ADVERTISEMENT

ಕಸ ವಿಲೇವಾರಿ; ರೋಸಿ ಹೋದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 18:30 IST
Last Updated 22 ಆಗಸ್ಟ್ 2012, 18:30 IST

ಬೆಂಗಳೂರು: ಒಂದೆಡೆ ಗುತ್ತಿಗೆದಾರರ ಲಾಬಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತೋರುತ್ತಿರುವ ನಿರಾಸಕ್ತಿ, ಮತ್ತೊಂದೆಡೆ ಸ್ಥಳೀಯರ ಪ್ರತಿಭಟನೆಯಿಂದ ಕಸ ವಿಲೇವಾರಿ ಘಟಕಗಳ ಸ್ಥಗಿತ, ಪರಿಣಾಮ, ನಗರದಲ್ಲಿ ಆಗಾಗ್ಗೆ ಕಸದ ಸಮಸ್ಯೆ ಉದ್ಭವಿಸಿ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಸೂಚನೆ ಮೇರೆಗೆ ಯಲಹಂಕ ಹೊರವಲಯದ ಮಾವಳ್ಳಿಪುರದಲ್ಲಿ ಕಸ ವಿಲೇವಾರಿ ಮಾಡುವ ಪ್ರಕ್ರಿಯೆ ಸ್ಥಗಿತಗೊಂಡ ಬೆನ್ನಲ್ಲಿಯೇ ಇದೀಗ ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡ್ಲಹಳ್ಳಿಯಲ್ಲಿಯೂ ಜನ ಬಿಬಿಎಂಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಪರಿಣಾಮ, ನಾಲ್ಕೈದು ದಿನಗಳಿಂದ ಅಲ್ಲಿಗೆ ಕಸ ವಿಲೇವಾರಿಯಾಗುತ್ತಿಲ್ಲ. ಇದರಿಂದ ನಗರ ಕಸದ ರಾಶಿಯಿಂದ ಗಬ್ಬೆದ್ದು ನಾರುತ್ತಿದೆ.ಮಾವಳ್ಳಿಪುರ ಅಥವಾ ಗುಂಡ್ಲಹಳ್ಳಿಯಲ್ಲಿ ಗುತ್ತಿಗೆ ಪಡೆದ ಕಂಪೆನಿಗಳು ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡದಿರುವುದು ಸ್ಥಳೀಯರ ಪ್ರತಿಭಟನೆಗೆ ಕಾರಣವಾಗಿದೆ.

ನಗರದಲ್ಲಿ ಸಂಗ್ರಹಿಸುವ ಕಸವನ್ನು ಯಥಾವತ್ತು ಗುಡ್ಡದ ರೀತಿಯಲ್ಲಿ ಸುರಿಯುವುದು, ಗಬ್ಬು ನಾರುವ ಕಸದಿಂದ ಸುತ್ತಲಿನ ಪರಿಸರ ಮಲಿನಗೊಳ್ಳುವುದು, ತ್ಯಾಜ್ಯದಿಂದ ಸೋರಿಕೆಯಾಗುವ ದ್ರವರೂಪದ ನೀರು ಭೂಮಿಯಲ್ಲಿ ಸೇರಿ ಕೊಳವೆಬಾವಿಗಳ ನೀರು ಮಲಿನಗೊಳ್ಳುವುದು, ಅದೇ ನೀರನ್ನು ಕುಡಿಯುವ ಜನ- ಜಾನುವಾರುಗಳು ಕಾಯಿಲೆಗಳಿಗೆ ತುತ್ತಾಗುವುದು ಜನರ ಪ್ರತಿಭಟನೆಗೆ ಕಾರಣವಾಗುತ್ತಿದೆ.

ಇತ್ತ ಅವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಪಾಲಿಕೆ ತೊಳಲಾಡುತ್ತಿದೆ. ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಕ್ರಮ ಜರುಗಿಸುವಂತಹ ಯಾವುದೇ ಷರತ್ತು ವಿಧಿಸದಿರುವುದರಿಂದ ಮಂಡೂರಿನಲ್ಲಿ ಗಾಯತ್ರಿ ಶ್ರೀನಿವಾಸನ್ ಎಂಬ ಗುತ್ತಿಗೆ ಸಂಸ್ಥೆಯು ಏಳು ವರ್ಷಗಳಾದರೂ ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗದಿದ್ದರೂ ಪಾಲಿಕೆ ಕ್ರಮ ಕೈಗೊಳ್ಳುವಂತಹ ಸ್ಥಿತಿಯಲ್ಲಿಲ್ಲ.

