ADVERTISEMENT

ಕಾರ್ಮಿಕರಿಂದ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 20:22 IST
Last Updated 13 ನವೆಂಬರ್ 2017, 20:22 IST
ಕಾರ್ಮಿಕರಿಂದ ಅಹೋರಾತ್ರಿ ಧರಣಿ
ಕಾರ್ಮಿಕರಿಂದ ಅಹೋರಾತ್ರಿ ಧರಣಿ   

ಬೆಂಗಳೂರು: ಕಗ್ಗಲೀಪುರದ ಸಾಯಿ ಎಕ್ಸ್‌ಫೋರ್ಟ್ ಗಾರ್ಮೆಂಟ್ಸ್ ಕಾರ್ಖಾನೆ ಸ್ಥಳಾಂತರ ಮಾಡದಂತೆ ಆಗ್ರಹಿಸಿ ನೂರಾರು ಮಹಿಳಾ ಕಾರ್ಮಿಕರು ಕಾರ್ಖಾನೆಯ ಮುಂದೆ ಸೋಮವಾರ ರಾತ್ರಿ ಅಹೋರಾತ್ರಿ ಧರಣಿ ಆರಂಭಿಸಿದರು.

ರಾಮನಗರದ ಸುತ್ತಮುತ್ತಲ ಗ್ರಾಮಗಳಿಂದ ಇಲ್ಲಿಗೆ ಕೆಲಸಕ್ಕೆ ಬರುತ್ತಿದ್ದೇವೆ. ಆರು ವರ್ಷಗಳಿಂದ ಇದೇ ಕಾರ್ಖಾನೆಯಲ್ಲಿ ದುಡಿಯುತ್ತಿದ್ದೇವೆ. ಕಾರ್ಖಾನೆಯನ್ನು ಬೊಮ್ಮನಹಳ್ಳಿಗೆ ಸ್ಥಳಾಂತರ ಮಾಡುವುದಾಗಿ ಆಡಳಿತ ಮಂಡಳಿ ಇತ್ತೀಚೆಗೆ ತಿಳಿಸಿದೆ. ಇದರಿಂದ ಓಡಾಟಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಕಾರ್ಖಾನೆ ಸ್ಥಳಾಂತರ ಮಾಡಬಾರದು ಎಂದು ಪ್ರತಿಭಟನಾನಿರತ ಕಾರ್ಮಿಕರು ಆಗ್ರಹಿಸಿದರು.

ಕಾರ್ಖಾನೆ ಸ್ಥಗಿತಗೊಳಿಸುವುದಾಗಿ ಆಡಳಿತ ಮಂಡಳಿ ಈ ಹಿಂದೆ ಹೇಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಮಾಡಿದ್ದೆವು. ಒಂದು ವೇಳೆ ಕಾರ್ಖಾನೆ ಮುಚ್ಚುವುದಾದರೆ ಕಾರ್ಮಿಕರಿಗೆ ಬೇರೆ ಕಡೆ ಕೆಲಸ ಕೊಡಿಸುವಂತೆ ಹಾಗೂ ಪರಿಹಾರ ನೀಡುವಂತೆ ಒತ್ತಾಯಿಸಿದ್ದೆವು. ಇದಕ್ಕೆ ಒಪ್ಪದ ಆಡಳಿತ ಮಂಡಳಿ ಕಾರ್ಖಾನೆ ಸ್ಥಳಾಂತರದ ನಾಟಕವಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

ವಾಹನ ಸೌಲಭ್ಯ ಹಿಂಪಡೆತ: ಹಿಂದೆಯಿಂದಲೂ ವಾಹನ ಸೌಲಭ್ಯ ಕಲ್ಪಿಸಿದ್ದ ಆಡಳಿತ ಮಂಡಳಿ ವಾಹನ ಸೌಲಭ್ಯ ನೀಡುವುದನ್ನೂ ಸ್ಥಗಿತಗೊಳಿಸುತ್ತೇವೆ ಎನ್ನುತ್ತಿದೆ. ವಾಹನ ಸೌಲಭ್ಯವಿಲ್ಲದಿದ್ದರೆ ಕೆಲಸಕ್ಕೆ ಬರಲು ಕಷ್ಟವಾಗುತ್ತಿದೆ. ಕಾರ್ಖಾನೆ ಬೊಮ್ಮನಹಳ್ಳಿಗೆ ಸ್ಥಳಾಂತರವಾದರೆ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಅವರು ಅಳಲು ತೋಡಿಕೊಂಡರು.

* ಆಡಳಿತ ಮಂಡಳಿಯು ನಮ್ಮೊಂದಿಗೆ ಮಾತುಕತೆಗೆ ಬರಬೇಕು. ಅಲ್ಲಿಯ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ಮಾತುಕತೆ ಸಾಧ್ಯವಾಗದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ.

–ಆರ್.ಪ್ರತಿಭಾ, ಗಾರ್ಮೆಂಟ್ಸ್ ಮತ್ತು ಟೆಕ್ಸ್‌ಟೈಲ್ಸ್ ಯೂನಿಯನ್ ಸಂಘದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.