ADVERTISEMENT

ಕನ್ನಡ ರಾರಾಜಿಸುವವರೆಗೂ ಹಿಂದಿ ತಡೆಯಬೇಕು

ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಂ.ಎ.ಜಯಚಂದ್ರ ಅಭಿಮತ * ಕನ್ನಡ ಮಾಧ್ಯಮದಲ್ಲಿ ಕಲಿಯಲು ಕರೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 20:24 IST
Last Updated 15 ಜುಲೈ 2017, 20:24 IST
ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು.  - ಪ್ರಜಾವಾಣಿ ಚಿತ್ರಗಳು
ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. - ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ‘ರಾಜ್ಯದಲ್ಲಿ ಎಲ್ಲ ರಂಗಗಳಲ್ಲಿ ಕನ್ನಡ ಭಾಷೆ ರಾರಾಜಿಸುವವರೆಗೂ ಹಿಂದಿ ಬಳಕೆಯನ್ನು ತಡೆಯಬೇಕು’ ಎಂದು ಸಮ್ಮೇಳನಾಧ್ಯಕ್ಷ ಸಾಹಿತಿ ಎಂ.ಎ.ಜಯಚಂದ್ರ ಹೇಳಿದರು.

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶವನ್ನು ಕಾಯುವ ದಂಡಿನಲ್ಲಿ ಬೇರೆ ಬೇರೆ ಭಾಷೆಯನ್ನಾಡುವ ಯೋಧರು ಇರುವಂತೆ, ಈ ದಂಡು ಪ್ರದೇಶದಲ್ಲಿ (ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ) ಬೇರೆ ಬೇರೆ ಭಾಷೆಯ ಜನರು ಇದ್ದಾರೆ. ಅವರೆಲ್ಲರೂ ಇಂದು ಕನ್ನಡ ಸರಸ್ವತಿಯನ್ನು ಪೂಜಿಸುತ್ತಿದ್ದಾರೆ. ಆದ್ದರಿಂದಲೇ ಸರಸ್ವತಿಯನ್ನು ಸರ್ವ ಭಾಷಾಮಹಿ ಎನ್ನಲಾಗುತ್ತದೆ.’

ADVERTISEMENT

‘ಕನ್ನಡ ಎಂದರೆ ಕೇವಲ ಕಥೆ, ಕವನ ಹಾಗೂ ನುಡಿಯಲ್ಲ. ಅದು ಸಮಸ್ತ ಕನ್ನಡಿಗರ ಸಮಗ್ರ ಅಭಿವೃದ್ಧಿ, ಸಂವೇದನಾಶೀಲತೆ, ಸಂಸ್ಕೃತಿ ಹಾಗೂ ಶತಶತಮಾನದ ಅನುಭವದ ಸಂಕೇತ. ಇವೆಲ್ಲದರ ಮುಖವಾಣಿಯಾಗಿ ಭಾಷೆ ಕಾಣಿಸಿಕೊಳ್ಳುತ್ತದೆ ಅಷ್ಟೇ. ಆದ್ದರಿಂದ ಕನ್ನಡ ಭಾಷೆಯ ಬಳಕೆ ನಿಂತರೆ, ಅದರ ಹಿಂದಿರುವ ಸಂಸ್ಕೃತಿ ಸೊರಗಿ ಹೋಗುತ್ತದೆ. ಅದು ಭಾರತಾಂಬೆಯ ಒಂದು ಅಂಗಕ್ಕೆ ಲಕ್ವ ಹೊಡೆದಂತಾಗುತ್ತದೆ. ಅಂಥ ವಿಕಲಾಂಗ ಭಾರತಮಾತೆಗೆ ನಾವು ನೀವೆಲ್ಲ ಜೈ ಎನ್ನಬೇಕೆ’ ಎಂದು ಅವರು ಪ್ರಶ್ನಿಸಿದರು.

ಕನ್ನಡ ಕಲಿಕೆಗೆ ಕಾನೂನು ಅಗತ್ಯ: ‘ಕನ್ನಡ ಭಾಷೆಯ ಬಳಕೆ ಸೊರಗಬಾರದು, ಸಾಯಬಾರದು ಎನ್ನುವುದಾದರೆ, ನಮ್ಮ ಮಕ್ಕಳು, ಮೊಮ್ಮಕ್ಕಳು ಕನ್ನಡದಲ್ಲೇ ಮಾತನಾಡಬೇಕು. ಹಾಗೇ ಆಗಲು 1ರಿಂದ 7ನೇ ತರಗತಿ ವರೆಗಾದರೂ ಮಕ್ಕಳು  ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು’ ಎಂದು ಅವರು ತಿಳಿಸಿದರು.

