ADVERTISEMENT

ಕಸದಪುರ ಮಾಡಿದ್ದು ನಾನಲ್ಲ, ಬಿಜೆಪಿ: ಸೋಮಶೇಖರ್‌

ಕೆಂಗೇರಿ ಉಪನಗರದಲ್ಲಿ ಅತ್ಯಾಧುನಿಕ ಗ್ರಂಥಾಲಯ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 20:05 IST
Last Updated 23 ಅಕ್ಟೋಬರ್ 2017, 20:05 IST
ಎಂ.ಜಯಕುಮಾರ್ ಅವರು ಡಾ.ರಾಜ್ ಕುಮಾರ್‍ ಸಮಗ್ರ ಜೀವನ ಚರಿತ್ರೆ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ನೀಡಿದರು. ಶಾಸಕ ಎಸ್.ಟಿ.ಸೋಮಶೇಖರ್, ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಡಿ.ಎಚ್.ಕೇಸರಿ, ಬಿಬಿಎಂಪಿ ನಾಮ ನಿರ್ದೇಶಿತ ಸದಸ್ಯ ಜಿ.ವಿ.ಸುರೇಶ್, ಪರಿಸರವಾದಿ ನಾಗೇಶ್ ಹೆಗಡೆ ಇತರರು ಇದ್ದಾರೆ
ಎಂ.ಜಯಕುಮಾರ್ ಅವರು ಡಾ.ರಾಜ್ ಕುಮಾರ್‍ ಸಮಗ್ರ ಜೀವನ ಚರಿತ್ರೆ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ನೀಡಿದರು. ಶಾಸಕ ಎಸ್.ಟಿ.ಸೋಮಶೇಖರ್, ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಡಿ.ಎಚ್.ಕೇಸರಿ, ಬಿಬಿಎಂಪಿ ನಾಮ ನಿರ್ದೇಶಿತ ಸದಸ್ಯ ಜಿ.ವಿ.ಸುರೇಶ್, ಪರಿಸರವಾದಿ ನಾಗೇಶ್ ಹೆಗಡೆ ಇತರರು ಇದ್ದಾರೆ   

ಬೆಂಗಳೂರು:'ಯಶವಂತಪುರವನ್ನು ಕಸದಪುರವಾಗಿ ಮಾಡಿದ್ದು ನಾನಲ್ಲ; ಹಿಂದಿನ ಬಿಜೆಪಿ ಸರ್ಕಾರ' ಎಂದು ಶಾಸಕ ಎಸ್.ಟಿ.ಸೋಮಶೇಖರ್ ಆರೋಪಿಸಿದರು.

ಕೆಂಗೇರಿ ಉಪನಗರದಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

‘ಯಶವಂತಪುರ ವ್ಯಾಪ್ತಿಯಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕಗಳು ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ನೀಡಿದ ಮಹತ್ತರ ಕೊಡುಗೆಗಳು. ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಕ್ಷೇತ್ರದ ಅಭಿವೃದ್ಧಿ ಸಹಿಸದ ವಿರೋಧ ಪಕ್ಷಗಳು ನನ್ನ ಚಾರಿತ್ರ್ಯವಧೆಗೆ ಸುಳ್ಳು ಆರೋಪ ಮಾಡುತ್ತಿವೆ. ಪ್ರತಿಭಟನೆ ಮೂಲಕ ಬೆದರಿಸಲು ಪ್ರಯತ್ನಿಸಿದರೆ ನಾನು ಅಂಜುವುದಿಲ್ಲ. ಕ್ಷೇತ್ರದ ಜನತೆ ಆಶೀರ್ವಾದ ನನಗಿದೆ. ಅವರ ಸೇವಕನಾಗಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ’ ಎಂದರು.

ADVERTISEMENT

‘ಕ್ಷೇತ್ರದಾದ್ಯಂತ ಅಗ್ಯತವಿರುವೆಡೆ ಮೇಲ್ಸೇತುವೆ, ರಸ್ತೆ, ಶಾಲಾ ಕಟ್ಟಡ ನಿರ್ಮಿಸಲಾಗುತ್ತಿದೆ. ಹೇರೋಹಳ್ಳಿಯಲ್ಲಿ ಸರ್ಕಾರಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಕೆಂಗೇರಿ ಆಸುಪಾಸಿನಲ್ಲಿ ಸರ್ಕಾರಿ ಕಾಲೇಜು ಶೀಘ್ರ ತೆರೆಯಲಾಗುವುದು. ಯುಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಥಳೀಯ ವಿದ್ಯಾರ್ಥಿಗಳು ತಯಾರಾಗಲು ₹10 ಲಕ್ಷ ಅನುದಾನದಲ್ಲಿ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ ಮಾತನಾಡಿ, ಬಾಲ್ಯದಲ್ಲಿಯೇ ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಲು ಪಾಲಕರು ಗಮನ ಹರಿಸಬೇಕು. ಪುಸ್ತಕ ಓದುವ ಅಭ್ಯಾಸದಿಂದ ಮನುಷ್ಯನ ಬೌದ್ಧಿಕ ಜ್ಞಾನದಮಟ್ಟ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್.ಹೊಸಮನಿ ಮಾತನಾಡಿದರು. ಹಾಪ್‍ಕಾಮ್ಸ್ ನಿರ್ದೇಶಕ ಎಂ.ಜಯಕುಮಾರ್ ಡಾ.ರಾಜ್ ಕುಮಾರ್‍ ಸಮಗ್ರ ಜೀವನ ಚರಿತ್ರೆಯ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.