ಇನ್ನು, ಸೇಲಂ, ಮುಂಬೈ ಜತೆಗೆ ದೂರದ ಇಸ್ರೇಲ್‌ವರೆಗೂ ಅಧ್ಯಯನ ಪ್ರವಾಸ ಕೈಗೊಂಡ ಬಿಬಿಎಂಪಿ ಸದಸ್ಯರು ಅಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವಂತಹ ಘಟಕಗಳನ್ನು ವೀಕ್ಷಿಸಿ ಬಂದ ಬಳಿಕವೂ ನಗರದಲ್ಲಿ ಅಂತಹ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ತಕ್ಷಣದ ಕ್ರಮ ಕೈಗೊಳ್ಳದಿರುವುದು ಇಂದಿನ ಸಮಸ್ಯೆಗೆ ಮತ್ತೊಂದು ಕಾರಣ ಎನ್ನಬಹುದು.

5000 ಟನ್ ಕಸ ಉತ್ಪತ್ತಿ: ನಗರದಲ್ಲಿ ಪ್ರತಿ ದಿನ 5000 ಟನ್ ಕಸ ಉತ್ಪತ್ತಿಯಾಗುತ್ತಿದೆ. ಪ್ರತಿ ವರ್ಷ ಪಾಲಿಕೆಯು ಕಸ ಸಂಗ್ರಹ ಹಾಗೂ ಸಾಗಣೆಗೆ 200 ಕೋಟಿ ರೂಪಾಯಿ ವ್ಯಯಿಸುತ್ತಿದೆ. ಹೊಸ ಟೆಂಡರ್ ಪ್ರಕ್ರಿಯೆ ನಡೆಸಿದಲ್ಲಿ ಈ ಮೊತ್ತ 400 ಕೋಟಿ ರೂಪಾಯಿ ದಾಟಲಿದೆ. ಮಂಡೂರು, ಮಾವಳ್ಳಿಪುರ ಹಾಗೂ ಗುಂಡ್ಲಹಳ್ಳಿಗೆ  70ಕ್ಕೂ ಅಧಿಕ ಗುತ್ತಿಗೆದಾರರು ಕಸ ವಿಲೇವಾರಿ ಮಾಡುತ್ತಿದ್ದಾರೆ.

ಮಂಡೂರು ಬಳಿ ಗುತ್ತಿಗೆ ತೆಗೆದುಕೊಂಡಿರುವ ಗಾಯಿತ್ರಿ ಶ್ರೀನಿವಾಸನ್ ಕಂಪೆನಿ, ಕಸದಿಂದ 5 ವೆುಗಾವಾಟ್ ವಿದ್ಯುತ್ ಉತ್ಪಾದಿಸುವುದಾಗಿ ಹೇಳಿತ್ತು. ಆದರೆ, ಏಳು ವರ್ಷ ಕಳೆದರೂ ಒಂದೇ ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಿಲ್ಲ. ಈ ನಡುವೆ, ಕಂಪೆನಿಯು ವಿದ್ಯುತ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲು ಸರ್ಕಾರದಿಂದಲೇ ನೆರವು ಕೋರುತ್ತಿದೆ. ಆದರೆ, ಒಪ್ಪಂದದ ಸಂದರ್ಭದಲ್ಲಿ ಈ ಷರತ್ತು ಹಾಕದಿರುವುದರಿಂದ ನೆರವು ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ಕಾರ ಕೈಚೆಲ್ಲಿ ಕುಳಿತಿದೆ.

ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಮಹಾನಗರ ಪಾಲಿಕೆಯು ಸರಿಯಾದ ಷರತ್ತುಗಳನ್ನು ವಿಧಿಸದಿರುವುದರಿಂದ ಮಾವಳ್ಳಿಪುರದಲ್ಲಿ ರಾಮ್ಕಿ ಕಂಪೆನಿ ಅಥವಾ ಗುಂಡ್ಲಹಳ್ಳಿ ಬಳಿ ಟೆರ‌್ರಾ ಫಿರ್ಮಾ ಬಯೋಟೆಕ್ನಾಲಜೀಸ್ ಕಂಪೆನಿಗಳು ನಿಯಮಗಳನ್ನು ಪಾಲಿಸಿಲ್ಲ. ಅವುಗಳ ಮೇಲೆ ಹಿಡಿತ ಸಾಧಿಸಲು ಪಾಲಿಕೆಗೂ ಸಾಧ್ಯವಾಗುತ್ತಿಲ್ಲ.

