ಬೆಂಗಳೂರು: `ಇಷ್ಟು ದಿನ ನೀರು ಬಂದ್ರೆ ಸಾಕು ಅಂತಿದ್ದೋ, ಈಗ ಬರೋ ನೀರು ಕುಡಿದ್ರೆ ಬದುಕ್ತೀವಿ ಅನ್ನೋ ನಂಬಿಕೆನೇ ಇಲ್ಲ~
ನಲ್ಲಿಯ ಮುಂದೆ ನೀರಿಗಾಗಿ ಕಾಯುತ್ತಾ ಕುಳಿತಿದ್ದ ನಗರದ ಕೆ.ಆರ್.ಮಾರುಕಟ್ಟೆ 139 ನೇ ವಾರ್ಡ್‌ನ ವೇಲು ಮರುಗಪುರದ ನಿವಾಸಿ ಉಷಾ ಬಡಾವಣೆಯಲ್ಲಿ ಪೂರೈಕೆಯಾಗುತ್ತಿರುವ ನೀರಿನ ಬಗ್ಗೆ ತಮ್ಮ ಆತಂಕ ವ್ಯಕ್ತ ಪಡಿಸಿದ್ದು ಹೀಗೆ.
ನಗರದ ಕೆ.ಆರ್.ಮಾರುಕಟ್ಟೆ 139 ನೇ ವಾರ್ಡ್‌ನ ವೇಲು ಮುರುಗಪುರ, ಆನಂದಪುರ, ಜಾಲಿ ಮೊಹಲ್ಲಾ ಹಾಗೂ ಕಡ್ಲೆ ಬಟ್ಟಿ ರಸ್ತೆಯ ಭಾಗಗಳಲ್ಲಿ ಕಳೆದ ಮೂರ‌್ನಾಲ್ಕು ತಿಂಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಇದು ಸ್ಥಳೀಯರ ಆರೋಗ್ಯ ಕೆಡಲು ಕಾರಣವಾಗಿದೆ ಎಂಬುದು ಸ್ಥಳೀಯರ ದೂರು.
`ಸುಮಾರು ದಿನಗಳಿಂದಲೂ ನಲ್ಲಿಗಳಲ್ಲಿ ಗಬ್ಬು ನೀರು ಬರ್ತಿದೆ. ನಗರದಲ್ಲಿ ನೀರು ಕುಡಿದು ಈಗಾಗಲೇ ಒಂದು ಮಗು ಸತ್ತು ಹೋಗಿದ್ರೂ ಜಲಮಂಡಲಿ ಅಧಿಕಾರಿಗಳು ಪೈಪ್ ಲೈನ್ ಸರಿಮಾಡಿಸಿಲ್ಲ. ಕಲುಷಿತ ನೀರು ಕುಡಿದು ನಮ್ಮ ಮಕ್ಕಳ ಆರೋಗ್ಯವೂ ಕೆಡ್ತಿದೆ. ನೀರು ಬರೋದೆ ಕಷ್ಟ ಅನ್ನೋ ಪರಿಸ್ಥಿತಿಯಲ್ಲಿ ಇಂಥಾ ಕೆಟ್ಟ ನೀರು ಬಂದರೆ ಕುಡಿಯೋದು ಹೇಗೆ~ ಎಂಬುದು ವೇಲು ಮುರುಗ ಪುರದ ನಿವಾಸಿ ಮುರುಗನ್ ಅವರ ಪ್ರಶ್ನೆ.
`ರಾತ್ರಿ ಹನ್ನೆರಡು, ಒಂದು ಗಂಟೆಯ ಹೊತ್ತಿಗೆ ನೀರು ಬಿಟ್ಟು ಬೆಳಗ್ಗೆ ಮೂರು ನಾಲ್ಕು ಗಂಟೇಗೆಲ್ಲಾ ನಿಲ್ಲಿಸ್ತಾರೆ. ಕೆಲವೊಮ್ಮೆ ಹದಿನೈದು ಇಪ್ಪತ್ತು ದಿನವಾದರೂ ಸರಿಯಾಗಿ ನೀರು ಬರೋಲ್ಲ. ಬಂದರೂ ಗಬ್ಬು ನೀರು ಬರುತ್ತೆ.
