಪು ನಮ್ಮ ವಿರುದ್ಧ ಬರುವ ಸಾಧ್ಯತೆ ಇದೆ. ಈ ಕಾರಣದಿಂದ ಮಾತೃಭಾಷಾ ಶಿಕ್ಷಣದ ಬಗ್ಗೆ ಒಲವು ಇರುವ ರಾಜ್ಯಗಳು ಒಂದಾಗಿ ಸಮಗ್ರ ಭಾಷಾ ಮಾಧ್ಯಮ ನೀತಿ ರೂಪಿಸಲು ಮುಂದಾಗಬೇಕು. 10ನೇ
ತರಗತಿವರೆಗೆ ಭಾಷಾ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು’ ಎಂದು ಚಂದ್ರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.