‘ಈ ಸಂಬಂಧ ಆದೇಶ ಹೊರಡಿಸಲು ಕಾನೂನಿನ ತೊಡಕಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರದ ಕಡೆಯಿಂದಲೇ ಅಗತ್ಯ ಕಾನೂನು ರೂಪಿಸಲು ರಾಜ್ಯದ ಎಲ್ಲ ಸಂಸದರು ತುರ್ತಾಗಿ ಒತ್ತಾಯ ಹೇರಬೇಕಿದೆ’ ಎಂದು ಸಲಹೆ ನೀಡಿದರು.

‘ರಾಜ್ಯದ ಆಡಳಿತ ಭಾಷೆ ಕನ್ನಡ ಆಗಿದ್ದರೂ ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಅದಕ್ಕೆ ಕಾರಣ ಕನ್ನಡ ಬಾರದ ಅಧಿಕಾರಿಗಳು ಎಂದು ಭಾವಿಸಲಾಗಿದೆ. ಹಾಗಾಗಿ, ಕನ್ನಡ ಬಲ್ಲ ಅಧಿಕಾರಿಗಳನ್ನೇ ನೇಮಿಸಲು ಆದ್ಯತೆ ಕೊಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಿಗರಲ್ಲಿದೆ ಕೀಳರಿಮೆ: ‘ಇಂಗ್ಲಿಷ್ ಹಾಗೂ ಹಿಂದಿಯ ಆಡಂಬರದ ನಡುವೆ  ಕನ್ನಡಿಗರು ಸ್ವಲ್ಪಮಟ್ಟಿಗೆ ಕೀಳರಿಮೆಯಲ್ಲಿದ್ದಾರೆ. ಕನ್ನಡಿಗರೇ ಕನ್ನಡಿಗರನ್ನು, ಅವರ ಶಕ್ತಿ ಹಾಗೂ ಭಾಷೆಯನ್ನು ಕೀಳಾಗಿ ಕಾಣುತ್ತಿದ್ದಾರೆ. ಎಲ್ಲ ಕಡೆ ಕನ್ನಡ ಬಳಸಲು ಹಿಂಜರಿಯುತ್ತಿದ್ದಾರೆ. ಈ ಪ್ರವೃತ್ತಿ ಮೊದಲು ತೊಲಗಬೇಕು. ಸರ್ವತ್ರ ಕನ್ನಡ ಬಳಸುವ ಸಂಕಲ್ಪ ಮಾಡಬೇಕು’ ಎಂದರು.

**

ಸಾರೋಟದಲ್ಲಿ ಸಾಗಿ ಬಂದ ಸಮ್ಮೇಳನಾಧ್ಯಕ್ಷರು

ಕನ್ನಡದ ಬಾವುಟಗಳಿಂದ ಸಿಂಗರಿಸಿದ್ದ ಸಾರೋಟದಲ್ಲಿ ಎಂ.ಎ.ಜಯಚಂದ್ರ ಹಾಗೂ ವಸಂತ ಮಾಲ ದಂಪತಿಯನ್ನು ಕೂರಿಸಿ ಮೆರವಣಿಗೆಯ ಮೂಲಕ ಪ್ರದಾನ ವೇದಿಕೆ ಬಳಿಗೆ ಕರೆತರಲಾಯಿತು.

ಇದಕ್ಕೂ ಮೊದಲು, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ನಾಗವಾರ ವೃತ್ತದ ಮುಖ್ಯ ರಸ್ತೆಯಿಂದ  ಹೊರಟ ಮೆರವಣಿಗೆ ನರೇಂದ್ರ ಟಾಕೀಸ್ 80 ಅಡಿ ರಸ್ತೆ, ಬಿ.ಡಿ.ಎ. ಸಂಕೀರ್ಣ, ಎಚ್.ಬಿ.ಆರ್. ಬಡಾವಣೆಯ ಮೂಲಕ ಸಭಾಂಗಣ ತಲುಪಿತು.

ದಾರಿಯುದ್ದಕ್ಕೂ ಸ್ಥಳೀಯ ಶಾಲೆಗಳ ಕನ್ನಡದ  ವಿದ್ಯಾರ್ಥಿಗಳು ಹಾಗೂ  ಸಾರ್ವಜನಿಕರು ಕನ್ನಡಾಂಬೆಯ ಜಯಘೋಷಗಳನ್ನು ಮೊಳಗಿಸುತ್ತಾ ಅಭಿಮಾನ ಮೆರೆದರು.

ಡೊಳ್ಳು ಕುಣಿತ, ಪಟದ ಕುಣಿತ, ವೀರಗಾಸೆ, ಕಂಸಾಳೆ, ನಂದಿಧ್ವಜ, ಪೂಜಾ ಕುಣಿತ, ಜಗ್ಗಲ್ಲಿಗೆ ಮೇಳ, ಗಾರುಡಿ ಗೊಂಬೆ, ಕರಡಿ ಮಜಲು, ನಾದಸ್ವರ, ತಮಟೆವಾದನ ಮೆರವಣಿಗೆಗೆ ರಂಗು ತುಂಬಿದವು.