ಜಲಮಂಡಲಿ ಅಧಿಕಾರಿಗಳಿಗೆ ದೂರು ನೀಡಿ ಸಾಕಾಗಿದೆ. ಕಲುಷಿತ ನೀರು ಕುಡಿದು ಇನ್ನಷ್ಟು ಜನರು ಸಾಯಲಿ ಎಂದು ಜಲಮಂಡಲಿ ಅಧಿಕಾರಿಗಳು ಸುಮ್ಮನಾಗಿರಬಹುದು. ಅಧಿಕಾರಿಗಳ ಮನೆಗಳಲ್ಲಿ ಇದೇ ನೀರು ಬಂದಿದ್ದರೆ ಬಹುಶಃ ಅವರಿಗೆ ಸಮಸ್ಯೆಯ ಅರಿವಾಗುತ್ತಿತ್ತೇನೋ~ ಎಂದವರು ಜಾಲಿ ಮೊಹಲ್ಲಾದ ನಿವಾಸಿ ಜ್ಯೋತಿ.
`ಬಡಾವಣೆಯಲ್ಲಿ ನೀರಿನ ಪೈಪ್ ಮತ್ತು ಒಳಚರಂಡಿಯ ಪೈಪ್‌ಗಳು ಒಡೆದು ಕೆಟ್ಟ ನೀರೆಲ್ಲಾ ಕುಡಿಯುವ ನೀರಿನ ಜೊತೆಗೆ ಸೇರುತ್ತಿದೆ. ಪೈಪ್ ಲೈನ್‌ಗಳನ್ನು ರಿಪೇರಿ ಮಾಡಿಸಲೂ ಜಲಮಂಡಲಿ ಅಧಿಕಾರಿಗಳು ಮುಂದಾಗುತ್ತಿಲ್ಲ. ದುಡ್ಡು ಕಟ್ಟಿಸಿಕೊಂಡು ಬಿಡೋ ನೀರನ್ನೇ ಸರಿಯಾಗಿ ಬಿಡದಿರೋ ಜಲಮಂಡಲಿಯ ಅಧಿಕಾರಿಗಳು ಇನ್ನು ಪೈಪ್‌ಲೈನ್‌ಗಳ ಬಗ್ಗೆ ಎಲ್ಲಿ ತಲೆ ಕೆಡಿಸ್ಕೋತಾರೆ~ ಎಂಬುದು ಸ್ಥಳೀಯರಾದ ಶೇಖರ್ ಅವರ ಅಳಲು.
`ಮ್ಯಾನ್ ಹೋಲ್‌ಗಳನ್ನ ಸರಿಯಾಗಿ ನಿರ್ವಹಣೆ ಮಾಡದೇ ಇರೋದ್ರಿಂದ ಒಳಚರಂಡಿ ಪೈಪ್‌ಗಳಲ್ಲಿ ಮಣ್ಣು ತುಂಬಿಕೊಂಡಿತ್ತು. ಇದನ್ನು ರಿಪೇರಿ ಮಾಡಿಸಲು ಮುಂದಾದ ಜಲಮಂಡಲಿ ಅಧಿಕಾರಿಗಳು ಕುಡಿಯುವ ನೀರಿನ ಪೈಪ್‌ಗಳನ್ನೂ ಅಗೆದು ಕುಡಿಯುವ ನೀರು ಹಾಗೂ ಒಳಚರಂಡಿ ಪೈಪ್‌ಗಳು ಒಡೆದು ಎರಡೂ ಪೈಪ್‌ಗಳ ನೀರು ಒಂದಾಗುವಂತೆ ಹೊಸ ಸಮಸ್ಯೆಯನ್ನ ಸೃಷ್ಟಿಸಿದ್ದಾರೆ.
