ADVERTISEMENT

ಕರಗದ ಕಸ; ಮುಂದುವರಿದ ಗೋಳು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST
ಕರಗದ ಕಸ; ಮುಂದುವರಿದ ಗೋಳು
ಕರಗದ ಕಸ; ಮುಂದುವರಿದ ಗೋಳು   

ಬೆಂಗಳೂರು:   ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ಪರಿಪೂರ್ಣವಾದ ಪರಿಹಾರ ಸಿಗದ ಕಾರಣ ಶನಿವಾರವೂ ನಗರದಲ್ಲಿ ಕಸದ ರಾಶಿಗಳು ಕರಗದೆ ಹೋದವು.

ಬೃಹತ್ ಪ್ರಮಾಣದ ಕಸ ಉತ್ಪಾದನೆ ಮಾಡುವ ಹೋಟೆಲ್ ಮಾಲೀಕರೂ ಸೇರಿದಂತೆ ನಾಗರಿಕರು ಕಸವನ್ನು ಬೇಕಾಬಿಟ್ಟಿಯಾಗಿ ತಂದು ಸುರಿಯುವುದರಿಂದ ತ್ಯಾಜ್ಯವನ್ನು ಬೇರ್ಪಡಿಸಬೇಕೆಂಬ ಬಿಬಿಎಂಪಿ ಆಶಯ ಈಡೇರಲಿಲ್ಲ. ಬೇರ್ಪಡಿಸಿದ ಕಸವನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆಯಾಗದ ಕಾರಣ ಸಮಸ್ಯೆ ಮತ್ತಷ್ಟು ಬಿಗಿಡಾಯಿಸಿತು.

`ನಾವು ಕಸವನ್ನು ಬೇರ್ಪಡಿಸಿ ಏನು ಪ್ರಯೋಜನ? ಕಸ ಸಂಗ್ರಹಕ್ಕೆ ಬರುವವರಲ್ಲಿ ಒಣ ಕಸ, ಹಸಿ ಕಸ, ಪುನರ್‌ಬಳಕೆ ಕಸ ಮತ್ತು ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಯಾವುದೇ ವ್ಯವಸ್ಥೆ ಇಲ್ಲ~ ಎಂದು ಉತ್ತರಹಳ್ಳಿ ನಿವಾಸಿಯಾದ ಸಾವಿತ್ರಿ ಪ್ರಶ್ನಿಸಿದರು.

`ನಮ್ಮ ಗುತ್ತಿಗೆದಾರರು ಪ್ರತ್ಯೇಕ ಕಸ ಸಂಗ್ರಹಿಸುವಂತೆ ಯಾವುದೇ ನಿರ್ದೇಶನ ನೀಡಿಲ್ಲ. ಅದಕ್ಕೆ ಬೇಕಾದ ಬಕೀಟುಗಳನ್ನೂ ಪೂರೈಸಿಲ್ಲ. ನಾವೇನು ಮಾಡಬೇಕು~ ಎಂದು ಈ ಭಾಗದಲ್ಲಿ ಕಸ ಸಂಗ್ರಹಕ್ಕೆ ಬಂದಿದ್ದ ಕಾರ್ಮಿಕರು ಪ್ರತಿಕ್ರಿಯಿಸಿದರು.

ಕೇಂದ್ರ ವಾಣಿಜ್ಯ ಪ್ರದೇಶಗಳಾದ ಸೇಂಟ್ ಮಾರ್ಕ್ಸ್ ರಸ್ತೆ, ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಶಾಂತಿನಗರ, ಸಂಪಂಗಿರಾಮನಗರ, ಕೆ.ಜಿ. ರಸ್ತೆ, ಕೆ.ಆರ್. ಮಾರುಕಟ್ಟೆ, ಅವೆನ್ಯೂ ರಸ್ತೆ, ಚಿಕ್ಕಪೇಟೆ, ಬಳೇಪೇಟೆ, ಕಾಟನ್‌ಪೇಟೆ ಮತ್ತು ಮೆಜಿಸ್ಟಿಕ್‌ನಲ್ಲಿ ಕಸ ವಿಲೇವಾರಿ ಸಮಸ್ಯೆ ಹಾಗೇ ಮುಂದುವರಿಯಿತು.

ನಗರವನ್ನು ದೈತ್ಯವಾಗಿ ಕಾಡುತ್ತಿರುವ ಕಸದ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಸಾಧ್ಯವಿರುವ ಮಾರ್ಗಗಳ ತಡಕಾಟದಲ್ಲಿದೆ. ತಕ್ಷಣದ ಹೆಜ್ಜೆಯಾಗಿ ಯಲಗುಪ್ಪ (10 ಎಕರೆ), ಕಲ್ಲಬಾಳು (63 ಎಕರೆ), ಬಾಗಲೂರ (13 ಎಕರೆ), ಸುಂಕದಕಟ್ಟೆ (15 ಎಕರೆ), ಚಲ್ಲಘಟ್ಟ (10 ಎಕರೆ), ಹಿಂದವಾಡಿ (11 ಎಕರೆ)ಗಳಲ್ಲಿ ನೆಲಮಟ್ಟದವರೆಗೆ ಕಸ ಸಂಗ್ರಹಿಸುವ ವ್ಯವಸ್ಥೆಗೆ ಮುಂದಾಗಿದೆ.

ಮಂಡೂರಿನ ಕಸದ ರಾಶಿಯನ್ನೂ ಕರಗಿಸಲು ಬಿಬಿಎಂಪಿ ಯತ್ನಿಸುತ್ತಿದೆ. ಈ ಮಧ್ಯೆ ಉಪ ಮುಖ್ಯಮಂತ್ರಿ ಆರ್. ಅಶೋಕ ಮತ್ತು ಸಚಿವ ಅರವಿಂದ ಲಿಂಬಾವಳಿ ಮಂಡೂರು ಗ್ರಾಮದ ಮುಖಂಡರೊಂದಿಗೆ ಶನಿವಾರ ಸಂಜೆ ಮಾತುಕತೆ ನಡೆಸಿದ್ದು, ಭಾನುವಾರದಿಂದ ಕಸ ವಿಲೇವಾರಿ ಯಥಾ ಪ್ರಕಾರ ನಡೆಯಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಈ ಮಧ್ಯೆ ಆಯುಧ ಪೂಜೆ ಮತ್ತು ಬಕ್ರೀದ್ ಹಬ್ಬದ ದಿನ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಸಂಬಂಧ ಪ್ರಚಾರ ಕಾರ್ಯ ಕೈಗೊಳ್ಳಲಾಗುವುದಲ್ಲದೆ ಹೆಚ್ಚುವರಿ ವಾಹನ ಮತ್ತು ಡ್ರಮ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಆಯುಕ್ತರು ಹೇಳಿದರು.

ಜೈವಿಕ ತ್ಯಾಜ್ಯ ವಿಲೇವಾರಿ ಆಗದಿದ್ದರೆ ಸಮಸ್ಯೆ ಭೀಕರ ಸ್ವರೂಪ ಪಡೆಯುವುದು. ಆದ್ದರಿಂದ ಉತ್ಪತ್ತಿಯಾದ ದಿನವೇ ಅದನ್ನು ಸಾಗಿಸಬೇಕು ಎಂಬ ಸೂಚನೆಯನ್ನು ಎಲ್ಲ ವಲಯಗಳ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.