ADVERTISEMENT

ಕಾರು ಮಾರಿ ರೈತರಿಗೆ ನೆರವಾಗುವೆ: ಸುದೀಪ್‌

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 20:25 IST
Last Updated 13 ಡಿಸೆಂಬರ್ 2017, 20:25 IST
ರೈತರನ್ನು ಸುದೀಪ್‌ ಸನ್ಮಾನಿಸಿದರು. ಎನ್‌. ಸಂತೋಷ ಹೆಗ್ಡೆ, ಎ. ಜೆ. ಸದಾಶಿವ, ಸಾಹಿತಿ ದೊಡ್ಡರಂಗೇಗೌಡ, ನಿವೃತ್ತ ಕುಲಪತಿ ಕೆ. ನಾರಾಯಣಗೌಡ ಇದ್ದಾರೆ – ಪ್ರಜಾವಾಣಿ ಚಿತ್ರ
ರೈತರನ್ನು ಸುದೀಪ್‌ ಸನ್ಮಾನಿಸಿದರು. ಎನ್‌. ಸಂತೋಷ ಹೆಗ್ಡೆ, ಎ. ಜೆ. ಸದಾಶಿವ, ಸಾಹಿತಿ ದೊಡ್ಡರಂಗೇಗೌಡ, ನಿವೃತ್ತ ಕುಲಪತಿ ಕೆ. ನಾರಾಯಣಗೌಡ ಇದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾನು ಚಿತ್ರರಂಗದಲ್ಲಿ ಕಡಿಮೆ ದುಡಿದಿದ್ದೇನೆ. ನನ್ನ ಬಳಿ ಮೂರ್ನಾಲ್ಕು ಕಾರುಗಳಿವೆ. ಅವುಗಳಲ್ಲಿ ನನಗೆ ಇಷ್ಟವಾದ ಒಂದು ಕಾರು ಮಾರಿ ರೈತರಿಗೆ ಸಹಾಯ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಹೆಚ್ಚು ಸಹಾಯ ಮಾಡಲು ಪ್ರಯತ್ನಿಸುತ್ತೇನೆ’ ಎಂದು ನಟ ಸುದೀಪ್‌ ತಿಳಿಸಿದರು.

ವಿ ರೆಸ್ಪೆಕ್ಟ್‌ ಫಾರ್ಮರ್ಸ್‌ ಟ್ರಸ್ಟ್‌ ವತಿಯಿಂದ ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ‘ಪ್ರತಿ ತುತ್ತಿಗೂ ರೈತರನ್ನು ಸ್ಮರಿಸೋಣ’ ಎಂಬ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು. ’ರಾಜಕೀಯಕ್ಕೆ ಬರುವ ಯಾವ ಉದ್ದೇಶವೂ ಇಲ್ಲ’ ಎಂದು ಸ್ಪಷ್ಪಪಡಿಸಿದರು.

‘ರೈತರ ಹೆಸರಿನಲ್ಲಿ ಸಂಸ್ಥೆಗಳನ್ನು ಕಟ್ಟಿಕೊಂಡು ದುರುಪಯೋಗ ಮಾಡಿಕೊಳ್ಳಬಾರದು. ಯಾವುದೇ ಒಂದು ವೇದಿಕೆ ಕಟ್ಟಿ ಸನ್ಮಾನ ಮಾಡುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ರೈತರ ನೋವು ರೈತರಿಗೆ ಮಾತ್ರ ಗೊತ್ತು. ಆದರೆ, ಅವರ ಬೆಲೆ ನಮಗೆ ಗೊತ್ತು’ ಎಂದರು.   

ADVERTISEMENT

ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ ಹೆಗ್ಡೆ ಮಾತನಾಡಿ, ‘ಶ್ರೀಮಂತಿಕೆ, ಅಧಿಕಾರವನ್ನು ಗೌರವಿಸುವ ಈ ಸಮಾಜದಲ್ಲಿ ರೈತರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ರೈತರು ಬೆಳೆಗಾಗಿ ಸಾಲ ಪಡೆದು ಮದುವೆಯಂತಹ ಸಮಾರಂಭಗಳಿಗೆ ವೆಚ್ಚ ಮಾಡಬಾರದು. ರೈತರಿಗೆ ಬೆಳೆ ನಷ್ಟವಾದ ಸಂದರ್ಭದಲ್ಲಿ ಸರ್ಕಾರ ರೈತರಿಗೆ ನಷ್ಟ ಪರಿಹಾರ ನೀಡಬೇಕು. ಮಧ್ಯವರ್ತಿಗಳಿಂದ ರೈತರಿಗೆ ವಂಚನೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಿವೃತ್ತ ನ್ಯಾಯಮೂರ್ತಿ ಎ. ಜೆ. ಸದಾಶಿವ, ‘ನಾನೂ ರೈತ ಕುಟುಂಬದಿಂದ ಬಂದವನು. ರೈತರ ಆತ್ಮಹತ್ಯೆಯಿಂದ ಬಹಳ ನೋವಾಗಿದೆ. ಕೃಷಿಯಲ್ಲಿ ಯಶಸ್ಸು ಗಳಿಸಿದ ರೈತರು, ಇತರೆ ರೈತರಿಗೆ ಮಾರ್ಗದರ್ಶನ ನೀಡಿ ಅವರನ್ನೂ ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

ಕೃಷಿಯಲ್ಲಿ ಸಾಧನೆ ಮಾಡಿದ 15 ರೈತರನ್ನು ಡೈರಿ ಡೇ ಐಸ್‌ ಕ್ರೀಂ ವತಿಯಿಂದ ಸನ್ಮಾನಿಸಿ, ₹ 10,000 ಚೆಕ್‌ಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.