ಇಂತಹ ವೈರುಧ್ಯಗಳ ನಡುವೆಯೂ ಉದ್ಯಾನ ನಗರಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆದರೆ, ಸಮರ್ಪಕ ಕಸ ವಿಲೇವಾರಿಯಲ್ಲಿ ಮಾತ್ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೋಲುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

`ನಮ್ಮದೇ ಸರ್ಕಾರವಿದೆ, ಕ್ರಮ ಕೈಗೊಳ್ಳುತ್ತಿಲ್ಲ~
`ನಗರದಲ್ಲಿ ದಿನವೊಂದಕ್ಕೆ ಆರು ಸಾವಿರ ಟನ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಆದರೆ ಈ ಬಗ್ಗೆ ಬಿಬಿಎಂಪಿಯಾಗಲಿ, ಸರ್ಕಾರದ ಅಧಿಕಾರಿಗಳಾಗಲಿ ಯಾವ ಕ್ರಮ ಕೈಗೊಳ್ಳುತ್ತಿದ್ದಾರೆ. ನಮ್ಮದೇ ಸರ್ಕಾರ, ನಮ್ಮದೇ ಮುಖ್ಯಮಂತ್ರಿ ಇದ್ದಾರೆ ಆದರೆ ಏನು ಪ್ರಯೋಜನ?~ ಎಂದು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರಗೌಡ ಆಕ್ರೋಶದಿಂದ ಪ್ರಶ್ನಿಸಿದರು.

ಭಾರತ ಯುವ ಕೇಂದ್ರದ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, `ನಿನ್ನೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ `ಬರಪ್ರವಾಸ~ದಲ್ಲಿ ತುಮಕೂರಿನ ಗೋಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಗೋವಿಗೆ ತಿನ್ನಲ್ಲೂ ಸರಿಯಾದ ಹುಲ್ಲು ಇಲ್ಲ, ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಅದಕ್ಕೆ ಯಡಿಯೂರಪ್ಪ `ಬೂಸ~ ಒದಗಿಸಲು ಸರ್ಕಾರಕ್ಕೆ ಹೇಳುತ್ತೇನೆ ಎಂದು ಭರವಸೆ ನೀಡಿದ್ದಾರೆ, ಆದರೆ ಸರ್ಕಾರ ಬೂಸ ನೀಡಲು ಮನಸ್ಸು ಮಾಡಬೇಕಲ್ಲ~ ಎಂದು ವ್ಯಂಗ್ಯವಾಡಿದರು.

`ನಗರದ ರಸ್ತೆಗಳಲ್ಲಿ ಸುಮ್ಮನೇ ನಡೆದುಕೊಂಡು ಹೋದರೂ ತ್ಯಾಜ್ಯದ ಗಬ್ಬುನಾತ ಮೂಗಿಗೆ ಬಡಿಯುತ್ತದೆ. ಕೇವಲ ಸಭೆ ಸಮಾರಂಭಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷಣ ಬಿಗಿದರೆ ಸಾಲದು, ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಸಮರ್ಪಕವಾಗಿ ನಿರ್ದೇಶನ ನೀಡಬೇಕು. ನನ್ನನ್ನು ಪಕ್ಷದಿಂದ ಉಚ್ಛಾಟಿಸಿದರೂ ಚಿಂತೆಯಿಲ್ಲ, ಆಗುತ್ತಿರುವ ಅನ್ಯಾಯವನ್ನು ಹೇಳದೇ ಇರಲಾರೆ~ ಎಂದು ಘರ್ಜಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಚ್ಚರಿ
ಬೆಂಗಳೂರು: 
ಯಲಹಂಕ ಹೊರವಲಯದ ಮಾವಳ್ಳಿಪುರದಲ್ಲಿ ಗುರುವಾರದಿಂದ ಮತ್ತೆ ಕಸ ವಿಲೇವಾರಿ ಮಾಡಲು ನಿರ್ಧರಿಸಿರುವ ಬಿಬಿಎಂಪಿ ತೀರ್ಮಾನದ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್. ಸದಾಶಿವಯ್ಯ ಅಚ್ಚರಿ ವ್ಯಕ್ತಪಡಿಸಿದ್ದಾರೆ.

