ADVERTISEMENT

ಕಾಮೆಡ್-ಕೆ ಪರೀಕ್ಷೆ: 9 ಮಂದಿ ಡಿಬಾರ್

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST

ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕಾಮೆಡ್-ಕೆ ಭಾನುವಾರ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಒಟ್ಟು ಒಂಬತ್ತು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಈ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕಾಮೆಡ್-ಕೆ ಪ್ರವೇಶ ಪರೀಕ್ಷೆ ಬರೆಯಲು ಸಾಧ್ಯವಿಲ್ಲ.

ತುಮಕೂರಿನ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರಿಗೆ ಒಪ್ಪಿಸಲಾಗಿದೆ. ಪರೀಕ್ಷಾ ಅಕ್ರಮದ ಇನ್ನುಳಿದ ಏಳು ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿವೆ. ಅಕ್ರಮ ಎಸಗಿದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದಿಂದ ತಕ್ಷಣ ಹೊರಗೆ ಕಳುಹಿಸಲಾಯಿತು ಎಂದು ಕಾಮೆಡ್-ಕೆ ಮುಖ್ಯ ಕಾರ್ಯನಿರ್ವಾಹಕ ಎ.ಎಸ್. ಶ್ರೀಕಾಂತ್ ತಿಳಿಸಿದರು.

ರಾಜ್ಯದ 12 ವೈದ್ಯಕೀಯ, 25 ದಂತ ವೈದ್ಯಕೀಯ ಹಾಗೂ 154 ಎಂಜಿನಿಯರಿಂಗ್ ಕಾಲೇಜುಗಳು ಕಾಮೆಡ್-ಕೆ ಸಂಯೋಜನೆಗೆ ಒಳಪಟ್ಟಿವೆ. ಇವೆಲ್ಲವೂ ಖಾಸಗಿ ಅನುದಾನರಹಿತ ಕಾಲೇಜುಗಳು. ಈ ಕಾಲೇಜುಗಳಲ್ಲಿ ಲಭ್ಯವಿರುವ ವಿವಿಧ ವೃತ್ತಿಶಿಕ್ಷಣ ಕೋರ್ಸ್‌ಗಳ ಸುಮಾರು 20,000 ಸೀಟುಗಳಿಗೆ ದೇಶದ ವಿವಿಧ ಭಾಗಗಳ 80,700 ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಭಾನುವಾರ ನಡೆದ ಭೌತವಿಜ್ಞಾನ ಹಾಗೂ ರಸಾಯನ ವಿಜ್ಞಾನ ಪರೀಕ್ಷೆಯಲ್ಲಿ ಶೇಕಡ 85ರಷ್ಟು, ಗಣಿತದಲ್ಲಿ ಶೇ 88ರಷ್ಟು ಹಾಗೂ ಜೀವವಿಜ್ಞಾನ ಪರೀಕ್ಷೆಯಲ್ಲಿ ಶೇ 81ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಸರಿ ಉತ್ತರಗಳನ್ನು ಕಾಮೆಡ್-ಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಶ್ರೀಕಾಂತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.