ADVERTISEMENT

ಕಾಟನ್‌ಪೇಟೆಯಲ್ಲಿ ದಂಪತಿ ಕೊಲೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಬೆಂಗಳೂರು: ಹೋಟೆಲ್ ಕೆಲಸಗಾರನೊಬ್ಬ ತನ್ನ ಮಾಲೀಕ ಮತ್ತು ಅವರ ಪತ್ನಿಯ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಬುಧವಾರ ನಸುಕಿನಲ್ಲಿ ನಡೆದಿದೆ.

ಉತ್ತರಪ್ರದೇಶ ಮೂಲದ ಪವನ್‌ಕುಮಾರ್ ಶರ್ಮ (45) ಮತ್ತು ಅವರ ಪತ್ನಿ ಬಬಿತಾ ದೇವಿ (40) ಕೊಲೆಯಾದವರು. ಅವರ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಅಸ್ಸಾಂ ಮೂಲದ ಕಾರ್ತಿಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ.

ಆರೋಪಿಯು ಬಬಿತಾ ದಂಪತಿಯ ಐದು ವರ್ಷದ ಹೆಣ್ಣು ಮಗು ಪ್ರಿಯಾ ತಲೆಗೂ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪವನ್‌ಕುಮಾರ್ ದಂಪತಿ ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಮೂರು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದರು. ಹೋಟೆಲ್‌ಗೆ ಹೊಂದಿಕೊಂಡಂತೆಯೇ ಒಳ ಭಾಗದಲ್ಲಿರುವ ಕೊಠಡಿಯಲ್ಲಿ ಅವರು ವಾಸವಾಗಿದ್ದರು.

ನಾಲ್ಕೈದು ದಿನಗಳ ಹಿಂದೆಯಷ್ಟೇ ಆ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ ಕಾರ್ತಿಕ್, ಬಬಿತಾ ದಂಪತಿಯ ಜತೆ ಹೋಟೆಲ್‌ನಲ್ಲೇ ವಾಸವಾಗಿದ್ದ. ಪವನ್‌ಕುಮಾರ್ ಅವರು ಪತ್ನಿ ಮತ್ತು ಮಗುವಿನೊಂದಿಗೆ ಕೊಠಡಿಯಲ್ಲಿ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಕಾರ್ತಿಕ್, ದಂಪತಿಯ ತಲೆಗೆ ಸಲಾಕೆಯಿಂದ ಹೊಡೆದಿದ್ದಾನೆ.

ಅದೇ ವೇಳೆಗೆ ಎಚ್ಚರಗೊಂಡ ಮಗು ಪ್ರಿಯಾ ತಲೆಗೂ ಸಲಾಕೆಯಿಂದ ಹೊಡೆದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಟನ್‌ಪೇಟೆ ಮುಖ್ಯರಸ್ತೆಯ ವಸತಿಗೃಹವೊಂದರಲ್ಲಿ ಉದ್ಯೋಗಿಯಾಗಿರುವ ರಾಕೇಶ್ ಎಂಬುವರು ತಿಂಡಿ ತಿನ್ನಲು ಬೆಳಿಗ್ಗೆ 9.30ರ ಸುಮಾರಿಗೆ ಪವನ್‌ಕುಮಾರ್ ಅವರ ಹೋಟೆಲ್‌ನ ಬಳಿ ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಗುವಿನ ತಲೆಗೆ ಪೆಟ್ಟಾಗಿದ್ದರಿಂದ ಪ್ರಜ್ಞೆ ತಪ್ಪಿತ್ತು. ಮಗುವನ್ನು ಕೂಡಲೇ ವಾಣಿವಿಲಾಸ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ನಿಮ್ಹಾನ್ಸ್‌ಗೆ ದಾಖಲಿಸುವಂತೆ ಸಲಹೆ ನೀಡಿದರು. ವೈದ್ಯರ ಸಲಹೆಯಂತೆ ಮಗುವನ್ನು ನಿಮ್ಹಾನ್ಸ್‌ಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

`ಭಯ್ಯಾನೇ ಮಾರಾ~
ಭಯ್ಯಾನೇ ಮಾರಾ: `ಕಾರ್ತಿಕ್ ಭಯ್ಯಾನೇ ಮಾರಾ (ಕಾರ್ತಿಕ್ ಅಣ್ಣನೇ ಹೊಡೆದರು) ಎಂದು ಮಗು ಹೇಳಿಕೆ ನೀಡಿದೆ. ಘಟನೆ ನಂತರ ಕಾರ್ತಿಕ್ ಪರಾರಿಯಾಗಿದ್ದಾನೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರವಷ್ಟೇ ಕೊಲೆಗೆ ಕಾರಣ ಏನೆಂದು ಗೊತ್ತಾಗಲಿದೆ. ಆತನ ಪತ್ತೆಗಾಗಿ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಂಪತಿ ಬಳಿ ಇದ್ದ ಚಿನ್ನಾಭರಣ ಹಾಗೂ ಹಣವನ್ನು ಕಾರ್ತಿಕ್ ತೆಗೆದುಕೊಂಡು ಹೋಗಿಲ್ಲ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದರು: `ಪವನ್‌ಕುಮಾರ್ ಅವರ ಹೋಟೆಲ್‌ನಲ್ಲೇ ಪ್ರತಿನಿತ್ಯ ತಿಂಡಿ ತಿನ್ನುತ್ತಿದ್ದೆ. ಅಂತೆಯೇ ಬೆಳಿಗ್ಗೆ 9.30ರ ಸುಮಾರಿಗೆ ತಿಂಡಿ ತಿನ್ನಲು ಹೋಟೆಲ್‌ನ ಬಳಿ ಬಂದೆ. ಹೋಟೆಲ್‌ನ ರೋಲಿಂಗ್ ಶಟರ್ ಅರ್ಧಕ್ಕೆ ಮುಚ್ಚಿತ್ತು. ರೋಲಿಂಗ್ ಶಟರ್ ಮೇಲಕ್ಕೆತ್ತಿ ಹೋಟೆಲ್‌ನ ಒಳ ಹೋದಾಗ ಬಬಿತಾ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರ ಪಕ್ಕದಲ್ಲೇ ಮಲಗಿದ್ದ ಮಗುವಿನ ತಲೆಯಿಂದ ರಕ್ತ ಸುರಿಯುತ್ತಿತ್ತು. ಇದರಿಂದ ಗಾಬರಿಯಾದ ನಾನು ಹೋಟೆಲ್‌ನಿಂದ ಹೊರ ಬಂದು ಅಕ್ಕಪಕ್ಕದ ಅಂಗಡಿಯವರಿಗೆ ವಿಷಯ ತಿಳಿಸಿದೆ. ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದೆ~ ಎಂದು ರಾಕೇಶ್ ಹೇಳಿದರು.

`ದಂಪತಿ ಸುಮಾರು ಮೂರು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದರು. ಅವರಿಗೆ ನಗರದಲ್ಲಿ ಯಾವುದೇ ಸಂಬಂಧಿಕರಿಲ್ಲ~ ಎಂದು ಹೋಟೆಲ್‌ನ ಸಮೀಪದಲ್ಲೇ ಇರುವ ಎಟಿಎಂ ಘಟಕವೊಂದರ ಸೆಕ್ಯುರಿಟಿ ಗಾರ್ಡ್ ಈಶುಕುಮಾರ್ ರಾಯ್ ಸುದ್ದಿಗಾರರಿಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.