ADVERTISEMENT

ಕಲಾಸಿಪಾಳ್ಯ ಮಾರುಕಟ್ಟೆಯ 8 ಅಂಗಡಿ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 20:06 IST
Last Updated 16 ಅಕ್ಟೋಬರ್ 2017, 20:06 IST

ಬೆಂಗಳೂರು: ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯ ಖಾಲಿ ಜಾಗದಲ್ಲಿ ನಿರ್ಮಿಸಿರುವ 8 ಅಂಗಡಿಗಳನ್ನು ತೆರವು ಮಾಡುವಂತೆ ಒತ್ತಾಯಿಸಿ ರೈತರು ಹಾಗೂ ವ್ಯಾಪಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

'ಈ ಅಂಗಡಿಗಳನ್ನು ಶಾಸಕ ಆರ್‌.ವಿ.ದೇವರಾಜು ಭಾನುವಾರ ಉದ್ಘಾಟಿಸಿದ್ದಾರೆ. ಸಾರ್ವಜನಿಕರ ಬಳಕೆಗೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಇದನ್ನು ಬಳಸಬಾರದು ಎಂದು ಹೈಕೋರ್ಟ್ ಆದೇಶವಿದ್ದರೂ ಶಾಸಕರ ಪ್ರಭಾವದಿಂದ ಅಂಗಡಿಗಳನ್ನು ನಿರ್ಮಿಸಲಾಗಿದೆ’ ಎಂದು ವ್ಯಾಪಾರಿಯೊಬ್ಬರು ಆರೋಪಿಸಿದರು.

‘ಇನ್ನೂ 70 ಅಂಗಡಿಗಳನ್ನು ನಿರ್ಮಿಸಲು ಎಲ್ಲ ಸಿದ್ಧತೆ ನಡೆದಿದೆ. ಪ್ರತಿ ಅಂಗಡಿ ವಿತರಣೆಗೆ ₹ 30 ಲಕ್ಷದಿಂದ ₹40ಲಕ್ಷ ವಸೂಲಿ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಹೆಚ್ಚುವರಿ ಅಂಗಡಿಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು’ ಎಂದು ವ್ಯಾಪಾರಿಯೊಬ್ಬರು ಆಗ್ರಹಿಸಿದರು.

ADVERTISEMENT

ಪಾಲಿಕೆ ಸದಸ್ಯೆ ಪ್ರತಿಭಾ ಧನರಾಜ್, ‘ಮಾರುಕಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಅಂಗಡಿಗಳು ಹಾಗೂ ತರಕಾರಿ ಮಳಿಗೆಗಳಿವೆ. ಗಾಳಿ, ಬೆಳಕು ಹಾಗೂ ಸಾರ್ವಜನಿಕರ ಸಂಚಾರಕ್ಕೆ‌ ಈಗಾಗಲೇ ತೊಂದರೆಯಿದ್ದು, ಹೆಚ್ಚಿನ ಅಂಗಡಿಗಳನ್ನು ನಿರ್ಮಿಸಿದ್ದೇ ಆದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ’ ಎಂದರು.

‘ಪಾದಚಾರಿ ಮಾರ್ಗ, ಶೌಚಾಲಯ, ಕಸ ಹಾಕುವ ಜಾಗದಲ್ಲೇ ಅಂಗಡಿಗಳನ್ನು ನಿರ್ಮಿಸಲಾಗಿದೆ. ಆ ಅಂಗಡಿಗಳ ವ್ಯಾಪಾರಿಗಳನ್ನು ಕೇಳಿದರೆ, ಬಿಬಿಎಂಪಿಯೇ ಅನುಮತಿ ನೀಡಿದೆ ಎನ್ನುತ್ತಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳ ಪ್ರಭಾವಕ್ಕೊಳಗಾಗಿ ಈ ರೀತಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.