ನೀರಿನ ಸಮಸ್ಯೆಗಾಗಿ ಬಡಾವಣೆಯಲ್ಲಿ ಸುಮಾರು ಇಪ್ಪತ್ತೈದು ಬೋರ್‌ವೆಲ್‌ಗಳಿದ್ದರೂ ನೀರು ಸಾಕಾಗುತ್ತಿಲ್ಲ. ಲಾಡ್ಜ್‌ಗಳಿಗೆ ಮಾತ್ರ ಸರಿಯಾಗಿ ಪೂರೈಕೆಯಾಗೋ ನೀರು ಮನೆಗಳಿಗೆ ಮಾತ್ರ ಬರೋಲ್ಲ~ ಎಂದು ಕಿಡಿ ಕಾರಿದವರು ಜಾಲಿ ಮೊಹಲ್ಲಾದ ನಿವಾಸಿ ಮಂಜುನಾಥ್.
ಸರಿ ಮಾಡ್ತೇವೆ
`ಬಡಾವಣೆಗೆ ಕಲುಷಿತ ನೀರು ಪೂರೈಕೆಯಾಗಿದ್ದು ಗೊತ್ತಾಗಿದೆ. ಪೈಪ್‌ಪೈನ್‌ಗಳ ರಿಪೇರಿಗೆ ಕೂಡಲೇ ಕ್ರಮ ಕೈಗೊಳ್ತೇವೆ. ಜಲಮಂಡಲಿ ಅಧಿಕಾರಿಗಳು ಲಂಚ ತೆಗೆದುಕೊಂಡು ಲಾಡ್ಜ್‌ಗಳಿಗೆ ನೀರು ಬಿಡ್ತಾರೆ ಅನ್ನೋ ಆರೋಪದಲ್ಲಿ ಸತ್ಯಾಂಶ ಇಲ್ಲ. ಸದ್ಯ ಕಾಟನ್ ಪೇಟೆಯ ಕಡೆಯಿಂದ ನೀರು ಪೂರೈಕೆ ಮಾಡ್ತಿದ್ದೇವೆ. ಇನ್ನೆರೆಡು ದಿನಗಳಲ್ಲಿ ಸಮಸ್ಯೆ ಸರಿ ಮಾಡ್ತೇವೆ~
-ಶಿವರಾಮ್, ಸಹಾಯಕ ಎಂಜಿನಿಯರ್, ಚಿಕ್ಕಪೇಟೆ ಉಪ ವಿಭಾಗ, ಜಲಮಂಡಲಿ ಕೇಂದ್ರ ವಲಯ.
ಅಧಿಕಾರಿಗಳ ನಿರ್ಲಕ್ಷ್ಯ
`ನಮ್ಮ ಬಡಾವಣೆಯಲ್ಲಿ ಸರಿಯಾಗಿ ನೀರು ಪೂರೈಕೆಗೆ ಅಧಿಕಾರಿಗಳು ಸೋತಿದ್ದಾರೆ. ಕಲುಷಿತ ನೀರಿನ ಸಮಸ್ಯೆಯೂ ಜಾಸ್ತಿ ಆಗಿದೆ. ಜಲಮಂಡಲಿಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರೂ ಪೈಪ್‌ಲೈನ್‌ಗಳನ್ನ ಸರಿಮಾಡಿಸಿಲ್ಲ. ಕಲುಷಿತ ನೀರು ಪೂರೈಕೆಗೆ ಜಲಮಂಡಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ~
-ಜಿ.ಎ.ಅಶ್ವತ್ಥ ನಾರಾಯಣ, ಬಿಬಿಎಂಪಿ ಸದಸ್ಯ, ಕೆ.ಆರ್.ಮಾರುಕಟ್ಟೆ ವಾರ್ಡ್ ಸಂಖ್ಯೆ 139.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.