ಶಾಸ್ತ್ರೀಯ ಸ್ಥಾನಮಾನದ ಸವಲತ್ತಿಗೆ ಒತ್ತಾಯ: ‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿ ವರ್ಷಗಳೇ ಉರುಳಿವೆ. ಆದರೆ, ಅದಕ್ಕೆ ತಕ್ಕಂತೆ ಸಿಗಬೇಕಾದ ಸವಲತ್ತುಗಳು ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಬೇಕು’ ಎಂದು ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅವರಿಗೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಮಮೂರ್ತಿ ಅವರು ‘ಕಳೆದ ಅಧಿವೇಶನದಲ್ಲೇ ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಮತ್ತೊಮ್ಮೆ ಒತ್ತಾಯ ಮಾಡುವೆ’ ಎಂದರು.

‘ಸರ್ವಜ್ಞನಗರ ಎಂಬ ಹೆಸರಿನ ಈ ಭಾಗದಲ್ಲಿ ಸರ್ವಜ್ಞ ಅವರ ಪ್ರತಿಮೆ ಇಲ್ಲದಿರುವುದು ಶೋಭೆ ತರುವ ವಿಚಾರವಲ್ಲ’ ಎಂದ ರೆಡ್ಡಿ ಅವರು ಪ್ರತಿಮೆ ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸಭೆಯಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.

‘ನಗರದ 198 ವಾರ್ಡ್‌ಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿ, ಹೊರ ರಾಜ್ಯದವರು ಹಾಗೂ ವಿದೇಶಿಗರಿಗೆ ಕನ್ನಡ ಕಲಿಸುವ ಕಾರ್ಯ ಆಗಬೇಕಿದೆ’ ಎಂದರು. ಕನ್ನಡದ ಹೊಸ ಪದಗಳಿಗೆ ಸ್ಷಷ್ಟ ಅರ್ಥ ಒದಗಿಸುವ ಆಧುನಿಕ ಕನ್ನಡ ನಿಘಂಟು ರಚಿಸಬೇಕು.

**

ಸಮ್ಮೇಳನಾಧ್ಯಕ್ಷರ ಒತ್ತಾಯಗಳು
* ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಬೇಕು.
* ಎಲ್ಲರೂ ಕನ್ನಡದಲ್ಲೇ ರುಜು ಮಾಡಬೇಕು.
* ಅಂಚೆ ಲಕೋಟೆ ಮೇಲೆ ಕನ್ನಡದಲ್ಲಿ ವಿಳಾಸ ಬರೆಯಬೇಕು.
* ಬ್ಯಾಂಕ್‌ ಚಲನ್ ಹಾಗೂ ಚೆಕ್‌ಗಳನ್ನು ಕನ್ನಡದಲ್ಲೇ ಬರೆದರೆ ಬಾಧಕವಿಲ್ಲ ಎಂಬ ಬಗ್ಗೆ ಜನರಿಗೆ ತಿಳಿಸಬೇಕು.
* ಪ್ರಕಟಗೊಂಡ ಪುಸ್ತಕಗಳನ್ನು ತಿಂಗಳ ಒಳಗೆ ಎಲ್ಲ ಗ್ರಂಥಾಲಯಗಳಿಗೂ ತಲುಪಿಸಬೇಕು.
* ಪ್ರತಿ ವಾರ್ಡ್‌ನಲ್ಲಿ ಸಾಂಸ್ಕೃತಿಕ ಸಭಾಭವನ ನಿರ್ಮಿಸಬೇಕು.

**

ಬೇರೆ ಪ್ರದೇಶಕ್ಕಿಂತ ದಂಡು ಪ್ರದೇಶ ಬಹಳ ಭಿನ್ನವಾಗಿದೆ. ಕನ್ನಡಪರ ಹೋರಾಟದ ಯುವ ಪಡೆಯೇ ಇಲ್ಲಿದೆ. ಹೊರ ರಾಜ್ಯದವರಿಗೆ ಕನ್ನಡ ಕಲಿಸಿ, ಅವರನ್ನು ನಮ್ಮೊಂದಿಗೆ ಸೇರಿಸಿಕೊಳ್ಳಬೇಕು.
-ಕೆ.ಸಿ.ರಾಮಮೂರ್ತಿ, ರಾಜ್ಯಸಭಾ ಸದಸ್ಯ

**

ಕಿವಿಗೆ ಬೀಳುತ್ತಿದ್ದಂತೆಯೇ ಅರ್ಥವಾಗುವ ಭಾಷೆ ಕನ್ನಡ. ನಮ್ಮ ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕಿದೆ
-ಎಚ್.ಎಂ.ರಮೇಶ್,
ಸರ್ಜಜ್ಞ ನಗರ ಕ್ಷೇತ್ರದ ಕ.ಸಾ.ಪ. ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.