`ರಾಮ್ಕಿ~ ಕಂಪೆನಿಯು ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವ ಕುರಿತು ಸ್ಥಳೀಯರು ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ್ದ ಅವರು, ನಂತರ ಅಲ್ಲಿ ಕಸ ಸುರಿಯುವುದನ್ನು ಸ್ಥಗಿತಗೊಳಿಸುವಂತೆ ಪಾಲಿಕೆಗೆ ಸೂಚಿಸಿ ನೋಟಿಸ್ ಜಾರಿಗೊಳಿಸಿದ್ದರು. ಆನಂತರ ಅಲ್ಲಿ ಕಸ ವಿಲೇವಾರಿ ಮಾಡುವುದನ್ನು ಪಾಲಿಕೆ ಸ್ಥಗಿತಗೊಳಿಸಿತ್ತು.

ಇದೀಗ ಮತ್ತೆ ಅಲ್ಲಿ ಕಸ ವಿಲೇವಾರಿ ಮಾಡಲು ಪಾಲಿಕೆ ನಿರ್ಧರಿಸಿರುವ ಬಗ್ಗೆ ಸದಾಶಿವಯ್ಯ ಅವರ ಗಮನಸೆಳೆದಾಗ, `ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ಪಾಲಿಕೆ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಮೊದಲು ವರದಿ ನೀಡಲಿ. ಆನಂತರ ಅನುಮತಿ ನೀಡುವ ಕುರಿತು ಪರಿಶೀಲಿಸುತ್ತೇನೆ~ ಎಂದು ಪ್ರತಿಕ್ರಿಯಿಸಿದರು.

 `ನಮಗೆ ಸಮಾಧಾನಕರವಾಗುವ ರೀತಿಯಲ್ಲಿ ಪಾಲಿಕೆ ಕ್ರಮ ಕೈಗೊಂಡಿರುವ ಕುರಿತು ವರದಿ ಸಲ್ಲಿಸಿದ ನಂತರವೇ ಮಾವಳ್ಳಿಪುರದ ಬಳಿ ಕಸ ವಿಲೇವಾರಿ ಮಾಡಲು ಅವಕಾಶ ನೀಡುವ ಬಗ್ಗೆ ಪುನರ್ ಪರಿಶೀಲಿಸಲಾಗುವುದು~ ಎಂದು ಅವರು ಹೇಳಿದರು.

ಕಸ ಸೆಸ್ ಹೆಚ್ಚಳದ ಪ್ರಸ್ತಾವ ಇಲ್ಲ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ಮೇಲಿನ ಸೆಸ್ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ ಎಂದು ಉಪ ಮುಖ್ಯಮಂತ್ರಿ ಆರ್. ಅಶೋಕ ಬುಧವಾರ ಇಲ್ಲಿ ಸ್ಪಷ್ಟಪಡಿಸಿದರು.

ಕಸದ ಸಮಸ್ಯೆಗೆ ಸಂಬಂಧಿಸಿದಂತೆ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಕೆಲ ಬಿಜೆಪಿ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಕಸದ ಮೇಲಿನ ಸೆಸ್ ಹೆಚ್ಚಳಕ್ಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂಬ ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, `ಅಂತಹ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಅಲ್ಲದೆ, ಸಭೆಯಲ್ಲಿಯೂ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ~ ಎಂದು ಹೇಳಿದರು.

`ಒಂದೇ ಒಂದು ಪ್ರಸ್ತಾವ ಸಲ್ಲಿಕೆ ಆಗಿಲ್ಲ~

ನಗರದ ಪ್ರತಿ ವಾರ್ಡ್‌ನಲ್ಲಿಯೂ ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸುವ ಸಣ್ಣ ಘಟಕಗಳನ್ನು ಪ್ರಾರಂಭಿಸುವ ಸಂಬಂಧ ಜಾಗ ಗುರುತಿಸುವಂತೆ ಪಾಲಿಕೆ ಆಯುಕ್ತರು ಎರಡು ತಿಂಗಳ ಹಿಂದೆಯೇ ಸದಸ್ಯರನ್ನು ಕೋರಿದರು. ಇಂತಹ ಘಟಕಗಳಿಗೆ ತಕ್ಷಣ ಅನುಮತಿ ನೀಡಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರೂ ಇದುವರೆಗೆ ಯಾವೊಬ್ಬ ಸದಸ್ಯರಿಂದಲೂ ಪ್ರಸ್ತಾವ ಸಲ್ಲಿಕೆಯಾಗಿಲ್ಲ!

ಪ್ರತಿ ವಾರ್ಡ್‌ನಲ್ಲಿಯೂ ಒಣ ಹಾಗೂ ಹಸಿ ಕಸ, ಪ್ಲಾಸ್ಟಿಕ್ ಅನ್ನು ಬೇರ್ಪಡಿಸುವುದರಿಂದ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಸಹಕಾರಿಯಾಗಲಿದೆ ಎಂಬುದು ಆಯುಕ್ತರ ಸಲಹೆ. ಈ ಉದ್ದೇಶಕ್ಕಾಗಿ ಪ್ರತಿ ವಾರ್ಡ್‌ಗೆ 25 ಲಕ್ಷ ನೀಡುವುದಾಗಿ ಆಯುಕ್ತರು ಭರವಸೆ ನೀಡಿದ್ದರು. ಅಲ್ಲದೆ, ಪ್ಲಾಸ್ಟಿಕ್‌ಮುಕ್ತ ವಾರ್ಡ್‌ಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಮೇಯರ್ ಕೂಡ ಪ್ರಕಟಿಸಿದ್ದರು. ಆದರೆ, ಇವ್ಯಾವುವು ಕೂಡ ಇದುವರೆಗೆ ಅನುಷ್ಠಾನಕ್ಕೆ ಬಂದಿಲ್ಲ!

ಗುತ್ತಿಗೆದಾರರ ಲಾಬಿ: ಗುಜರಾತ್‌ನ ಸೂರತ್, ಅಹಮದಾಬಾದ್‌ನಂತಹ ನಗರಗಳಲ್ಲಿ ತ್ಯಾಜ್ಯ ವಿಲೇವಾರಿಯ ಗುತ್ತಿಗೆ ಪಡೆದು ಅಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವ ನಮ್ಮ ಗುತ್ತಿಗೆದಾರರು ಬೆಂಗಳೂರಿನಲ್ಲಿ ಮಾತ್ರ ಅಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿದ್ದಾರೆ ಎಂಬುದು ಆಡಳಿತಾರೂಢ ಬಿಜೆಪಿ ಸದಸ್ಯರ ಆರೋಪ.

ಈ ಗುತ್ತಿಗೆದಾರರು ಟೆಂಡರ್‌ನಲ್ಲಿ ಬೇರೆ ಯಾವುದೇ ಗುತ್ತಿಗೆದಾರರು ಭಾಗವಹಿಸದಷ್ಟರ ಮಟ್ಟಿಗೆ ಆಡಳಿತದ ಮೇಲೆ ಪ್ರಭಾವ ಬೀರುವುದರ ಜತೆಗೆ, ಅವರ ವಿರುದ್ಧ ಕಾನೂನಾತ್ಮಕವಾಗಿಯೂ ಹೋರಾಟ ನಡೆಸಿ ತಡೆಯುವ ತಂತ್ರ ಕಂಡುಕೊಂಡಿದ್ದಾರೆ. ಇದರಿಂದ ಸರ್ಕಾರ ಕೂಡ ಇಂತಹ ಗುತ್ತಿಗೆದಾರರನ್ನು ನಿಯಂತ್ರಿಸಲು ಸಾಧ್ಯವಾಗದೆ ಅಸಹಾಯಕತೆ ವ್ಯಕ್ತಪಡಿಸುತ್ತಿದೆ.

ಸಚಿವರ ಆರೋಪ: `ಗುತ್ತಿಗೆದಾರರು ಕಸ ವಿಲೇವಾರಿಯಲ್ಲಿ ತಮಗೆ ಅನುಕೂಲವಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅವರದು ಕಸ ಎತ್ತುವ ಕೆಲಸವಾಗಿದೆ. ಅದನ್ನು ಮಾಡದೆ, ಬೇರೆ ಬೇರೆ ರೀತಿಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕಸ ವಿಲೇವಾರಿಯ ಸಮಸ್ಯೆಯನ್ನು ಮೇಯರ್ ಅವರು ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ~ ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.